ಹೊಸಪೇಟೆ:
ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆ ಹಿತಕ್ಕಾಗಿ ಪುನಃ ಬಿಜೆಪಿಗೆ ಸೇರಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗುವೆ ಎಂದು ಬಿಜೆಪಿ ಸೇರ್ಪಡೆಗೊಂಡಿರುವ ಆನಂದ್ ಸಿಂಗ್ ತಿಳಿಸಿದರು. ನಗರದ ಪಟೇಲ್ ನಗರದ ಕಚೇರಿಯಲ್ಲಿ ಬೆಂಬಲಿಗರ ಸಭೆ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಈ ಹಿಂದೆಯೂ ನಾನು ಬಿಜೆಪಿಯಿಂದ ಕಾಂಗ್ರೆಸ್ಗೆ ಸ್ವಾರ್ಥಕ್ಕಾಗಿ ಹೋಗಿದ್ದಿಲ್ಲ, ಈಗಲೂ ನಾನು ಕ್ಷೇತ್ರದ ಜನರ ಹಾಗೂ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಗೆ ಸೇರಿರುವೆ, ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಹೇಳಿದರು.
ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಂದು ವೇಳೆ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವೆ ಎಂದರು. ಮರು ಚುನಾವಣೆಗೆ ಬಿಜೆಪಿ ಮುಖಂಡ ಹಾಗೂ ಶಾಸಕ ಶ್ರೀರಾಮುಲು ಹುಣಸೂರು ಕ್ಷೇತ್ರದ ಉಸ್ತುವಾರಿ ನೀಡಿದ್ದಾರೆ. ಈ ಬಗ್ಗೆ ಸಿಎಂ ಯಡಿಯೂರಪ್ಪರೊಂದಿಗೆ ಚರ್ಚಿಸಿದ್ದು ಅವರನ್ನು ಈ ಕ್ಷೇತ್ರಕ್ಕೂ ಉಸ್ತುವಾರಿ ಮಾಡುವಂತೆಯೂ ಮನವಿಮಾಡಿರುವೆ. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ರಾಮುಲು ರಾಜ್ಯ ಮಟ್ಟದ ಹಿರಿಯ ನಾಯಕರು ಅವರ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಮೂರು ಬಾರಿ ನನ್ನನ್ನು ಕ್ಷೇತ್ರದ ಜನರು ಆಯ್ಕೆಮಾಡಿದ್ದಾರೆ. ಕಳೆದ ಬಾರಿನ ತಪ್ಪುಗಳ ಬಗ್ಗೆ ಅರಿವಿಗೆ ಬಂದಿದ್ದು ಅದನ್ನು ಸರಿಪಡಿಸಿಕೊಳ್ಳುವೆ. ನಾಲ್ಕನೇ ಬಾರಿಯೂ ಗೆಲ್ಲುವ ವಿಶ್ವಾಸವಿದ್ದು ಅದು ಕ್ಷೇತ್ರದ ಮತದಾರರ ಕೈಯಲ್ಲಿದೆ. ಅವರು ಮನಸ್ಸುಮಾಡಿದರೆ ಮಾತ್ರ ಅದು ಸಾಧ್ಯ. ಕಳೆದ ಸಾರಿ ಲಕ್ಷ ಮತಗಳಿಗೂ ಅಧಿಕ ಅಂತರದಿಂದ ಗೆಲ್ಲುತ್ತೇನೆ ಎಂದಿದ್ದಿರಿ ಈ ಬಾರಿ ಎಷ್ಟು ಮತಗಳಿಂದ ಗೆಲ್ಲ ಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಎಷ್ಟು ಮತಗಳಿಂದ ಗೆಲ್ಲುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ, ಮತದಾರರೇನು ನನ್ನ ಜೇಬಿನಲ್ಲಿ ಇದ್ದಾರೇ ಎಂದು ಮರು ಪ್ರಶ್ನೆಹಾಕಿದರು.
ನಾಲ್ಕನೇ ಬಾರಿಯ ವಿಜಯವು ನನ್ನ ಕೈಯಲ್ಲಿಲ್ಲ, ಅದೇನಿದ್ದರೂ ಕ್ಷೇತ್ರದ ಮತದಾರರು ನಿರ್ಧಾರಿಸಲಿದ್ದಾರೆ. ಶೀಘ್ರದಲಿಯೇ ಡಿಸಿಎಂ ಗೋವಿಂದ ಕಾರಜೋಳ ಬರಲಿದ್ದು ಅವರೊಂದಿಗೆ ಚರ್ಚಿಸಿ ನಾಮಪತ್ರ ಸಲ್ಲಿಸಲಾಗುವುದು. ನ. 18ರಂದು ನಾಮಪತ್ರ ಸಲ್ಲಿಸುವ ಚಿಂತನೆ ಇದೆ ಎಂದರು.
ವಿಜಯನಗರ ಜಿಲ್ಲೆ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಜಿಲ್ಲೆ ರಚನೆಗೆ ಹಲವಾರು ಜನರ ಹೋರಾಟವಿದೆ. ಈ ಹಿಂದೆ ಸರ್ವ ಪಕ್ಷದ ಮುಖಂಡರ, ಸ್ವಾಮೀಜಿಗಳೊಂದಿಗೆ ನಿಯೋಗದೊಂದಿಗೆ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದೆ. ಸಿಎಂ ಸಹ ಸಕರಾತ್ಮಕವಾಗಿ ಸ್ಪಂದಿಸಿ ಅಂತಿಮ ಸಹಿ ಹಾಕುವುದೊಂದಿಗೆ ಬಾಕಿ ಇತ್ತು. ಆದರೆ ಸದ್ಯ ನಿಂತಿದೆ. ಮುಂದೇನು ಆಗುತ್ತದೆ ಎನ್ನುವುದು ಕಾದುನೋಡಬೇಕು ಎಂದರು.
ಈ ಹಿಂದೆ ನರಿ ತೊಳಗಳು ಇದ್ದವು, ಆಗ ಗೊತ್ತಿರದೆ ಎಡವಿದ್ದೆ, ಆದರೆ ಈಗ ಯಾರು ನರಿ, ತೊಳ ಎನ್ನುವುದು ಗೊತ್ತಾಗಿದ್ದು ಅವರಂತೆಯೇ ನಾನು ಮುಖವಾಡ ಹಾಕಿ ಸಾಗುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮುಖಂಡರಾದ ಸಂದೀಪ್ ಸಿಂಗ್, ಜೀವರತ್ನಂ, ಮೈಲಾರಲಿಂಗ ನಾಯಕ, ವಿಜಯೇಂದ್ರ, ಎಪಿಎಂಸಿ ಅಧ್ಯಕ್ಷ ಸೋಮಶೇಖರ್, ಮಹೇಂದ್ರ ಶಾನಬಾಗ್, ಅಪ್ಪಾರಾವ್ ಸಾನಬಾಳ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
