ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಹೊಣೆ ನನ್ನದು: ದೇವೇಗೌಡ

ತುಮಕೂರು

        ತುಮಕೂರು ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಹೊಣೆ ನನ್ನದು. ದಯವಿಟ್ಟು ನನ್ನ ಬಗೆಗಿನ ಯಾವುದೆ ಅಪಪ್ರಚಾರವನ್ನು ನಂಬಬೇಡಿ ಎಂದು ಮಾಜಿ ಪ್ರಧಾನಿ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಯ ಅಭ್ಯರ್ಥಿ ಎಚ್.ಡಿ.ದೇವೇಗೌಡರು ಮತದಾರರಲ್ಲಿ ಮನವಿ ಮಾಡಿದ್ದಾರೆ.

       ಅವರು ಶನಿವಾರ ಸಂಜೆ ನಗರದ ಕೇಂದ್ರ ಗ್ರಂಥಾಲಯದ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಕುರುಬ ಸಮಾವೇಶದಲ್ಲಿ ಮತಯಾಚಿಸಿ ಮಾತನಾಡಿದರು.

       ಚಿಕ್ಕನಾಯಕನಹಳ್ಳಿಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾನೆಂದು ಒಬ್ಬ ಯಾದವ ಹುಡುಗನಿಗೆ ಹೊಡೆದಿದ್ದಾರೆ. ಇದು ಕೂಡದು. ಜ.19ರಂದೇ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದೆ. ಆದರೆ ಎಲ್ಲರ ಒತ್ತಾಯಕ್ಕೆ ಕಟ್ಟುಬಿದ್ದು ಸ್ಪರ್ಧಿಸಬೇಕಾಯಿತು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. 1999ರಲ್ಲಿ ಜೆ.ಎಚ್.ಪಟೇಲ್ ಬಿಜೆಪಿಯೊಂದಿಗೆ ಹೋದಾಗ ನಾನು ಸಿದ್ದರಾಮಯ್ಯ ಇಬ್ಬರೆ ಹೋರಾಟ ಮಾಡಿ ಜೆಡಿಎಸ್ ಪಕ್ಷವನ್ನು ಕಟ್ಟಬೇಕಾಯಿತು.

         ಜನತೆಗಾಗಿ ನನ್ನ ಹೋರಾಟ ನಿಲ್ಲುವುದಿಲ್ಲ. ಮಹಾತ್ಮಗಾಂಧೀಜಿ ಉರಿಯುವ ಬಿಸಿಲಲ್ಲಿ ಬೆನ್ನುಗೂನಿನ ಕರಿಯ ಮನುಷ್ಯ ಕರಟ ನೆಲವನ್ನು ಕೆರೆಯುತ್ತಿದ್ದಾನೆ. ಅವನಿಗೆ ಏನಾದರು ಸಹಾಯ ಮಾಡಿ ಎಂದು ಹೇಳಿದ್ದರು. ಸಭಿಕರಿಗೆ ಇದು ಬಿಸಿಲೇ ಎಂದು ಪ್ರಶ್ನಿಸಿ ನಾವು ಬಿಸಿಲು ಮಳೆ ಚಳಿಎನ್ನದೆ ಕಾಯಕವೇ ಕೈಲಾಸ ಎಂದು ದುಡಿಯುವ ಜನ.

        ನನ್ನ ತಾಯಿಗೆ ರಾಗಿ ಬೀಸಿ ಕೊಟ್ಟಿದ್ದೇನೆ. ನಮ್ಮ ತಂದೆಯ ಮೊದಲ ಹೆಂಡತಿ ಮತ್ತು ಮೂರು ಜನ ಗಂಡುಮಕ್ಕಳು 10 ದಿನದ ಕಾಲಾವಧಿಯಲ್ಲಿ ಸತ್ತಾಗ ತಂದೆಯೊಬ್ಬರೆ ಹೆಗಲ ಮೇಲೆ ಸ್ಮಶಾನಕ್ಕೆ ಸಾಗಿಸಿ ಮಣ್ಣು ಮುಚ್ಚಿದ್ದಾರೆ. ಬಂಧುಗಳು ದೂರದಲ್ಲಿ ನಿಂತು ನೋಡುತ್ತಿದ್ದರಂತೆ. ಪುನಃ 2ನೇ ಮದುವೆಯಾದಾಗ ಗಂಡು ಮಗು ಹುಟ್ಟುತ್ತಾನೆ ಎಂದು ಹೇಳಿದ್ದರಂತೆ.

         ನನ್ನ ತಂದೆ ನಾನು ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯಾಗುತ್ತೇನೆಂದು ಕನಸು ಕಂಡಿರಲಿಲ್ಲ. ನನ್ನ ಆತ್ಮಕಥೆಯಲ್ಲಿ ಎಲ್ಲವನ್ನು ವಿವರವಾಗಿ ದಾಖಲಿಸಿದ್ದೇನೆ. ಈಗ ಬಿಡುಗಡೆ ಮಾಡಿದರೆ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಡುಗಡೆ ಮಾಡಿದ್ದಾನೆ ಎಂಬ ಅಪವಾದ ಬೇಡವೆಂದು ತಡೆಹಿಡಿದಿದ್ದೇನೆ. ನನ್ನ ಎಲ್ಲಾ ನೋವು ನಲಿವು ಹೋರಾಟವನ್ನು ಸಮಗ್ರವಾಗಿ ಅದರಲ್ಲಿ ದಾಖಲಿಸಿದ್ದೇನೆ ಎಂದರು.

        ಅರಸು ಅಂತಹ ನಾಯಕ ಮತ್ತೊಮ್ಮೆ ಹುಟ್ಟಿ ಬರುವುದಿಲ್ಲ. ಇಂದಿನ ಹುಡುಗರಿಗೆ ಗೊತ್ತಿಲ್ಲ. ಅರಸು ನನ್ನನ್ನು ನೀವು ಸಿಎಂ ಆಗುವುದಿಲ್ಲ. ನನ್ನ ಜೊತೆ ಬಂದುಬಿಡಿ ಎನ್ನುತ್ತಿದ್ದರು. ಸಮಾಜವಾದಿ ಪಕ್ಷದಲ್ಲಿದ್ದ ಕಾಗೋಡು ತಿಮ್ಮಪ್ಪ ನನ್ನನ್ನು ಒಂದು ಹೆಗಲ ಮೇಲೆ ಹಿಂದುಳಿದ ವರ್ಗ, ಮತ್ತೊಂದು ಹೆಗಲಮೇಲೆ ದಲಿತರನ್ನು ಕೂರಿಸಿಕೊಂಡು ದಡ ಮುಟ್ಟಿಸಿ ಎಂದು ತಮಾಷೆ ಮಾಡುತ್ತಿದ್ದರು.

           1968ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ಕೆಲವರು ನಾನು ಮುಖ್ಯಮಂತ್ರಿಯಾಗುತ್ತೇನೆಂದು ಭಾವಿಸಿದ್ದರು. ಎಲ್ಲವೂ ವಿಧಿಯಾಟ ಇಲ್ಲಿಗೆ ತಂದು ಮುಟ್ಟಿಸಿದೆ. 1990ರಲ್ಲಿ ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ದೇವಿಲಾಲ್ ಉಪಪ್ರಧಾನಿಯಾಗಿದ್ದರು. ಆಗ ನಾನು ಕರ್ನಾಟಕದಲ್ಲಿ ಹೆಗಡೆಯಿಂದ ಬೇರೆಯಾಗಿ ಪಕ್ಷ ಕಟ್ಟಿ ಸೋತು ಸುಣ್ಣವಾಗಿದ್ದೆ. ಆಗ ದೇವಿಲಾಲ್ ಚಂದ್ರಶೇಖರ್ ಬಳಿ ದೇವೇಗೌಡರನ್ನು ಹರಿಯಾಣದಿಂದ ರಾಜ್ಯಸಭೆಗೆ ಆಯ್ಕೆಮಾಡುತ್ತೇನೆ. ನೀವು ಅವರನ್ನು ನಿಮ್ಮ ಸಂಪುಟಕ್ಕೆ ತೆಗೆದುಕೊಂಡು ಮಂತ್ರಿ ಮಾಡಿ ಎಂದು ಹೇಳಿದ್ದಾರೆ. ಆಗ ಚಂದ್ರಶೇಖರ್ ನನ್ನನ್ನು ಕರೆದು ಕೇಳಿದರು. ನಾನು ಸೋತಿದ್ದೇನೆ ಗೆದ್ದವರ ಮುಂದೆ ಬಂದು ಕೂರಲಾರೆ ಎಂದು ಕೇಂದ್ರ ಮಂತ್ರಿಸ್ಥಾನವನ್ನು ನಿರಾಕರಿಸಿದ್ದೆ ಎಂದರು.

          ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ಮೋದಿ ಹಸಿ ಸುಳ್ಳು ಹೇಳಿ ಜನತೆಯನ್ನು ನಂಬಿಸುತ್ತಿದ್ದಾರೆ. ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸುಳ್ಳು ಬಹಳ ದಿನ ಉಳಿಯುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಮುಸ್ಲಿಂ, ಕ್ರಿಶ್ಚಿಯನ್ನ ಮುಂತಾದವರನ್ನು ದೂರ ಇಟ್ಟಿದ್ದಾರೆ. 10 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿ ಎಚ್‍ಎಂಟಿ ಬಾಗಿಲು ಮುಚ್ಚಿಸಿದ್ದಾರೆ. ಮೋದಿ ಮತ್ತು ಬಸವರಾಜುರವರನ್ನು ನೇರವಾಗಿ ಕೇಳುತ್ತೇನೆ ಇದು ಸರಿಯೇ? ಎಂದು ಪ್ರಶ್ನಿಸಿದರು.

          ಕುರುಬ ಸಮಾಜ ಹಿರಿಯರಾದ ದೇವೇಗೌಡರಿಗೆ ಋಣಿಯಾಗಿರಬೇಕು. ಅವರನ್ನು ಬೇರೆ ಬೇರೆ ಸಂದರ್ಭದಲ್ಲಿ ಟೀಕಿಸಿರಬಹುದು. ದೇವೇಗೌಡರು ದೇವರಾಜು ಅರಸು ರೀತಿ ರಾಜ್ಯದಲ್ಲಿ ಕೆಲಸ ಮಾಡಿದ್ದಾರೆ. ಸಿದ್ದು ಈ ಎತ್ತರ ಬೆಳೆಯಲು ದೇವೇಗೌಡರ ಆಶೀರ್ವಾದವೇ ಮುಖ್ಯವೆಂದರೆ ಯಾರೂ ಅಲ್ಲಗಳೆಯಲಾಗದು.

          ಈ ವಿಶ್ವನಾಥ್ ಇನ್ನೂ ನನಗೆ ರಾಜಕೀಯ ಬೇಡ ಸಾಕು ಎಂಬ ಹಂತ ತಲುಪಿದಾಗ ನನ್ನ ರಾಜಕೀಯ ಗುರು ಅರಸರು ಪ್ರತಿನಿಧಿಸುತ್ತಿದ್ದ ಹುಣಸೂರು ಕ್ಷೇತ್ರದ ಟಿಕೆಟ್ ನೀಡಿ ಅಲ್ಲಿ ಬಂದು ಪ್ರಚಾರ ಮಾಡಿ ಗೆಲ್ಲಿಸಿದ್ದಲ್ಲದೆ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ನಾಗಿಸಿದ್ದಾರೆ. ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ದೇವೇಗೌಡರನ್ನು ಮಂತ್ರಿಮಂಡಲಕ್ಕೆ ಸೇರಲು ಆಹ್ವಾನಿಸಿದ್ದರು.

        ಅದನ್ನು ನಿರಾಕರಿಸಿದ ಗೌಡರು ವಾಲ್ಮೀಕಿ ಜನಾಂಗವನ್ನು ಎಸ್‍ಟಿಗೆ ಸೇರಿಸಿ ಎಂದು ಚಂದ್ರಶೇಖರರನ್ನು ಒತ್ತಾಯಿಸಿ ವಾಲ್ಮೀಕ ಜನಾಂಗ ಎಸ್‍ಟಿಗೆ ಸೇರಲು ಕಾರಣಕರ್ತರಾದರು. ಇಂದು ಯಾವುದೇ ಪಕ್ಷದಿಂದ ಎಸ್‍ಟಿ ಜನಾಂಗ 16 ಎಂಎಲ್‍ಎ ಗಳು , 3 ಜನ ಎಂಪಿಗಳು ಇದ್ದರೆ ಅದಕ್ಕೆ ಕಾರಣ ದೇವೇಗೌಡರು. ಸೂರ್ಯಚಂದ್ರರಿರುವ ತನಕ ಮರೆಯುವಂತಿಲ್ಲ ಎಂದರು.

          ಈ ಸಂದರ್ಭದಲ್ಲಿ ಮಾಜಿ ಶಾಸಕ ರಫೀಕ್ ಅಹಮದ್, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್, ನಿಕೇತ್‍ರಾಜ್ ಮತ್ತು ದೊರೈರಾಜ್ ಮಾತನಾಡಿದರು. ವೇದಿಕೆಯಲ್ಲಿ ಶಾಸಕರುಗಳಾದ ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಮಹಾಪೌರರಾದ ಲಲಿತಾ ರವೀಶ್, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ಗೋವಿಂದರಾಜು ಮತ್ತು ತಾಲ್ಲೂಕಿನ ಕುರುಬ ಸಮಾಜದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap