ದಾವಣಗೆರೆ:
ನಾನು ಎಲ್ಲೂ ಸಹ ವೀರಶೈವ-ಲಿಂಗಾಯತ ಪದ ಬಳಸಿಲ್ಲ. ನಾನು ಯಾವುದೇ ಅಕ್ಷಮ್ಯ ಅಪರಾಧ ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಅವಶ್ಯಕತೆಯೆ ಇಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಎಲ್ಲೂ ಕೂಡ ವೀರಶೈವ-ಲಿಂಗಾಯತ ಪದ ಬಳಸಿಲ್ಲ. ಆ ಸಮುದಾಯಗಳ ಬಗ್ಗೆ ಅವಹೇಳನ ಮಾಡಿಲ್ಲ. ವೈರಲ್ ಆಗಿರುವ ವಿಡಿಯೋ ತುಣಿಕಿನಲ್ಲಿ ವೀರಶೈವ-ಲಿಂಗಾಯತ ಪದಗಳಿದ್ದರೆ, ನಾನು ಇಲ್ಲಿಯೇ ತಲೆ ಬಾಗಿ ಹೋಗುತ್ತೇನೆ. ಆದರೆ, ನೇರ್ಲಿಗೆಯಲ್ಲಿ ನಡೆದ ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸದೇ, ಕುಲಂಕೂಷವಾಗಿ ವಿಶ್ಲೇಷಣೆ ಮಾಡದೆಯೇ, ಪೂರ್ವನಿಯೋಹಿತವಾಗಿ ಕಪೋಲಕಲ್ಪಿತವಾಗಿ ತಮ್ಮ ವಿರುದ್ಧ ಕೆಲವರು ಆರೋಪ ಮಾಡುವ ಮೂಲಕ ರಾಜಕೀಯ ಷಡ್ಯಂತ್ರ ನಡೆಸಿದ್ದು, ಇದೆಲ್ಲಾ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮೂರಾದ ನೇರ್ಲಿಗೆ ಗ್ರಾಮಕ್ಕೆ ಮತದಾನ ಮಾಡಲು ಹೋದಾಗ, ಒ.ಎಸ್.ಸಂತೋಷ್ ಮತ್ತಿತರರು ಚೌಕೀದಾರ್ ಎಂಬುದಾಗಿ ಘೋಷಣೆ ಕೂಗುವ ಮೂಲಕ ವಾತಾವರಣ ಕೆಡಿಸಲು ನೋಡುತ್ತಿದ್ದರು. ಈ ಸಂದರ್ಭದಲ್ಲಿ ತಾವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಈ ಒಡ್ಡ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೇಳಿದರೆ, ಕೇಳಿಬಿಡಬೇಕೆ ಎಂಬುದಾಗಿ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ.
ಈ ಘಟನೆಯೇ ಎಲ್ಲಾ ಬೆಳವಣಿಗೆಗೆ ಕಾರಣವಾಗಿದ್ದು, ನಾನು ಎಲ್ಲೂ ಸಹ ವೀರಶೈವ-ಲಿಂಗಾಯತ ಪದ ಬಳಸಿಲ್ಲ. ಈಶ್ವರ, ಶಿವ ಕೇವಲ ಕೆಲವರ ಸ್ವತ್ತಲ್ಲ. ಎಲ್ಲರಿಗೂ ಸೇರಿದವರಾಗಿದ್ದಾರೆ. ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡಿಸಬೇಡಿ, ಈ ಬಾರಿ ಹಿಂದುಳಿದ ಸಮುದಾಯದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಕೋರಿದ್ದೆ. ಆದರೆ, ಈ ಸಂತೋಷ್ ಎಂಬ ಯುವಕ ಅದನ್ನು ಚಿತ್ರೀಕರಿಸಿಕೊಂಡು ವೈರಲ್ ಮಾಡಿದ್ದು, ಆತನ ವಿರುದ್ಧ ಸೈಬರ್ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ ಎಂದರು.
ಇನ್ನೂ ಆ ವಿಡಿಯೋದಲ್ಲಿ ಸಂಗಪ್ಪ ಎಂಬ ವ್ಯಕ್ತಿಯ ಹೆಸರಿದ್ದು, ಆ ಸಂಗಪ್ಪ ರಾಜಕೀಯ ಹಾಗೂ ಗುತ್ತಿಗೆಯ ವಿಚಾರದಲ್ಲಿ ನಮ್ಮ ಮಾವನರ ಶಿಷ್ಯ. ನನ್ನ ಸ್ನೇಹಿತನೂ ಹೌದು. ಆದರೆ, ಈತ ಅಭ್ಯರ್ಥಿಯೊಬ್ಬರ ಪರವಾಗಿ ಹಣ ಹಂಚುತ್ತಿದ್ದ. ಹೀಗಾಗಿ ಅವರ ಹೆಸರು ಪ್ರಸ್ತಾಪವಾಗಿದೆ. ಅಲ್ಲದೇ, ನಾನೆಲ್ಲೂ ಸಹ ಸಾವಿರಾರು ವರ್ಷಗಳ ಇತಿಹಾಸವಿರುವ ಜಾತಿ, ಜನಾಂಗ ಎಂಬ ಪದವನ್ನು ಬಳಕೆಯೇ ಮಾಡಿಲ್ಲ. ಆದರೆ, ಹೋರಾಟದ ಅರ್ಥವೇ ಗೊತ್ತಿರದ ಕೆಲ ನಕಲಿ ಹೋರಾಟಗಾರರು, ಯಾವುದೋ ಒಂದು ದುರುದ್ದೇಶದಿಂದ ನನ್ನ ವಿರುದ್ಧ ಹೋರಾಟ ನಡೆಸಿದ್ದಾರೆಂದು ಆರೋಪಿಸಿದರು.
ಸ್ವಾತಂತ್ರ್ಯ ಬಂದ ನಂತರ ಅಷ್ಟು ವರ್ಷಗಳಾದರೂ ಅಂಬೇಡ್ಕರ್ ಬಗ್ಗೆ ಸಹನಭೂತಿಯೇ ಹೊಂದಿರದವರು, ಇಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದು ತಮಗೆ ಸಾಕಷ್ಟು ಖುಷಿ ತಂದಿದೆ. ಇದೇ ಅಂಬೇಡ್ಕರ್ ಪ್ರತಿಮೆಯನ್ನು ಬಿಜೆಪಿ ಅಭ್ಯರ್ಥಿಯೊಬ್ಬ ಪುಡಿ, ಪುಡಿ ಮಾಡಬೇಕು. ಕೇಂದ್ರ ಸಚಿವನೊಬ್ಬ ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸಲಿಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ. ಎಂದಿದ್ದಾಗ ಇವತ್ತು ಪ್ರತಿಭಟನೆ ಮಾಡಿದ ಹೋರಾಟಗಾರರು ಎಲ್ಲಿಗೆ ಹೋಗಿದ್ದರು? ಎಂದು ಪ್ರಶ್ನಿಸಿದರು.
ಹಿಂದುಳಿದ ಸಮುದಾಯದ ಮಂಜಪ್ಪನವರು ಚುನಾವಣೆಗೆ ಬಂದಾಗ, ಈ ಎಲ್ಲಾ ಗೊಂದಲ ಸೃಷ್ಟಿಸುವವರು ಜಿ.ಎಂ.ಸಿದ್ದೇಶ್ವರ್, ಎಸ್.ಎಸ್.ಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಇಂತಹದನ್ನು ಸೃಷ್ಟಿಸುವುದಿಲ್ಲ ಎಂದು ಪ್ರಶ್ನಿಸಿದ ಅವರು, ಒಮ್ಮೆ ನಮ್ಮ ಬಾವನರು ಗ್ರಾಮ ಪಂಚಾಯತ್ ಚುನಾವಣೆಗೆ ನಿಂತಾಗ, ಆ ಒಡ್ಡರನ್ನು ಮುಂದುವರೆಯಲು ಬಿಡಬೇಡಿ ಎಂಬುದಲ್ಲದೇ, ಅತೀ ಕೀಳು ಮಟ್ಟದ ಪದ ಪ್ರಯೋಗಿಸಿದ್ದರು. ಈ ಕೊರಗಿನಲ್ಲಿಯೇ ನಮ್ಮ ಭಾವ ಪ್ರಾಣ ಬಿಟ್ಟರು, ಈಗ ನನ್ನನ್ನು ಮಾನಸಿಕವಾಗಿ ದುರ್ಬಲ ಗೊಳಿಸಲು ಬಂದಿದ್ದೀರಾ? ನಿಮ್ಮ ಗೊಡ್ಡು ಬೆದರಿಕೆಗೆಲ್ಲಾ ನಾನು ಹೆದರಲ್ಲ ಎಂದು ಎಚ್ಚರಿಸಿದರು.
ಹಿಂದೆ ಹೆಬ್ಬಾಳ್ ಬಸವರಾಜಪ್ಪನವರ ಕಾಲದಲ್ಲಿ ನಡೆದ ರಕ್ತ ಪಾಥ ನಡೆಸಲು ಪ್ರಯತ್ನಿಸುತ್ತಿದ್ದೀರಾ ಎಂಬುದಾಗಿ ನಾನು ಹೇಳಿದ್ದೇನೆ. ಆದರೆ, ಕೆಲ ಪೂರ್ವಗ್ರಹ ಪೀಡಿತರು ನಮ್ಮ ಸಮಾಜದವರು ರಸ್ತೆಗೆ ಬಂದರೆ, ರಕ್ತಪಾಥ ಆಗುತ್ತೆ ಎಂಬುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ.
ನನ್ನ ಭಾವನನ್ನು ಕೊಂದಗ ನಾನು ಇವರಂತೆ ಬೀದಿಗೆ ಬರಲಿಲ್ಲ. ಸಾಮರಸ್ಯದ ಉದ್ದೇಶದಿಂದ ಸುಮ್ಮನಿದ್ದೆ. 25 ವರ್ಷಗಳ ಹಿಂದೆ ದಲಿತರಿಗೆ ಬಾವಿಯ ನೀರು ಸಹ ಸೇದಲು ಬಿಡುತ್ತಿರಲಿಲ್ಲ. ಹೀಗೆ ಎಲ್ಲಾ ರೀತಿಯ ಶೋಷಣೆಯನ್ನು ಇಲ್ಲಿಯ ವರೆಗೂ ಸಹಿಸಿಕೊಂಡು ಬಂದಿದ್ದೇವೆ. ಇನ್ನೂ ಮುಂದೆ ಸ್ವಾಭಿಮಾನ ಬಿಟ್ಟು, ಜೀತದಾಳುಗಳಾಗಿ ಬದುಕುವುದಿಲ್ಲ ಎಂದು ಎಚ್ಚರಿಸಿದರು.
ವೀರಶೈವ-ಲಿಂಗಾಯತ ಒಳ ಪಂಗಡದಲ್ಲಿ ಹಲವಾರು ಪಂಗಡಗಳಿವೆ. ಆದರೆ, ಐಎಸ್‍ಐ ಮಾರ್ಕ್ ಹಾಕಿಕೊಂಡವರು ಇಂದಿನ ಪ್ರತಿಭಟನೆ ನಡೆಸಿದ್ದು, ಸಮಾಜವನ್ನು ಒಡೆದಾಳಲು ಪ್ರಯತ್ನಿಸುತ್ತಿದ್ದಾರೆ. ಅವರೊಬ್ಬರೇ ಒಂದಾದರೇ ನನ್ನ ಹಿಂದೆ ಕೆಲ ವೀರಶೈವ-ಲಿಂಗಾಯತ ಮುಖಂಡರು ಸೇರಿದಂತೆ, ಅಹಿಂದ ಸಮಾಜದವರಿದ್ದು ನಾವು ಸಹ ಸ್ವಾಭಿಮಾನಕ್ಕಾಗಿ ಹೋರಾಟ ನಡೆಸುತ್ತೇವೆ. ಸಧ್ಯದಲ್ಲಿಯೇ ಆ ದಿನಾಂಕ ಪ್ರಕಟಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಉಮಾ ವೆಂಕಟೇಶ್, ವಿವಿಧ ಸಮಾಜಗಳ ಮುಖಂಡರಾದ ಸೋಮಲಿಂಗಪ್ಪ, ಭೈರೇಶ್ ಬಿಳಚೋಡು, ಮಲ್ಲಿಕಾರ್ಜುನಪ್ಪ, ಶೌಕತ್ ಅಲಿ ಮವಿಲೇಹಾಳ್, ಪ್ರಭುದೇವ್, ಹೂವಿನಮಡು ಚಂದ್ರಪ್ಪ, ಎನ್.ಓಮಣ್ಣ, ಮಂಜುನಾಥ್, ಬೆಳಲಗೆರೆ ರಾಮಚಂದ್ರಪ್ಪ, ಗಣೇಶ್, ತ್ಯಾವಣಗಿ ಕುಬೇಂದ್ರಪ್ಪ, ಹನುಮೇಶ್, ಸಿದ್ದೇಶ್ ಪಾಮೇನಹಳ್ಳಿ, ಅಸಗೋಡು ಜಯಪ್ರಕಾಶ್, ಬಿ.ಸುನೀಲ್‍ಕುಮಾರ್, ರೇವಣಪ್ಪ, ಅಬ್ಬಿಗೆರೆ ಕೃಷ್ಣಪ್ಪ, ಶ್ರೀನಿವಾಸ್, ನಾಗರಾಜ್ ಎ.ಬಿ, ಬಸಾಪುರ ರವಿಚಂದ್ರ, ಗಿರೀಶ್ ಒಡೆಯರ್ ಮತ್ತಿತರರು ಹಾಜರಿದ್ದರು.