ದಾವಣಗೆರೆ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿಗರು ಇಂದು ಸಹ ತಮ್ಮನ್ನು ಸಂಪರ್ಕಿಸಿದ್ದು, ನಾನು ಯಾವುದೇ ಕಾರಣಕ್ಕೂ ಅವರ ಲಾಬಿ, ಆಮಿಷಕ್ಕೆ ಮಣಿಯುವುದಿಲ್ಲ. ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಹರಿಹರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಿಂದೆಯೂ ತಮ್ಮನ್ನು ಫೋನ್ ಮೂಲಕ ಸಂಪರ್ಕಿಸಿದ್ದರು. ಇಂದು ಬೆಳಿಗ್ಗೆ ಸಹ ಸಂಪರ್ಕಿಸಿದ್ದರು. ಆದರೆ, ನಾನು ಮಾತ್ರ ಯಾವುದೇ ಕಾರಣಕ್ಕೂ ಬಿಜೆಪಿ ಲಾಬಿಗಾಗಲೀ, ಆಮೀಷಕ್ಕಾಗಿ ಈ ವರೆಗೂ ಮಣಿದಿಲ್ಲ, ಮುಂದೆಯೂ ಮಣಿಯುವುದಿಲ್ಲ. ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲ್ಲ. ಪಕ್ಷವನ್ನು ತೊರೆಯುವುದಿಲ್ಲ ಎಂದು ಹೇಳಿದರು.
ಕೆಲವರು ಪದೇಪದೇ ಊಹಾಪೋಹ ಹರಡುತ್ತಿದ್ದಾರೆ. ಕಳೆದೊಂದು ವರ್ಷದಿಂದಲೂ ಬಿಜೆಪಿಯವರು ನನ್ನನ್ನು ಕರೆಯುತ್ತಲೇ ಇದ್ದಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಟವಾಗಿರುವಂತಹ ವ್ಯಕ್ತಿ. ನನ್ನನ್ನು ಗುರುತಿಸಿ ಪಕ್ಷ 2 ಬಾರಿ ಬಿ ಫಾರಂ ನೀಡಿದೆ. ಹೀಗಾಗಿ ನಾನೆಂದಿಗೂ ಪಕ್ಷಕ್ಕೆ ದ್ರೋಹ ಬಗೆಯಲ್ಲ. ಹರಿಹರ ಕ್ಷೇತ್ರದ 64 ಸಾವಿರ ಜನ ಮತ ಹಾಕಿದ್ದಾರೆ.
ಆ ಜನರ ಋಣ ತೀರಿಸಲು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತೇನೆ ಹೊರತು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನರ ನಿರೀಕ್ಷೆಯನ್ನು ಹುಸಿ ಮಾಡಲ್ಲ ಎಂದು ಹೇಳಿದರು.ಯಾವ ಮಂತ್ರಿ ಸ್ಥಾನ, ಯಾವ ದುಡ್ಡು ತಗೊಂಡು ನಾನೇನು ಮಾಡಲಿ. ಯಾವುದೇ ಕಾರಣಕ್ಕೂ ನಾನು ದುಡ್ಡಿನ ಹಿಂದೆ ಓಡುವ ಮನುಷ್ಯನಲ್ಲ.
ನನಗೆ ಜನರು ಬೇಕಷ್ಟೇ ಎಂದ ಶಾಸಕ ರಾಮಪ್ಪ, ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಮೂರು ದಿನಗಳ ಹಿಂದೆ ಕುಟುಂಬ ಸಮೇತ ಹೋಗಿದ್ದೇವು. ಪ್ರಕೃತಿ ಚಿಕಿತ್ಸೆ ಮುಗಿಸಿ, ಇಂದು ಬೆಳಿಗ್ಗೆಯಷ್ಟೇ ಹರಿಹರಕ್ಕೆ ಬಂದಿದ್ದೇನೆ. ಅಲ್ಲಿದ್ದುಕೊಂಡೇ ಸುದ್ದಿ ವಾಹಿನಿಗಳ ಮುಖಾಂತರ ರಾಜಕೀಯ ಬೆಳವಣಿಗೆ ಗಮನಿಸಿದ್ದು, ಈಗ ಬೆಂಗಳೂರಿಗೆ ಹೊರಟಿದ್ದೇನೆ ಎಂದರು.
ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಪಕ್ಷಕ್ಕೆ ಬರುವಂತೆ ಒಮ್ಮೆಯೂ ನನ್ನೊಂದಿಗೆ ಮಾತನಾಡಿಲ್ಲ. ಈಶ್ವರಪ್ಪ ಮುಖವನ್ನೂ ಸಹ ನಾನು ಈಚೆಗೆ ನೋಡಿಲ್ಲ. ಏಳೆಂಟು ತಿಂಗಳ ಹಿಂದೆ ನಮ್ಮ ಸಮಾಜದ ಕೆಲಸದ ವಿಚಾರದಲ್ಲಿ ಭೇಟಿಯಾಗಿದ್ದೆವಷ್ಟೇ. ನಾನು ಕಾಂಗ್ರೆಸ್ ಬಿಟ್ಟು ಬರೊಲ್ಲವೆಂಬುದು ಬಿಜೆಪಿಯವರಿಗೂ ಗೊತ್ತಿದೆ ಎಂದರು.