ಸೋಲು ಅನಿರೀಕ್ಷಿತ : ಹೆದರಿ ಓಡಿ ಹೋಗಲ್ಲ

ಚಿತ್ರದುರ್ಗ:

      ಚಿತ್ರದುರ್ಗ ಲೋಕಸಭಾ ಸದಸ್ಯನಾಗಿ ಐದು ವರ್ಷಗಳ ಕಾಲ ನಿರೀಕ್ಷೆಗೂ ಮೀರಿ ಕೆಲಸ ಮಾಡಿರುವ ಆತ್ಮವಿಶ್ವಾಸವಿದೆ. ಹಳ್ಳಿ ಹಳ್ಳಿಗಳಿಗೆ ಸುತ್ತಿ ಅನುದಾನ ತಲುಪಿಸುವಲ್ಲಿ ಸಫಲನಾಗಿದ್ದೇನೆ. ಆದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಸೋಲಿಗೆ ಬೆನ್ನು ತೋರಿಸಿ ಓಡಿ ಹೋಗಲ್ಲ. ಚಿತ್ರದುರ್ಗದಲ್ಲಿಯೇ ಮನೆ ಮಾಡಿ ಇಲ್ಲಿಯೇ ಇದ್ದು ಜನಸೇವೆ ಮಾಡುತ್ತೇನೆಂದು ಬಿ.ಎನ್.ಚಂದ್ರಪ್ಪ ವಾಗ್ದಾನ ಮಾಡಿದರು.

      ಕಾಂಗ್ರೆಸ್-ಜೆಡಿಎಸ್.ಮೈತ್ರಿ ಅಭ್ಯರ್ಥಿಯಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ವಿರುದ್ದ ಸ್ಪರ್ಧಿಸಿ ಪರಾಭವಗೊಂಡ ಬಿ.ಎನ್.ಚಂದ್ರಪ್ಪ ಶುಕ್ರವಾರ ಮಾತನಾಡುತ್ತ ಗೆದ್ದವರಿಗೂ ಗೆಲ್ಲುವ ಭರವಸೆಯಿರಲಿಲ್ಲ. ಕಾಂಗ್ರೆಸ್ ಪಕ್ಷದ ತತ್ವಸಿದ್ದಾಂತ, ನಾಯಕರುಗಳ ಭರವಸೆ ಮೇಲೆ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದೇವೆ.

      ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲಿಯೂ ಅಪಸ್ವರವಿರಲಿಲ್ಲ. ಎಲ್ಲರೂ ಗೆದ್ದಿದ್ದೇವೆ ಎಂದುಕೊಂಡಿದ್ದೆವು. ಜೆಡಿಎಸ್.ನವರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‍ನವರು ಜೆಡಿಎಸ್. ಪರವಾಗಿ ಕೆಲಸ ಮಾಡಿದ್ದಾರೆ. ಆದರೆ ಗುರುವಾರ ಹೊರ ಬಂದ ಲೋಕಸಭಾ ಚುನಾವಣೆ ಫಲಿತಾಂಶ ನೋಡಿದರೆ ದೇಶದ ಪರಿಸ್ಥಿತಿ ಏಕೆ ಹೀಗಾಯಿತು ಎನ್ನುವುದರ ಬಗ್ಗೆ ವರಿಷ್ಟರು ಚರ್ಚಿಸಿ ಆತ್ಮವಾಲೋಕನ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

      ಸೋಲಿನ ಆತಂಕ ನನಗೆ ಇಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇನೆ. ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಮತದಾರರು ನೀಡಿದ ತೀರ್ಪಿಗೆ ತಲೆಬಾಗುತ್ತೇನೆ. ಎಲ್ಲಾ ಜಾತಿ ಧರ್ಮದವರು ವಾಸಿಸುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಸಮಾಜಕ್ಕೆ ತೊಂದರೆಯಾದರೂ ಸಹಿಸುವುದಿಲ್ಲ. ಬಿಜೆಪಿ.ವಿರುದ್ದ ಪ್ರತಿಭಟನೆ ಮಾಡುತ್ತೇವೆ.

       ಚುನಾವಣೆಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರುಗಳಾದ ಡಿ.ಸುಧಾಕರ್, ಬಿ.ಜಿ.ಗೋವಿಂದಪ್ಪ ಹಾಗೂ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು, ಎಲ್ಲಾ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದೇನೆ. ಕಳಂಕರಹಿತವಾಗಿ ಕೆಲಸ ಮಾಡಿರುವ ನೆಮ್ಮದಿಯಿದೆ.

       ನಮ್ಮದು ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಕ್ಷ. ಸೋಲಿಗೆ ಹೆದರಿ ಓಡುವುದಿಲ್ಲ. ನಿರಂತರವಾಗಿ ಕ್ಷೇತ್ರದ ಜನರ ಜೊತೆಯಿರುತ್ತೇನೆ ಎಂದು ಭರವಸೆ ನೀಡಿದ ಬಿ.ಎನ್.ಚಂದ್ರಪ್ಪ ಚುನಾವಣೆಯಲ್ಲಿ ಹಗಲಿರುಳು ನನ್ನ ಪರವಾಗಿ ಶ್ರಮಿಸಿದ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳವರಿಗೆ ಹಾಗೂ ಮತದಾರರಿಗೆ ಕೃತಜ್ಞತೆಗಳನ್ನು ಸಮರ್ಪಿಸಿದರು.

      ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಹೆಚ್.ಆಂಜನೇಯ ಮಾತನಾಡಿ ಮೊದಲಿನಿಂದಲೂ ರಾಜ್ಯದ ಜನರ ಹಿತ ಕಾಯುವ ಕೆಲಸ ಮಾಡಿಕೊಂಡು ಬಂದಿರುವ ನಮಗೆ ಸೋಲು ಹೊಸದೇನಲ್ಲ. ಸರಳ, ಸಜ್ಜನಿಕೆಯ ಸಂಸದ ಎಂದೇ ಹೆಸರುವಾಸಿಯಾಗಿದ್ದ ಬಿ.ಎನ್.ಚಂದ್ರಪ್ಪ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಸೋಲು ಒಪ್ಪಿಕೊಂಡಿದ್ದೇವೆ. ಸಿಹಿ-ಕಹಿ ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದರು.

        ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್-ಜೆಡಿಎಸ್. ಮೈತ್ರಿ ಮಾಡಿಕೊಂಡಿರುವುದು ಸರಿ. ಆದರೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಫಲ ಯಾರಿಗೂ ಸಿಗಲಿಲ್ಲ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್.ಪಕ್ಷದ ವರಿಷ್ಟರು ಚರ್ಚಿಸಿ ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಸರಿಪಡಿಸಿಕೊಂಡು ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಗಟ್ಟಿಗೊಳಿಸಲಿ ಎಂದು ನಾಯಕರುಗಳಲ್ಲಿ ಮನವಿ ಮಾಡಿದರು.

        ಧರ್ಮ ಮತ್ತು ಯುದ್ದದ ಅಲೆ ಎಬ್ಬಿಸಿ ದೇಶದ ಜನರ ಭಾವನೆಯನ್ನು ಕೆರಳಿಸಿ ಮತದಾರರನ್ನು ವಶೀಕರಣ ಮಾಡಿಕೊಂಡು ನರೇಂದ್ರ ಮೋದಿ ಗೆದ್ದಿದ್ದಾರೆ. ಸರ್ವಾಧಿಕಾರಿಯಂತೆ ಮೆರೆದು ದೇಶದ ಜನರನ್ನು ನಿರ್ಲಕ್ಷಿಸಿದರೆ ಹೋರಾಟ ಮಾಡುತ್ತೇವೆ. ಬಂಡವಾಳ ಶಾಹಿಗಳ ಹಣದಿಂದ ಮಾರ್ಕೆಟಿಂಗ್ ಮಾಡಿಕೊಂಡು ಬಣ್ಣ ಬಣ್ಣದ ಮಾತುಗಳನ್ನಾಡುತ್ತ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ದೇಶದ ಜನರ ಕೋಮು ಭಾವನೆಯನ್ನು ಮೋದಿ ಏನಾದರೂ ಕೆರಳಿಸಿದರೆ ಅಂದಿನಿಂದಲೇ ಅವರ ಅವನತಿ ಶುರುವಾಗಲಿದೆ ಎಂದು ಹೇಳಿದರು
ಜಿಲ್ಲೆಯ ಹಿತ ಕಾಯುವಲ್ಲಿ ಅಭಿವೃದ್ದಿಗಾಗಿ ನಿರಂತರವಾಗಿ ಜನಪರ ಚಳುವಳಿಯಲ್ಲಿ ತೊಡಗುತ್ತೇವೆ.

        ರಾಜ್ಯದ ಜನರ ನೋವು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಮೈತ್ರಿ ಸರ್ಕಾರ ಉತ್ತಮ ಆಡಳಿತ ನೀಡುವತ್ತ ಕಾರ್ಯಪ್ರವೃತ್ತವಾಗಲಿ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಆದರೆ ನಮ್ಮ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಸೋತಿದ್ದಾರೆ. ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿದ್ದಿಕೊಂಡು ಮುಂದೆ ಅಧಿಕಾರ ಹಿಡಿಯುತ್ತೇವೆ. ಹೊಳಲ್ಕೆರೆ, ಮೊಳಕಾಲ್ಮುರು, ಹಿರಿಯೂರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ ಎಂದರು.

        ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರುಗಳಾದ ಡಿ.ಸುಧಾಕರ್, ಎ.ವಿ.ಉಮಾಪತಿ, ಜಿ.ಪಂ.ಸದಸ್ಯ ಬಿ.ಯೋಗೇಶ್‍ಬಾಬು, ಜಿ.ಎಸ್.ಮಂಜುನಾಥ್, ಹುಮಮಲಿ ಷಣ್ಮುಖಪ್ಪ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link