ಹೊಸಪೇಟೆ :
ಭಾರಿ ಕುತೂಹಲ ಮೂಡಿಸಿದ್ದ ವಿಜಯನಗರ ಕ್ಷೇತ್ರ ನಿರೀಕ್ಷೆಯಂತೆ ಬಿಜೆಪಿಯ ಆನಂದಸಿಂಗ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ವೆಂಕಟರಾವ್ ಘೋರ್ಪಡೆ ವಿರುದ್ದ 30,207 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಬಿಜೆಪಿಯ ಆನಂದಸಿಂಗ್ 85,477ಮತ ಪಡೆದರೆ, ಕಾಂಗ್ರೆಸ್‍ನ ವೆಂಕಟರಾವ್ ಘೋರ್ಪಡೆ 55,352 ಮತಗಳನ್ನು ಪಡೆದು ಸಿಂಗ್ ವಿರುದ್ದ ಪರಾಭವಗೊಂಡಿದ್ದಾರೆ. ಒಟ್ಟಾರೆ 30,207 ಮತಗಳ ಅಂತರದಲ್ಲಿ ಸಿಂಗ್ ಗೆಲುವಿನ ನಗೆ ಬೀರಿದ್ದಾರೆ. ಇನ್ನುಳಿದಂತೆ ಪಕ್ಷೇತರ ಅಭ್ಯರ್ಥಿ ಕವಿರಾಜ ಅರಸ್ 3955, ಜೆಡಿಎಸ್‍ನ ಎಂ.ಎನ್.ನಬಿ 3885, ಎನ್‍ಸಿಪಿಯ ಮಮತಾ 431, ಕೆಆರ್‍ಎಸ್‍ನ ಪ.ಯ.ಗಣೇಶ 433, ಉತ್ತಮ ಪ್ರಜಾಕೀಯ ಪಕ್ಷ 430, ಪಕ್ಷೇತರ ಅಭ್ಯರ್ಥಿ ಆಲಿ ಹೊನ್ನೂರ ಅವರು 303, ಕೆ.ಉಮೇಶ 134, ಕಿಚಿಡಿ ಕೊಟ್ರೇಶ 793, ಕಂಡಕ್ಟರ್ ಪಂಪಾಪತಿ 261, ದೇವರಕೊಂಡಿ ಮಾರ್ಕಂಡಪ್ಪ ನೇಕಾರ್ 655, , ಸಿ.ಎಂ.ಮಂಜುನಾಥಸ್ವಾಮಿ 307 ಮತಗಳನ್ನು ಪಡೆದಿದ್ದಾರೆ. ನೋಟಾಗೆ 1821 ಮತಗಳು ಬಿದ್ದಿವೆ.
ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ದರ್ಶನ : ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆÀ ಆನಂದಸಿಂಗ್ ತಮ್ಮ ಕುಟುಂಬದ ಸದಸ್ಯರೊಂದಿಗೆ ತೆರಳಿ ಹಂಪಿಯ ಶ್ರೀ ವಿರುಪಾಕ್ಷೇಶ್ವರಸ್ವಾಮಿಯ ದರ್ಶನ ಪಡೆದರು.ನನ್ನ ಗೆಲುವಲ್ಲ, ವಿಜಯನಗರದ ಗೆಲುವು : ಇದು ನನ್ನ ಗೆಲುವಲ್ಲ, ವಿಜಯನಗರದ ಗೆಲುವು, ಕಾರ್ಯಕರ್ತರ ಗೆಲುವು ಎಂದು ವಿಜೇತ ಅಭ್ಯರ್ಥಿ ಆನಂದಸಿಂಗ್ ಹೇಳಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಮತ ಚಲಾಯಿಸಿದ್ದಾರೆ. ಹಾಗಾಗಿ ಈ ಗೆಲುವನ್ನು ವಿಜಯನಗರಕ್ಕೆ ಹಾಗು ಕಾರ್ಯಕರ್ತರಿಗೆ ಸಮರ್ಪಿಸುತ್ತೇನೆ ಎಂದರು.
ಚುನಾವಣೆಗೆ ನಿಲ್ಲಲ್ಲ :
ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಮುಂದಿನ ಬಾರಿ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಾಗ, ಮಾಧ್ಯಮದವರು “ನಿಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸುತ್ತೀರಾ ? ಎಂದು ಕೇಳಿದಾಗ, ಮುಂದೆಯೂ ನನ್ನ ಮಗ ಸಿದ್ದಾರ್ಥನೂ ಕೂಡ ಚುನಾವಣೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ, ವಿಜಯನಗರ ಜಿಲ್ಲೆ ಪಕ್ಕಾ :
ಸಚಿವ ಸ್ಥಾನದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ “ ಸಚಿವ ಸ್ಥಾನದ ಕುರಿತು ಈಗಲೇ ನಾನು ಏನು ಹೇಳಲಾರೆ. ಅದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಆದರೂ ಸಿಗುವ ಭರವಸೆ ಇದೆ. ಜೊತೆಗೆ ವಿಜಯನಗರ ಜಿಲ್ಲೆಗೆ ನನ್ನ ಮೊದಲ ಆದ್ಯತೆ. ಹೀಗಾಗಿ 2 ಬೇಡಿಕೆಗಳು ಈಡೇರುವ ಲಕ್ಷಣಗಳಿವೆ ಎಂದರು.
ಬಳಿಕ ರಾಣಿಪೇಟೆಯ ತಮ್ಮ ನಿವಾಸದಿಂದ ಅಪಾರ ಬೆಂಬಲಿಗರೊಂದಿಗೆ ರೋಟರಿ ವೃತ್ತ, ನಗರಸಭೆ, ತರಕಾರಿ ಮಾರುಕಟ್ಟೆ, ರಾಮಾ ಟಾಕೀಸ್ ವೃತ್ತ, ವಾಲ್ಮೀಕಿ ವೃತ್ತದವರೆಗೆ ಪಾದಯಾತ್ರೆಯ ಮೂಲಕ ವಿಜಯೋತ್ಸವ ಆಚರಿಸುತ್ತಾ ಸಾಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
