ಕೊಟ್ಟೂರು
ರಾಜ್ಯದಲ್ಲಿನ ಪ್ರತಿ ದೇವಸ್ಥಾನಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುತೇನೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಸಿ.ಪಿ. ಶೈಲಜಾ ತೀಳಿಸಿದರು
ಭಾನುವಾರ ಪಟ್ಟಣದ ಶ್ರೀಕೊಟ್ಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀಸ್ವಾಮಿ ದರ್ಶನ ಪಡೆದು ತರುವಾಯ ಕಚೇರಿಯ ಕಡತಗಳನ್ನು ಪರಿಶೀಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದರು.
ಗ್ರೇಡ್ ಎ ಮತ್ತು ಬಿ ದೇವಸ್ಥಾನಗಳಲ್ಲಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈವರೆಗೂ ದೇವಸ್ಥಾನ ನಿಧಿಯಿಂದಲೇ ವೇತನ ನೀಡಲಾಗುತ್ತಿತ್ತು ಆದರೆ ಈಗ ಕಾಯ್ದೆ ಬದಲಾಗಿರುವುದರಿಂದ ಎಲ್ಲ ಸಿಬ್ಬಂದಿಗಳಿಗೆ ಸೂಕ್ತ ವೇತನ ಕಲ್ಪಿಸುವ ಉದ್ದೇಶದಿಂದ ಎಲ್ಲ ದೇವಸ್ಥಾನಗಳ ಸಿಬ್ಬಂದಿ ವಿವರ ಪಡೆಯಲಾಗುತ್ತಿದೆ ಎಂದರು.
ಕೊಪ್ಪಳ ಜಿಲ್ಲೆಯ ಹುಲಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಹೊಸ ಕಟ್ಟಡ ನಿರ್ಮಾಣ ಯೋಜನೆ ಕುರಿತು ಮಾತನಾಡಿ, ಹಾಲಿ ದೇವಸ್ಥಾನ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೊಟ್ಟೂರೇಶ್ವರ ದೇವಸ್ಥಾನಕ್ಕೆ ಸೇರಿದ ಇಟ್ಟಗಿ ರಸ್ತೆಯಲ್ಲಿರುವ ಒಂದು ಎಕರೆಗೂ ಹೆಚ್ಚಿನ ಭೂಮಿಯಲ್ಲಿ ಕಲ್ಯಾಣ ಮಂಟಪ ನಿರ್ಮಿಸುವ ಮತ್ತು ದೇವಸ್ಥಾನದ ಮುಖ್ಯ ಬಾಗಿಲಿಗೆ ಬೆಳ್ಳಿ ಕವಚ ಅಳವಡಿಕೆಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಅದರ ಸಾಧಕ ಬಾಧಕ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಧಾರ್ಮಿಕ ಇಲಾಖೆ ಜಿಲ್ಲಾ ಸಹಾಯಕ ಆಯುಕ್ತ ಎಸ್.ಪಿ.ಬಿ.ಮಹೇಶ, ದೇವಸ್ಥಾನದ ಇಒ ಪ್ರಕಾಶ, ಧರ್ಮಕರ್ತ ಸಿಎಚ್ಎಂ ಗಂಗಾಧರ ಹಾಗೂ ಸಿಬ್ಬಂದಿಯವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ