ಜನರಿಂದ ನೀರಿಲ್ಲವೆನ್ನುವ ಕೂಗು ಬಾರದಂತೆ ಮುಂಜಾಗ್ರತೆವಹಿಸಲು ಅಧಿಕಾರಿಗಳಿಗೆ ಸೂಚನೆ

ತುಮಕೂರು

       ಬೇಸಿಗೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಜನರಿಂದ ನೀರಿಲ್ಲವೆನ್ನುವ ಕೂಗು ನನಗೆ ಬರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು.

        ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಬರ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಬರುವ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಜಿಲ್ಲೆಯ ಪ್ರತಿ ತಾಲೂಕಿಗೆ 1 ಕೋಟಿ ರೂ.ಗಳ ಅನುದಾನ ಅನುಮೋದನೆಯಾಗಿದೆ. ಈ ಅನುದಾನದಡಿ ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ 184 ಕಾಮಗಾರಿಗಳ ಪೈಕಿ 71 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

         ಸಭೆಗೆ ಬರುವಾಗ ನಿಖರ ಮಾಹಿತಿ ತರುವುದಿಲ್ಲ. ಕಳೆದೆರಡು ತಿಂಗಳಿಂದ ಹಲವಾರು ಬಾರಿ ಸೂಚನೆಗಳನ್ನು ನೀಡಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರಿಂದ ದೂರುಗಳು ಬಂದಲ್ಲಿ ನಾನು ಸಹಿಸುವುದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಸೂಚಿಸಿದರು.

         ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಪ್ರತೀ ತಾಲೂಕಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 50 ಲಕ್ಷ ರೂ. ಹಾಗೂ ಕಂದಾಯ ಇಲಾಖೆಯಿಂದ 25 ಲಕ್ಷ ರೂ. ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೊಂದು ವಾರದೊಳಗಾಗಿ ಕುಡಿಯುವ ನೀರಿನ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗ್ರಾಮವಾರು ಮಾಹಿತಿಯನ್ನು ತಮಗೆ ನೀಡಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದುರಸ್ತಿಯಲ್ಲಿರುವ ಕೊಳವೆಬಾವಿಗಳನ್ನು ವೈಯಕ್ತಿಕವಾಗಿ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಮಾಡಿ ಆಯಾ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು ವರದಿ ನೀಡಬೇಕು ಎಂದರು.

         ಕೊಳವೆ ಬಾವಿ ಕೆಟ್ಟು ಹೋಗಿ ಕುಡಿಯುವ ನೀರಿಗೆ ಜನರು ಪರದಾಡುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಕೆಟ್ಟುನಿಂತಿರುವ ಕೊಳವೆಬಾವಿಗಳ ದುರಸ್ತಿ ಕೈಗೊಳ್ಳಲು ಎಲ್ಲ ಪಂಚಾಯತಿಗಳಲ್ಲಿ 14ನೇ ಹಣಕಾಸು ಯೋಜನೆಯಡಿ 7 ಲಕ್ಷ ರೂ.ಗಳ ಅನುದಾನ ಲಭ್ಯವಿದ್ದು, ಯಾರಿಗೂ ಕಾಯದೇ ಆದ್ಯತೆ ಮೇಲೆ ಕ್ರಮ ಕೈಗೊಳ್ಳಬೇಕು. ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದ್ದು, ಫೆಬ್ರುವರಿ ಮಾಹೆಯೊಳಗಾಗಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

         ಜಿಲ್ಲೆಯ ಪಾವಗಡ ತಾಲೂಕಿನ ಜನರಿಂದ ನೀರಿನ ಸಮಸ್ಯೆ ಬಗ್ಗೆ ಪ್ರತೀದಿನ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಕೂಡಲೇ ಕಾರ್ಯತತ್ಪರರಾಗಬೇಕು. ಆರ್.ಓ ಪ್ಲಾಂಟ್‍ಗಳು ಜನವಸತಿಯಿಂದ ದೂರವಿರುವ ಕಡೆ ವಯೋವೃದ್ಧರು, ಮಹಿಳೆಯರು, ರೋಗಪೀಡಿತರ ಹಿತದೃಷ್ಟಿಯಿಂದ ಅವರ ಮನೆ ಬಳಿಯಲ್ಲೇ ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಪಾಲಿಕೆ ಆಯುಕ್ತ ಭೂಬಾಲನ್, ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link