ದಾವಣಗೆರೆ:
ನನ್ನ ಕಡೆ ಕೈ ತೋರಿಸಿದರೆ ಕೈಯನ್ನೇ ಕಟ್ ಮಾಡಿಬಿಡುತ್ತೇನೆ… ಹೀಗೆ ಪಾಲಿಕೆಯ ಬಿಜೆಪಿ ಸದಸ್ಯ ಡಿ.ಕೆ.ಕುಮಾರ್ ಅವರನ್ನು ಎಚ್ಚರಿಸಿದ್ದು, ಪಾಲಿಕೆಯ ಕಾಂಗ್ರೆಸ್ ಸದಸ್ಯ ಎಂ.ಹಾಲೇಶ್.
ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಬುಧವಾರ ನಡೆದ 2019-20ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿ ಮಂಡನಾ ಸಭೆಯಲ್ಲಿ ಸದಸ್ಯ ಡಿ.ಕೆ.ಕುಮಾರ್ ಮಾತನಾಡಿ, ಕಾಂಗ್ರೆಸ್ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯರೆಲ್ಲರೂ ಒಂದಾಗಿ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರಣ ಬಜೆಟ್ ಸಭೆಯು ಗೊಂದಲದ ಗೂಡಾಗಿ, ಕುಮಾರ್ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ಕೈ, ಕೈ ಮೀಲಾಯಿಸುವ ಹಂತವೂ ತಲುಪಿತು.
ಆಗ ಪಾಲಿಕೆಯ ಸಿಪಿಐ ಸದಸ್ಯ ಆವರಗೆರೆ ಉಮೇಶ್ ಮತ್ತಿತರರು ಮಧ್ಯ ಪ್ರವೇಶಿಸಿ, ಗಲಾಟೆ ತಣಿಸುವ ಸಂದರ್ಭದಲ್ಲಿ ಕುಮಾರ್, ಹಾಲೇಶ್ ಅವರ ಕಡೆ ಕೈ ತೋರಿಸಿ ಮಾತನಾಡಿದ ಸಂದರ್ಭದಲ್ಲಿ ಹಾಲೇಶ್ ನೀ… ನನ್ನ ಕಡೆ ಕೈ ತೋರಿಸಿ ಮಾತನಾಡಬೇಡ. ಕೈಯೇ ಕಟ್ ಮಾಡಿಬಿಡುತ್ತೇನೆ ಎಂದರು.
ಕೈ ಸದಸ್ಯರಿಗೆ ಕಾಳಜಿ ಇಲ್ಲ:
ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ.ಕುಮಾರ್, ಜನರ ಬಗ್ಗೆ ಇವರಿಗೆ ಈಗ ಕಾಳಜಿ ಬಂದಂತಿದೆ. ಕಳೆದ ಐದು ವರ್ಷದಿಂದಲೂ ಏನೂ ಮಾಡಲಿಲ್ಲ. ಈಗ ಫುಡ್ ಕೋರ್ಟ್ ಮಾಡ್ತಾವರಂತೆ. ನಾವು ಅಧಿಕಾರಕ್ಕೆ ಬಂದರೆ, ಒಂದೇ ತಿಂಗಳಲ್ಲಿ ಮಾಡ್ತಿವಿ. ಇಲ್ಲದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗ್ತಿವಿ ಎಂದರು.
ನಗರದಲ್ಲಿ ಎಲ್ಲಿ ನೋಡಿದರೂ ಧೂಳು ಇದೆ. ಧೂಳು ಮುಕ್ತ ನಗರವನ್ನಾಗಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆಯಲ್ಲಿ ಸಣ್ಣಪುಟ್ಟ ರಿಪೇರಿ ಬಂದು ಕೆಟ್ಟು ನಿಂತಿರುವ ವಾಹನಗಳನ್ನು ರಿಪೇರಿ ಮಾಡಿಸಿ ಕೆಲಸ ಮಾಡದೇ, ಹಾಗೆಯೇ ನಿಲ್ಲಿಸಿ ಹೊಸ ವಾಹನಗಳನ್ನು ಖರೀದಿಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಾಲುದಾರರು:
ಸದಸ್ಯರೊಬ್ಬರು ಮಾತನಾಡುವಾಗ ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದೇವೆ ಎಂಬುದಾಗಿ ಈಗ ತಾನೇ ಹೇಳಿದರು. ಆದರೆ, ಪಾಲಿಕೆಯ ಗುತ್ತಿಗೆದಾರರ ಜೊತೆಗೆ ಕಾಂಗ್ರೆಸ್‍ನವರು ಪಾಲುದಾರರಾಗಿದ್ದಾರೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದರು.
ಈ ವೇಳೆಯಲ್ಲಿ ಸದಸ್ಯ ಹಾಲೇಶ್ ಮಾತನಾಡಿ, ನಾವು ಸ್ವಚ್ಛ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದರು. ಇದಕ್ಕೆ ದನಿ ಗೂಡಿಸಿದ ಇನ್ನೋರ್ವ ಸದಸ್ಯ ದಿನೇಶ್ ಕೆ. ಶೆಟ್ಟಿ, ನಾವು ಭ್ರಷ್ಟಾಚಾರ ಮಾಡಿದ್ದನ್ನು ಸಾಬೀತು ಪಡಿಬೇಕೆಂದು ಪಟ್ಟು ಹಿಡಿದರು.
ಇವರಿಬ್ಬರ ಪ್ರತಿಕ್ರಿಯೆಯ ಮಧ್ಯೆಯೂ ಮಾತು ನಿಲ್ಲಿಸದ ಕುಮಾರ್, ಇಲ್ಲದವರು (ಬಡವರು) ಕಂದಾಯ ಕಟ್ಟದಿದ್ದರೆ, ಚಲಕಿ, ಹಾರಿ ತಗೆದುಕೊಂಡು ಹೋಗ್ತಿರಿ. ಆದರೆ, ಇದ್ದವರು (ಶ್ರೀಮಂತರು) ಎಷ್ಟೇ ಕಂದಾಯ ಬಾಕಿ ಉಳಿಸಿಕೊಂಡರೂ ಸುಮ್ಮನಿರ್ತೀರಿ ಎಂದರು.
ವಿಷಯಾಂತರ ಬೇಡ:
ಆಗ ಪಾಲಿಕೆ ಸದಸ್ಯ ದಿನೇಶ್ ಶೆಟ್ಟಿ ಮಾತನಾಡಿ, ಬಜೆಟ್ ಮೇಲೆ ಚರ್ಚೆ ಮಾಡಿ, ಅನಗತ್ಯವಾಗಿ ವಿಷಯಾಂತರ ಮಾಡಬೇಡ. ಐದು ವರ್ಷದಲ್ಲಿ ಯಾವ ಸಭೆಯಲ್ಲಿ ಏನನ್ನು ಮಾತನಾಡಬೇಕೆಂಬುದನ್ನು ಕಲಿತಿಲ್ಲವೇ ಎನ್ನುತ್ತಿದ್ದಂತೆ, ಕುಮಾರ್ ಮತ್ತೇ ಏರು ದನಿಯಲ್ಲಿ ಕಾಂಗ್ರೆಸ್ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಲು ಮುಂದಾದರು.
ಗಂಟೆ ಹೊಡೆಯೋಣ:
ಈ ವೇಳೆ ಹಾಲೇಶ್ ನಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಿದರು. ಆಗ ಕುಮಾರ್ ಹಾಗಾದರೆ, ಇವತ್ತು ಸಂಜೆ ದುಗ್ಗಮ್ಮನ ಗುಡಿಯಲ್ಲಿ ಗಂಟೆ ಹೊಡೆಯೋಣ ಬಾ ಎಂದು ನೇರ ಸವಾಲು ಎಸೆದರು. ಆಗ ಕುಮಾರ್ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ ಏರ್ಪಟ್ಟಿತ್ತು.
ಅಕ್ರಮ ಡೋರ್ ನಂಬರ್:
ಮತ್ತೂ ಮುಂದುವರೆದು ಮಾತನಾಡಿದ ಡಿ.ಕೆ.ಕುಮಾರ, ಕಾಂಗ್ರೆಸ್ ಸದಸ್ಯರು ಅಕ್ರಮ ಡೋರ್ ನಂಬರ್ ಕೊಡಿಸುವಲ್ಲಿ ನಿರತರಾಗಿದ್ದಾರೆ. ಅಕ್ರಮ ಡೋರ್ ನಂಬರ್‍ಗಳ ಫೈಲ್ ಅವರೆಲ್ಲರ ಮನೆಗಳಲ್ಲಿದೆ ಎಂದು ನೇರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಕುಮಾರ್ ಇದ್ದ ಟೇಬಲ್ ಬಳಿಗೆ ಬಂದ ಪಾಲಿಕೆ ಸದಸ್ಯೆ ಲಕ್ಷ್ಮೀದೇವಿ ಬಿ. ವೀರಣ್ಣ, ಬಾ.. ಯಾರ ಮನೆಯಲ್ಲಿ ಯಾವ ಫೈಲ್ ಇದೆ ತೋರಿಸು ಬಾ.. ಎಂದರು. ಈ ವೇಳೆಯಲ್ಲಿ ಪರಸ್ಪರ ವಾಗ್ವಾದ ನಡೆದು ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಆಗ ಹಾಲೇಶ್, ಏಯ್ ರೊಟ್ಟಿ ಊಟ ಮಾಡಿಸಿವಿ ತಿಂದು ಹೋಗು ಎಂದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಕುಮಾರ್, ನೀ ಹೋಗೊ, ನನಗೇನು ಹೇಳ್ತಿಯಾ? ಅಂದಾಗ ಹಾಲೇಶ್, ನೆಟ್ಟಗೆ ಮಾತನಾಡು ಅಂದರು. ಆಗ ಕುಮಾರ್ ಕಳ್ಳರನ್ನು ಕಳ್ಳರನ್ನದೇ ಮತ್ತೇನನ್ನಬೇಕೆಂದು ಪ್ರಶ್ನಿಸಿದರು.
ಮೇಯರ್ ಶೋಭಾ ಪಲ್ಲಾಗಟ್ಟೆ ಸಮಾಧಾನ ಪಡಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.ಆಗ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ಬಜೆಟ್ ಮೇಲೆ ಮಾತ್ರ ಚರ್ಚೆ ನಡೆಸಿ. ಈ ಎಲ್ಲಾ ವಿಷಯಗಳನ್ನು ಮುಂದೆ ನಡೆಯುವ ಸಾಮಾನ್ಯ ಸಭೆಯಲ್ಲಿ ಮಾತನಾಡಿ. ಅದು ಮಾಹಿತಿಯೊಂದಿಗೆ ಎಂದರು.
ಈ ವೇಳೆ ಮಾತನಾಡಿದ ಕುಮಾರ್ ನಾನು ಹಲವು ಬಾರಿ ಮಾಹಿತಿ ಕೇಳಿದರೂ ಮಾಹಿತಿ ಕೊಟ್ಟಿಲ್ಲ. ನನ್ನಂತಹ ಪಾಲಿಕೆ ಸದಸ್ಯನಿಗೆ ಎರಡೂ ತಿಂಗಳ ವರೆಗೂ ಮಾಹಿತಿ ಕೊಡದ ನಿಮ್ಮಿಂದ ಜನರಿಂದ ಯಾವ ನ್ಯಾಯ ಸಿಗಲು ಸಾಧ್ಯ ಎಂದರು.ಆಯುಕ್ತರು ಮಾತನಾಡಿ, ನೀವು ಹೀಗೆ ಅಸಂಬದ್ಧವಾಗಿ ಮಾತನಾಡಿದರೆ, ಧ್ವನಿಮತದ ಮೂಲಕ ಬಜೆಟ್ ಮಂಡನೆಗೆ ಅಂಗೀಕಾರ ಪಡೆದಿದೆ ಎಂಬುದಾಗಿ ಈ ಸಭೆಯನ್ನು ಮುಗಿಸುತ್ತೇವೆ ಎಂದರು. ಆಗ ಕುಮಾರ್ ಆಯುಕ್ತರು ಸಹ ಕಾಂಗ್ರೆಸ್ ಸದಸ್ಯರ ಪಾರ್ಟನರ್ ಆಗಿಬಿಟ್ಟಾವ್ರೆ ಎಂದು ಆರೋಪಿಸಿದರು.