ಬೆಂಗಳೂರು
ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ನಡೆದಿರುವ ಕ್ರಿಕೆಟ್ ಬೆಟ್ಟಿಂಗ್ ಮ್ಯಾಚ್‌ಫಿಕ್ಸಿಂಗ್ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಗರ ಪೊಲೀಸರಿಗೆ ಇ-ಮೇಲ್ ಮೂಲಕ ತಿಳಿಸಿದೆ ಮ್ಯಾಚ್‌ಫಿಕ್ಸಿಂಗ್ ತನಿಖೆ ನಡೆಸಿ ಆಟಗಾರರೂ ಸೇರಿದಂತೆ 8 ಮಂದಿಯನ್ನು ಬಂಧಿಸಿರುವ ಮಾಹಿತಿ ಪಡೆದಿರುವ ಐಸಿಸಿ, ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಇ-ಮೇಲ್ ಮೂಲಕ ಪತ್ರ ಬರೆದು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮಂಡಳಿ ಹೇಳಿದೆ.
ದುಬೈನಲ್ಲಿನ ಮಂಡಳಿಯ ಪತ್ರದಿಂದ ನಮ್ಮ ತನಿಖೆಗೆ ಬಲ ಪ್ರೋತ್ಸಾಹ ಸಿಕ್ಕಿದಂತಾಗಿದ್ದು ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ತಿಳಿಸಿದ್ದಾರೆ. ಮ್ಯಾಚ್‌ಫಿಕ್ಸಿಂಗ್ ತನಿಖೆಗೆ ಹಿರಿಯ ಕ್ರಿಕೆಟ್ ಆಟಗಾರರು, ಸಲಹೆ, ಮಾಹಿತಿಗಳನ್ನು ನೀಡಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಎಸ್‌ಇಎಯಿಂದಲೂ ಮಾಹಿತಿ ಪಡೆದುಕೊಂಡು ಅಗತ್ಯಬಿದ್ದರೆ ಬಿಸಿಸಿಐನ್ನು ಸಂಪರ್ಕಿಸಲಾಗುವುದು ಎಂದು ಹೇಳಿದರು.
ಕೆಪಿಎಲ್‌ನ ಕೆಲ ಆಟಗಾರರು ಐಷಾರಾಮಿ ಕಾರುಗಳನ್ನು ಇಟ್ಟುಕೊಂಡು ಕೋಟ್ಯಧೀಶರಾಗಿದ್ದಾರೆ. ಅವರ ಐಷಾರಾಮಿ ಜೀವನಕ್ಕೆ ಹಣ ಎಲ್ಲಿಂದ ಬಂತು? ಎನ್ನುವುದಕ್ಕೆ ಮ್ಯಾಚ್‌ಫಿಕ್ಸಿಂಗ್ ಉತ್ತರವಾಗಿದೆ. ರೆಸಾರ್ಟ್‌ಗಳಲ್ಲಿ ವಾಸ್ತವ್ಯ, ಮೋಜು-ಮಸ್ತಿಗಳಲ್ಲಿ ತೊಡಗಿದ್ದ ಮೂಲಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಅಮಾಯಕರು ಹಣ ಕೊಟ್ಟು ಕ್ರಿಕೆಟ್ ನೋಡುತ್ತಿದ್ದರು. ಆದರೆ, ಅಷ್ಟರಾಗಲೇ ಅದು ಫಿಕ್ಸಿಂಗ್ ಆಗಿರುತ್ತಿತ್ತು. ಇದರಲ್ಲಿ ದುಬೈ ಹಾಗೂ ಅಂತರರಾಷ್ಟ್ರೀಯ ಮೂಲದ ಬುಕ್ಕಿಗಳು ಭಾಗಿಯಾಗಿರುವುದು ಕಂಡು ಬಂದಿದ್ದು, ಅವರ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.ಮ್ಯಾಚ್ ಫಿಕ್ಸಿಂಗ್ ಸಂಬಂಧ ಹಲವರಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆಯು ಪ್ರಗತಿಯಲ್ಲಿದೆ.ಕಾಲ ಕಾಲಕ್ಕೆ ವಿವರವನ್ನು ನೀಡಲಾಗುವುದು ಎಂದರು. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
