ಚಿತ್ರದುರ್ಗ:
ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ವಿಕಾರಗೊಳಿಸಿ ಸಂವಿಧಾನ ಬದಲಾಯಿಸಿ ಮೀಸಲಾತಿ ರದ್ದು ಮಾಡುವ ಮಾತುಗಳನ್ನು ಹೇಳುತ್ತಿದ್ದು ಇದರಿಂದ ಮೀಸಲಾತಿ ಪಡೆಯುತ್ತಿರುವ ಎಲ್ಲ ವರ್ಗದ ಜನರು ಎಚ್ಚರಿಕೆಯಿಂದ ಮತಚಲಾಯಿಸಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಎಚ್ಚರಿಸಿದರು.
ನಗರದ ಜೆಡಿಎಸ್ ಕಚೇರಿಯ ಎಚ್.ಡಿ.ದೇವೇಗೌಡ ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಗ್ರಾಮೀಣ ವಿಭಾಗ ಬೂತ್ ಮಟ್ಟದ ಸಭೆಯಲ್ಲಿ ಅವರು ಮಾತನಾಡಿ, ಸಂವಿಧಾನ ಉಳಿದರೆ ಪ್ರಜಾಪ್ರಭುತ್ವ ಉಳಿಯುತ್ತದೆ. ಪ್ರಜಾಪ್ರಭುತ್ವ ಉಳಿದರೆ ಮೀಸಲಾತಿ ಉಳಿಯಲಿದೆ. ಆದರೆ ಸಂವಿಧಾನದ ಆಶಯಗಳನ್ನೇ ತಿರುಚುವ ಸಂಚನ್ನು ಕೇಂದ್ರ ಸರ್ಕಾರದ ಸಚಿವರು, ಬಿಜೆಪಿ ಸಂಸದರು ನಿರಂತರವಾಗಿ ಮಾಡುತ್ತಿದ್ದಾರೆ. ಬಿಜೆಪಿಯವರು ಬಹಿರಂಗವಾಗಿ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ರಕ್ಷಣೆ ಇಂದಿನ ತುರ್ತು ಆವಶ್ಯಕತೆಯಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಯಾವುದೇ ಶಾಸಕರು, ಸಂಸದರಿಲ್ಲ. ಜೆಡಿಎಸ್-ಕಾಂಗ್ರೆಸ್ ಪಕ್ಷದ ಸಂಸದರಾಗಿ ಸಜ್ಜನ ಬಿ.ಎನ್.ಚಂದ್ರಪ್ಪ ಇವರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದವರು ನಮ್ಮನ್ನ ಮಾತನಾಡಿಸಲಿಲ್ಲ, ನಾವ್ಯಾಕೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು, ನಮ್ಮನ್ನು ಮಾತನಾಡಿಸಲಿ ಎನ್ನುವ ಭಾವನೆ ಖಂಡತ ಬೇಡ, ಏಕೆಂದರೆ ಮತದಾನ ದಿನ ಕಡಿಮೆ ಇದೆ. ಯಾವುದೇ ಹಳ್ಳಿಗೆ ಆಗಮಿಸಿ ಮತ ನೀಡುವಂತೆ ಕೇಳುವಷ್ಟು ಸಮಯವಿಲ್ಲ.
ಯಾವುದೇ ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಭಾವಿಸಿ ನೂರಷ್ಟು ಶ್ರಮ ಹಾಕಿ ಗೆಲ್ಲಿಸಿಕೊಂಡರೆ ಐದು ವರ್ಷಗಳ ಕಾಲ ಜೆಡಿಎಸ್ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಸಂಸದರು ಮಾಡಿ ಕೊಡಲಿದ್ದಾರೆಂದು ಹೇಳಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಸಿ.ಟಿ.ಕೃಷ್ಣಮೂರ್ತಿ ಸನ್ಮಾನ ಸ್ಪೀಕರಿಸಿ ಮಾತನಾಡಿ, ಜೆಡಿಎಸ್ ಪಕ್ಷದ ವರಿಷ್ಠರು ಗುರುತರ ಹೊಣೆಗಾರಿಕೆ ಹೊರಿಸಿದ್ದಾರೆ. ನನ್ನಂತಹ ಹಿಂದುಳಿದ ಗೊಲ್ಲ ಸಮುದಾಯದ ಮೇಲೆ ವಿಶ್ವಾಸವಿಟ್ಟು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ನನಗೆ ಒಂದು ರೀತಿಯ ಛಾಲೆಂಜ್ ಹುದ್ದೆಯಾಗಿದೆ. ಪಕ್ಷದ ತೀರ್ಮಾನ ಮತ್ತು ಆಶಯದಂತೆ ಕರ್ತವ್ಯ ನಿರ್ವಹಿಸಿ ಜೆಡಿಎಸ್ ಪಕ್ಷಕ್ಕೆ ಗಟ್ಟಿ ನೆಲೆ ಒದಗಿಸುತ್ತೇನೆ ಎಂದರು
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಗುರುತರ ಜವಾಬ್ದಾರಿ ಕೂಡ ಇದೆ. ನಮ್ಮ ಗೊಲ್ಲ ಸಮುದಾಯ ಸೇರಿದಂತೆ ಜಿಲ್ಲೆಯ ಇತರೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಹೆಚ್ಚಿನ ಮತಗಳನ್ನು ಅಭ್ಯರ್ಥಿ ಚಂದ್ರಪ್ಪನವರಿಗೆ ಕೊಡಿಸಿ ಗೆಲುವಿಗೆ ದುಡಿಯುವುದಾಗಿ ಘೋಷಿಸಿದರು.
ಸಮಾಜದಲ್ಲಿ ಶೋಷಣೆಗೆ ಒಳಗಾದ ಗೊಲ್ಲ, ವಾಲ್ಮೀಕಿ, ಮಾದಿಗ, ಉಪ್ಪಾರ, ಕುಂಬಾರ, ದೇವಾಂಗ, ಕುರುಬ, ಕುಂಚಿಟಿಗ ಸೇರಿದಂತೆ ಎಲ್ಲ ಹಿಂದುಳಿದ ಮತ್ತು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಂವಿಧಾನದಡಿ ಮೀಸಲಾತಿ ಕಲ್ಪಿಸಿದರು. ಆದರೆ ಕೋಮುವಾದಿ ಬಿಜೆಪಿ ಮೀಸಲಾತಿಯೇ ಬೇಡ ಎನ್ನುತ್ತಿದೆ. ಕೋಮುವಾದಿಗಳ ಜೊತೆ ಹೋಗುತ್ತಿರುವ ದಲಿತ, ಹಿಂದುಳಿದ ಸಮುದಾಯದ ಯುವಪೀಳಿಗೆ ಜಾಗರೂಕತೆಯ ಹೆಜ್ಜೆ ಇಡಬೇಕೆಂದು ಕಿವಿಮಾತು ಹೇಳಿದರು.
ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನನ್ನ ಎರಡು ಕಣ್ಣುಗಳಿದ್ದಂತೆ, ಯಾವುದೇ ಕಾರಣಕ್ಕೂ ತಾರತಮ್ಯ ಮಾಡದೆ ಎರಡು ಪಕ್ಷದ ಕಾರ್ಯಕರ್ತರ ನೋವು, ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಸಮಯ ಕಡಿಮೆ ಇದೆ, ಚಂದ್ರಪ್ಪನವರು ನನ್ನನ್ನು ಮಾತನಾಡಿಸಲಿಲ್ಲ ಎನ್ನುವ ಭಾವನೆ ಯಾರಲ್ಲೂ ಬರುವುದು ಬೇಡ, ನಾನು ಮತದಾರರ ಸೇವಕ, ಮತದಾರರು ಹೇಳಿದ ಕೆಲಸ, ಕಾರ್ಯಗಳನ್ನು ಚಾಚೂ ತಪ್ಪದೆ ಮಾಡಿ ಋಣ ತೀರಿಸುತ್ತೇನೆಂದು ಹೇಳಿದರು.
ಮೋದಿ ಅವರು ನೀಡಿದ ಯಾವುದೇ ಭರವಸೆ ಈಡೇರಿಸದೆ ವಚನ ಭ್ರಷ್ಟರಾಗಿದ್ದಾರೆ. 15 ಲಕ್ಷ ರೂ.ಗಳನ್ನು ಜನರ ಖಾತೆಗೆ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡಲಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಸಾಲದಕ್ಕೆ ಮೀಸಲಾತಿ ರದ್ದು ಮಾಡುವ, ಸಂವಿಧಾನ ಸುಡುವ ಮಾತುಗಳನ್ನು ಹೇಳುತ್ತಿದ್ದಾರೆ. ಸಂವಿಧಾನದ ಬಲ ಮತ್ತು ಮೀಸಲಾತಿ ಫಲದಿಂದ ನೌಕರಿ ಪಡೆದಿರುವ ಎಲ್ಲ ವರ್ಗದವರು ಚಿಂತಿಸಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಅಧ್ಯಕ್ಷತೆ ವಹಿಸಿ ಮಾತನಾಡಿ ಚಂದ್ರಪ್ಪನವರ ಗೆಲುವಿಗೆ ಪ್ರಮಾಣಿಕ ಪ್ರಯತ್ನ ಮಾಡಬೇಕು. 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿವ ಹೊಣೆಗಾರಿಕೆ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ತಿಳಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ತಿಮ್ಮಣ್ಣ, ಜೆ.ಎನ್.ಕೋಟೆ ಗುರುಸಿದ್ದಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಮಠದಹಟ್ಟಿ ವೀರಣ್ಣ ಸೇರಿದಂತೆ ಮತ್ತಿತರರು ಇದ್ದರು.