ತುಮಕೂರು:
ಕೆಮ್ಮು – ನೆಗಡಿ -ವೈರಲ್ ಫೀವರ್ ಆರ್ಥಿಕ ಸಂಕಷ್ಟದೊಳಗೆ ಆಸತ್ರೆ ಭಯ
ಕಳೆದ ಒಂದು ತಿಂಗಳಿನಿಂದ ಕೆಮ್ಮು, ನೆಗಡಿ ಮತ್ತು ಜ್ವರ ಜನರನ್ನು ಹೈರಾಣಾಗಿಸಿಬಿಟ್ಟಿದೆ. ಜಿಲ್ಲೆಯ ಯಾವುದೇ ಪ್ರದೇಶಕ್ಕೆ ಹೋದರೂ ಎಲ್ಲ ಗ್ರಾಮಗಳಲ್ಲೂ ರೋಗಪೀಡಿತರು ಪತ್ತೆಯಾಗುತ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಆಸ್ಪತ್ರೆಗಳಿಗೆ ಎಡತಾಕುವವರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ನಿತ್ಯ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಯಿತು. ವಾಯುಭಾರ ಕುಸಿತದ ಪರಿಣಾಮ ವಾರಗಟ್ಟಲೆ, ತಿಂಗಳಾನುಗಟ್ಟಲೆ ಮಳೆ ಸುರಿದು ಎಲ್ಲ ಕಡೆ ತೇವಾಂಶ ಅಧಿಕವಾಗಿ ವಾತಾವರಣ ಶೀತಮಯವಾಗಿದೆ. ಬೆಳಗಿನ ಸಮಯದಲ್ಲಿ ದಟ್ಟನೆಯ ಮಂಜು ಎಲ್ಲೆಡೆ ಆವರಿಸಿದ್ದು, ಇದರಿಂದ ಹೊರಬರಲು ಸಾಧ್ಯವಾಗಿಲ್ಲ. ಎಷ್ಟೋ ಜನ ಬೆಳಗಿನ ವಿಹಾರ ಸ್ಥಗಿತಗೊಳಿಸಿದ್ದಾರೆ. ಅಷ್ಟರ ಮಟ್ಟಿಗೆ ಶೀತಬಾಧೆ –ಛಳಿ ಜನರನ್ನು ಹೆಚ್ಚು ಬಾಧಿಸತೊಡಗಿದೆ.
ಇದೇ ವೇಳೆ ಕೆಮ್ಮು, ನೆಗಡಿ ಬಹುತೇಕ ಜನರಲ್ಲಿ ಕಂಡುಬರುತ್ತಿದ್ದು, ವಾರಾನುಗಟ್ಟಲೆ ಕಳೆದರೂ ಕೆಲವರಿಗೆ ವಾಸಿಯಾಗುತ್ತಿಲ್ಲ. ಇನ್ನು ಕೆಲವರಿಗೆ ಇದರ ಜೊತೆ ಜ್ವರವೂ ಬಾಧಿಸುತ್ತಿದ್ದು, ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಕಾಕತಾಳೀಯವೆಂಬಂತೆ ಇಂತಹ ಲಕ್ಷಣಗಳು ಇರುವವರ ತಪಾಸಣೆ ನಡೆಸಿದರೆ ಬಹುತೇಕ ಮಂದಿಗೆ ಕೋವಿಡ್ ಪಾಸಿಟಿವ್ ಬರುತ್ತಿರುವುದು ಆತಂಕಕ್ಕೂ ಕಾರಣವಾಗಿದೆ. ಪರಿಣಾಮವಾಗಿ ಕೆಲವರು ಕೋವಿಡ್ ಟೆಸ್ಟ್ ಮಾಡಿಸಲು ಹಿಂಜರಿಯುತ್ತಿದ್ದು, ಜ್ವರ, ಕೆಮ್ಮು, ನೆಗಡಿಗೆ ಮೆಡಿಕಲ್ ಸ್ಟೋರ್ಸ್‍ಗಳಲ್ಲಿ ಸಿಗುವ ಮಾತ್ರೆಗಳಿಗೆ ಮೊರೆ ಹೋಗುವುದರ ಮೂಲಕ ತೆಪ್ಪಗಾಗುತ್ತಿದ್ದಾರೆ.
ಕೊರೊನಾ ಮೂರನೇ ಅಲೆ ಈಗಾಗಲೇ ಎಲ್ಲ ಕಡೆ ಪಸರಿಸಿಬಿಟ್ಟಿದೆ. ಪ್ರತಿದಿನ ಜಿಲ್ಲೆಯಲ್ಲಿ 1500ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಒಂದು ಸಮಾಧಾನಕರ ಸಂಗತಿಯಂದರೆ ಎರಡನೇ ಅಲೆಯಲ್ಲಿ ಕಂಡುಬಂದ ಸಾವು-ನೋವಿನ ಗಂಭೀರ ಸ್ಥಿತಿ ಈಗಿಲ್ಲದಿರುವುದು. ಕೋವಿಡ್ ಪಾಸಿಟಿವ್ ಬಂದರೂ ಸಹ ಹಿಂದಿನಷ್ಟು ಭಯ ಈಗ ಕಾಣುತ್ತಿಲ್ಲ. ಲಭ್ಯವಿರುವ ಮಾತ್ರೆಗಳನ್ನು ಪಡೆದು ಮನೆಯಲ್ಲಿಯೇ ಐಸೋಲೇಷನ್‍ಗೆ ಒಳಗಾಗಿ ಗುಣಮುಖರಾಗುತ್ತಿದ್ದಾರೆ.
ಜನಮಾನಸದಲ್ಲಿ ಮೂಡುತ್ತಿರುವ ಅಭಿಪ್ರಾಯ ಬೇರೆಯದ್ದೇ ಇದೆ. ಈ ಛಳಿಗಾಲದಲ್ಲಿ ಸಹಜವಾಗಿ ಕೆಮ್ಮು, ನೆಗಡಿ, ಜ್ವರ ಬರುವ ಸಾಧ್ಯತೆಗಳಿರುತ್ತವೆ. ಇದನ್ನೇ ಕೋವಿಡ್ ಪಾಸಿಟಿವ್ ಎಂದು ಪರಿಗಣಿಸಿದರೆ ಹೇಗೆ ಎಂದು ಪ್ರಶ್ನಿಸುವವರು ಇದ್ದಾರೆ. ಹೀಗಾಗಿ ಸಹಜವಾಗಿಯೇ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂಬ ಅನಿಸಿಕೆಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.
ಕಾಲ ಕಾಲಕ್ಕೆ ಕೆಲವು ರೋಗರುಜಿನಗಳು ಮನುಷ್ಯರಿಗೆ ಅನಾದಿ ಕಾಲದಿಂದಲೂ ವಕ್ಕರಿಸುತ್ತಲೇ ಬಂದಿವೆ. ಕಾಲರಾ, ಪ್ಲೇಗ್ ಹೆಮ್ಮಾರಿಯಂತಹ ಕೆಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಮನೆ ಮಂದಿಯಲ್ಲಾ ಅಸುನೀಗಿರುವ, ಊರನ್ನೇ ಬಿಟ್ಟು ಹೋಗಿರುವ ಉದಾಹರಣೆಗಳು ಬಹಳಷ್ಟಿವೆ.
ಆಗಿನ ಕಾಲಕ್ಕೆ ಆರೋಗ್ಯದ ತಿಳವಳಿಕೆ ಮತ್ತು ಉಪಚಾರದ –ಔಷಧ ವ್ಯವಸ್ಥೆ ಅಷ್ಟಾಗಿ ಇರಲಿಲ್ಲ. ಆದರೆ ಕೆಮ್ಮು, ನೆಗಡಿ ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೆ ಜನ ಹೆದರುತ್ತಿರಲಿಲ್ಲ. ನಾಟಿ ಔಷಧಗಳಿಂದಲೇ ಇವುಗಳನ್ನು ಗುಣಪಡಿಸಿಕೊಳ್ಳುತ್ತಿದ್ದರು. ಈಗ ಹಾಗಿಲ್ಲ. ಕಾಲಘಟ್ಟ ಬದಲಾದಂತೆ ಆಸ್ಪತ್ರೆಗಳಿಗೆ ಹೋಗುವುದು ಅನಿವಾರ್ಯ ಎಂಬಂತಾಗಿದೆ.
ಪ್ರಸ್ತುತ ಕೋವಿಡ್ ಪ್ರಕರಣಗಳು ಹಾಗೂ ಕಳೆದ ಎರಡು ವರ್ಷಗಳಿಂದ ಜನರನ್ನು ಬಾಧಿಸುತ್ತಿರುವ ಇದೇ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿದರೆ ಈಗ ಸಾವಿನ ಪ್ರಕರಣಗಳು ಹೆಚ್ಚು ಕಂಡುಬರುತ್ತಿಲ್ಲವೇಕೆ ಎಂಬ ಪ್ರಶ್ನೆಗಳು ಸಹಜವಾಗುತ್ತಿವೆ.
ಆರಂಭದಲ್ಲಿ ಒಂದು ಸಾಮಾನ್ಯ ಜ್ವರ ಕೋವಿಡ್-19 ನ್ನು ಮಾಧ್ಯಮಗಳು ಅತಿ ಭಯಂಕರವಾಗಿ ಬಿತ್ತರಿಸಿದ್ದು, ಯಾವುದ್ಯಾವುದೋ ಸಾವುಗಳೆಲ್ಲವನ್ನೂ ಕೊರೊನಾದೊಳಗೆ ತಂದು ತುರುಕಿದ್ದು. ಇವೆಲ್ಲವನ್ನೂ ವೈಭವಯುತವಾಗಿ ದೃಶ್ಯ ಮಾಧ್ಯಮಗಳಲ್ಲಿ ಚಿತ್ರೀಕರಿಸಿದ್ದು ಬಹುಶಃ ಹೆಚ್ಚು ಜನರ ಸಾವಿಗೆ ಕಾರಣವಾಯಿತೇನೋ ಎಂಬ ಶಂಕೆ ಹಲವರಲ್ಲಿದೆ.
ಕೋವಿಡ್ ಪಾಸಿಟಿವ್ ವರದಿಯಾದ ಎಲ್ಲರಿಗೂ ಸಾವು ಬರಲಾರದು ಎಂಬ ಖಚಿತ ಮಾಹಿತಿಯನ್ನು ನೀಡುವಲ್ಲಿ ಇಡೀ ವ್ಯವಸ್ಥೆ ವಿಫಲವಾಯಿತೆ? ಕಿಡ್ನಿಯಲ್ಲಿ ವೈಫಲ್ಯ, ಕರುಳು ಬಾಧೆ ಇತ್ಯಾದಿ ಕೆಲವು ಗಂಭೀರ ಕಾಯಿಲೆಗಳು ಇರುವವರಿಗೆ ಕೊರೊನಾ ಪಾಸಿಟಿವ್ ಎದುರಾದಾಗ ಅಂತಹವರು ಸಾವಿಗೆ ತುತ್ತಾಗಿದ್ದಾರೆ.
ಇದಕ್ಕಿಂತಲೂ ಭಯಾನಕವಾಗಿ ಸಾವಿಗೆ ತುತ್ತಾಗಿರುವವರು ಆಸ್ಪತ್ರೆಗಳಲ್ಲಿ ತನ್ನ ಅಕ್ಕಪಕ್ಕದಲ್ಲಿ ಸಾವಿನ ದೃಶ್ಯಗಳನ್ನು ನೋಡಿ. ದೃಶ್ಯ ಮಾಧ್ಯಮಗಳ ವೈಭವೀಕರಣ, ಭಯದ ವಾತಾವರಣ, ಸಮರ್ಪಕ ಮಾಹಿತಿಯ ಕೊರತೆ ಇವೆಲ್ಲವುಗಳ ಪರಿಣಾಮ ಸಾವಿನ ಸಂಖ್ಯೆ ಅಧಿಕವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ನೋಡಿ… ಊರಿಗೆ ಊರೇ ಕೆಮ್ಮು, ನೆಗಡಿ ಮತ್ತು ವೈರಲ್ ಫೀವರ್‍ನಿಂದ ತತ್ತರಿಸುತ್ತಿವೆ. ಇಷ್ಟಾದರೂ ಗ್ರಾಮೀಣ ಪ್ರದೇಶಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ವೈದ್ಯರು ಮತ್ತು ಸಿಬ್ಬಂದಿಗಳಿಲ್ಲ.
ಕೆಲವು ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ಕಟ್ಟಡಗಳಿವೆ, ಅದರೊಳಗೆ ಉಪಚರಿಸುವವರೇ ಕಾಣುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳನ್ನು ಈ ಪರಿಯಲ್ಲಿ ನಿರ್ಲಕ್ಷಿಸಿದರೆ ಜನ ಇನ್ನೆಲ್ಲಿಗೆ ತಾನೆ ಹೋಗುತ್ತಾರೆ. ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ.
ಜಿಲ್ಲೆಯಲ್ಲಿ ನಿತ್ಯ 3500 ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಜನವರಿ 5 ರಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ನಿತ್ಯ 6000 ಕೋವಿಡ್ ಪರೀಕ್ಷೆ ನಡೆಸಲು ಸೂಚನೆ ನೀಡಿದ್ದರು.
ಇದರ ಪರಿಣಾಮ ಎಂಬಂತೆ ನಿತ್ಯ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಲೇ ಇವೆ. ಪರೀಕ್ಷೆ ಹೆಚ್ಚಿದಂತೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತವೆ.
ಆಸ್ಪತ್ರೆಗಳಿಗೆ ಸುಗ್ಗಿ:
ಈಗಂತೂ ಸಣ್ಣಪುಟ್ಟ ಕಾಯಿಲೆಗಳಿಗೂ ಜನ ಆಸ್ಪತ್ರೆಗಳಿಗೆ ಹೋಗುತ್ತಿರುವುದು ಅನಿವಾರ್ಯವಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಸುಗ್ಗಿಯ ಕಾಲ. ಕ್ಲಿನಿಕ್‍ಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ರೋಗಪೀಡಿತರಿಂದ ತುಂಬಿ ತುಳುಕುತ್ತಿವೆ.
ಯಾವುದೇ ಚಿಕಿತ್ಸೆಗೂ ಮುನ್ನ ರಕ್ತ ಪರೀಕ್ಷೆ ವರದಿ ಬೇಕಿರುವುದರಿಂದ ಲ್ಯಾಬ್‍ಗಳಿಗೂ ಸಹ ಶುಕ್ರದೆಸೆ. ಇವೆಲ್ಲವು ಪರಸ್ಪರ ಪೂರಕ ಎಂಬಂತೆ ಇದ್ದು, ಜನ ಈಗಾಗಲೇ ಆರ್ಥಿಕವಾಗಿ ಕುಗ್ಗಿ ಹೋಗಿದ್ದು, ಆಸ್ಪತ್ರೆಗಳಿಗೆ ಹಣ ಹೊಂದಿಸಲಾಗದೆ ಹೆಣಗಾಡುತ್ತಿದ್ದಾರೆ.
ಹೆದರಿಕೆ ಬೇಡ, ಮುಂಜಾಗ್ರತೆ ಇರಲಿ
ಕೆಮ್ಮು, ನೆಗಡಿ, ಜ್ವರ ಅತ್ಯಂತ ವೇಗವಾಗಿ ಹರಡುತ್ತಿದೆ. ಈ ಲಕ್ಷಣ ಇರುವ ವ್ಯಕ್ತಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಸಹಜವಾಗಿ ಪಾಸಿಟೀವ್ ವರದಿ ಬರುತ್ತಿದೆ. ಓಮಿಕ್ರಾನ್ ಲಕ್ಷಣಗಳು ಹೆಚ್ಚು ಕಂಡು ಬರುತ್ತಿವೆ. ಹಾಗಂತ ಗಾಬರಿ ಪಡುವ ಅಗತ್ಯವಿಲ್ಲ, ಆರಂಭದಲ್ಲಿಯೇ ಪರೀಕ್ಷೆಗೆ ಒಳಪಟ್ಟರೆ ಸೂಕ್ತ ಚಿಕಿತ್ಸೆ ಮತ್ತು ಔಷಧ ಪಡೆಯುವ ಮೂಲಕ ಗುಣಪಡಿಸಿಕೊಳ್ಳಬಹುದು,
ಹಿಂದಿನಂತೆ ಕೋವಿಡ್ ಪಾಸಿಟೀವ್ ಬಂದಾಕ್ಷಣ ಆಸ್ಪತ್ರೆಗೆ ದಾಖಲಾಗಬೇಕೆಂದೇನೂ ಇಲ್ಲ, ಮನೆಯಲ್ಲಿಯೇ ಪ್ರತ್ಯೇಕವಾಗಿ ಕೆಲಕಾಲ ಇದ್ದು ಸಹಜ ಸ್ಥಿತಿಗೆ ಮರಳಬಹುದು. ನಮ್ಮ ವೈದ್ಯಕೀಯ ತಂಡ ಮನೆಗಳಿಗೆ ತೆರಳಿ ಔಷಧ ನೀಡುವ ವ್ಯವಸ್ಥೆಯೂ ಇದೆ. ಕೆಮ್ಮು, ನೆಗಡಿ, ಜ್ವರ ಇತ್ಯಾದಿ ಕಂಡು ಬಂದರೆ ಆರಂಭದಲ್ಲಿಯೇ ಪರೀಕ್ಷಿಸಿಕೊಂಡರೆ ಮುಂದಿನ ತಾಪತ್ರಯಗಳನ್ನು ತಪ್ಪಿಸಬಹುದು.
ಹಬೆ ತೆಗೆದುಕೊಳ್ಳುವುದು, ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವ ಮೂಲಕ ವೈರಾಣು ಹರಡದಂತೆ ತಡೆಗಟ್ಟಲು ಸಾಧ್ಯವಿದೆ. 3 ನೇ ಅಲೆಯ ಬಗ್ಗೆ ಆತಂಕ ಹಾಗೂ ಗಾಬರಿ ಬೇಡ, ಆದರೆ ಮುನ್ನೆಚ್ಚರಿಕೆ ಮತ್ತು ಸುರಕ್ಷತೆ ಇರಲಿ.
– ಡಾ. ಟಿ.ಎ. ವೀರಭದ್ರಯ್ಯ, ಜಿಲ್ಲಾ ಸರ್ಜನ್
-ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ