ಗುರುತಿಸಿರುವ 15 ಕ್ಷೇತ್ರಗಳಲ್ಲಿ ಯಾವುದೇ ಸೋತರು ಅದಕ್ಕೆ ಪಕ್ಷ ವಿರೋಧಿ ಚಟುವಟಿಕೆ ಕಾರಣ: ರಾಹುಲ್ ಗಾಂಧಿ

ಬೆಂಗಳೂರು

      ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ಹದಿನೈದು ಗೆಲ್ಲುವ ಕ್ಷೇತ್ರಗಳನ್ನು ಹೈಕಮಾಂಡ್ ಗುರುತಿಸಿದ್ದು ಇದರಲ್ಲಿ ಯಾವುದೇ ಕ್ಷೇತ್ರಗಳನ್ನು ಸೋತರೆ ಅದಕ್ಕೆ ಪಕ್ಷ ವಿರೋಧಿ ಚಟುವಟಿಕೆ ಕಾರಣವೆಂದು ಪರಿಗಣಿಸಲಾಗುತ್ತದೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ,ಇದಕ್ಕೆ ಕಾರಣರಾಗುವವರು ಎಷ್ಟೇ ದೊಡ್ಡವರಿದ್ದರೂ ಪಕ್ಷದಿಂದ ಹೊರಹೋಗುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.

      ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು,ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹದಿನೈದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಗೆಲ್ಲುವುದು ನಿಶ್ಚಿತ.ಈ ಸಂಬಂಧ ತಮಗೆ ಸ್ಪಷ್ಟವಾದ ವರದಿಯಿದೆ ಎಂದು ಹೇಳಿದ್ದಾರೆ.

       ಆದರೆ ಉಭಯ ಪಕ್ಷಗಳ ಆಳದಲ್ಲಿ ಕಚ್ಚಾಟ ಶುರುವಾಗಿದ್ದು ಪರಸ್ಪರ ಕಾಲೆಳೆಯುವ ಪ್ರಯತ್ನಗಳು ನಡೆದಿವೆ.ಒಬ್ಬರು ಮತ್ತೊಬ್ಬರನ್ನು ಸೋಲಿಸುವ ಯತ್ನದಲ್ಲಿ ಬಹಳ ಮುಂದೆ ಹೋಗಿದ್ದಾರೆ.

      ಇದಕ್ಕೆ ಯಾರು ಕಾರಣರು? ಅನ್ನುವುದು ತಮಗೆ ಗೊತ್ತಿದೆ.ಈ ಬಾರಿಯ ಲೋಕಸಭಾ ಚುನಾವಣೆ ಕಾಂಗ್ರೆಸ್‍ನ ಅಸ್ತಿತ್ವದ ಪ್ರಶ್ನೆ ಎಂದು ಪದೇ ಪದೇ ಹೇಳುತ್ತಿದ್ದರೂ ಸ್ವಪ್ರತಿಷ್ಟೆಗೆ ಬಿದ್ದ ಕೆಲ ನಾಯಕರು, ಜೆಡಿಎಸ್ ಕ್ಯಾಂಡಿಡೇಟುಗಳನ್ನು, ಹಾಗೆಯೇ ಸ್ವಪಕ್ಷದ ಕ್ಯಾಂಡಿಡೇಟ್ ಗಳನ್ನು ಸೋಲಿಸಲು ಹೊರಟಿದ್ದಾರೆ.

      ಒಂದು ಸಲ ನಮ್ಮ ಪಕ್ಷದವರು ಜೆಡಿಎಸ್ ಕ್ಯಾಂಡಿಡೇಟುಗಳಿಗೆ ಬೆಂಬಲ ನೀಡುತ್ತಿಲ್ಲ ಎಂಬುದು ನಿಕ್ಕಿಯಾದರೆ ಜೆಡಿಎಸ್ ಪಕ್ಷದವರೂ ನಮ್ಮ ಕ್ಯಾಂಡಿಡೇಟುಗಳಿಗೆ ಬೆಂಬಲ ನೀಡುವುದಿಲ್ಲ.

       ಪರಿಣಾಮವಾಗಿ ಗೆಲ್ಲಬಹುದಾದ ಹದಿನೈದು ಕ್ಷೇತ್ರಗಳಲ್ಲಿ ಗಣನೀಯ ಸಂಖ್ಯೆಯ ಕ್ಷೇತ್ರಗಳಲ್ಲಿ ನಾವು ಸೋಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಯಾವ ಕಾರಣಕ್ಕೂ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್‍ಗಾಂಧಿ ವಿವರಿಸಿದ್ದಾರೆ.

       ಹಾಗೇನಾದರೂ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಸಹಕಾರ ನೀಡುತ್ತಿಲ್ಲ ಎಂದರೆ ಯಾವ ಕ್ಷೇತ್ರದಲ್ಲಿ ಹಾಗಾಗುತ್ತಿದೆ?. ಅನ್ನುವುದರ ವಿವರ ಕೊಡಿ.ತಕ್ಷಣ ಆ ಕುರಿತು ಮಾಜಿ ಪ್ರಧಾನಿ ದೇವೇಗೌಡರ ಜತೆ ಮಾತನಾಡುತ್ತೇನೆ.

        ಅದೇ ರೀತಿ ಜೆಡಿಎಸ್ ಕ್ಯಾಂಡಿಡೇಟುಗಳು ಕಣಕ್ಕಿಳಿದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಯಾವ ನಾಯಕರು ಅಸಹಕಾರ ನೀಡುತ್ತಿದ್ದಾರೆ?. ಅನ್ನುವ ಕುರಿತು ದೇವೇಗೌಡರು ವಿವರಿಸಿದರೆ ನಿರ್ದಾಕ್ಷಿಣ್ಯವಾಗಿ ಅಂತವರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ.ಅಂತಿಮವಾಗಿ ನಮಗೆ ಪಕ್ಷ ಮುಖ್ಯವೇ ಹೊರತು ಗೆದ್ದು ಅಧಿಕಾರ ಹಿಡಿಯಲೇಬೇಕು ಎಂದಿಲ್ಲ. ಈ ಹಿಂದೆ ಯುಪಿಎ ಸರ್ಕಾರ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಹಾಗೆಯೇ ಎನ್.ಡಿ.ಎ ಸರ್ಕಾರ ಅಧಿಕಾರದಲ್ಲಿದೆ ಎಂದು ಮರೆತು ಬಿಡುತ್ತೇವೆ.

      ಆದರೆ ಚುನಾವಣೆಯಲ್ಲಿ ಮನ:ಪೂರ್ವಕವಾಗಿ ದುಡಿಯದೇ ಮೈತ್ರಿಕೂಟದ ಕ್ಯಾಂಡಿಡೇಟುಗಳನ್ನು ಸೋಲಿಸುವುದೇ ತಮ್ಮ ಉದ್ದೇಶ ಎಂದು ಬಾವಿಸಿದವರಿಗೆ ಪಕ್ಷದಿಂದ ಗೇಟ್ ಪಾಸ್ ನೀಡುವುದಾಗಿ ರಾಹುಲ್‍ಗಾಂಧಿ ಎಚ್ಚರಿಸಿದ್ದಾರೆ.ಇದೇ ಮೂಲಗಳ ಪ್ರಕಾರ, ಮಾಜಿ ಪ್ರಧಾನಿ ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಜತೆ ಮಾತುಕತೆ ನಡೆಸಿದ್ದು, ಕರ್ನಾಟಕದಲ್ಲಿ ಜೆಡಿಎಸ್ ಗೆಲುವಿಗೆ ಕಾಂಗ್ರೆಸ್‍ನ ಸ್ಥಳೀಯ ನಾಯಕರೇ ಅಡ್ಡಗಾಲು ಹಾಕುತ್ತಿರುವ ಕುರಿತು ವಿವರಿಸಿದ್ದಾರೆ.ನೀವು ಪ್ರಧಾನಿಯಾಗಬೇಕು ಎಂಬ ಕಾರಣಕ್ಕಾಗಿ ನಾವು ಒಮ್ಮನಸ್ಸಿನಿಂದ ದುಡಿಯಲು ಸಜ್ಜಾಗಿದ್ದೇವೆ. ಆದರೆ ಜೆಡಿಎಸ್ ಕ್ಯಾಂಡಿಡೇಟುಗಳನ್ನು ಸೋಲಿಸಲು ಕಾಂಗ್ರೆಸ್ ನಾಯಕರೇ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದು ಸರಿಯಲ್ಲ.

      ಒಂದು ವೇಳೆ ಕಾಂಗ್ರೆಸ್ ಇಂತಹ ತಂತ್ರ ಅನುಸರಿಸಿದರೆ ನಾವೂ ಬೇರೆ ತಂತ್ರ ಅನುಸರಿಸಬೇಕಾಗುತ್ತದೆ ಎಂದು ದೇವೇಗೌಡರು ವಿವರಿಸಿದ ಹಿನ್ನೆಲೆಯಲ್ಲಿ ರಾಹುಲ್‍ಗಾಂಧಿ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಈ ಎಚ್ಚರಿಕೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap