ಅಸಮಾನತೆ ಹೆಚ್ಚಾದಂತೆ ಕ್ರೌರ್ಯವೂ ಹೆಚ್ಚುತ್ತದೆ…!!!

ದಾವಣಗೆರೆ :

          ದೇಶದಲ್ಲಿ ಹೀಗೆಯೇ ಆರ್ಥಿಕ ಅಸಮಾನತೆ ಹೆಚ್ಚುತ್ತಿದ್ದರೆ ಹಸಿವು, ನಿರುದ್ಯೋಗ, ಬಡತನ ಹೆಚ್ಚಾಗಿ ಹಿಂಸೆ, ಕ್ರೌರ್ಯದಂತ ಅಪರಾಧ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ಹೆಚ್.ಎನ್.ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.

        ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಸಂಜೆ ಕಾರ್ಮಿಕ ನಾಯಕ, ಬರಹಗಾರ ಕೆ.ಮಹಾಂತೇಶ್ ಅವರ ‘ಒಡಲಾಳದ ಕಥನಗಳು’ ಪುಸ್ತಕ ಬಿಡುಗಡೆ ಮತ್ತು ಸಂವಿಧಾನ ಓದು ಏಕೆ ಮತ್ತು ಹೇಗೆ ? ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಭಾರತ ಗಣರಾಜ್ಯವಾಗಿ 68 ವರ್ಷ ಕಳೆದರೂ ನಾವೆಲ್ಲಾ ಇನ್ನೂ ಕಾಲ ಕಾಲಕ್ಕೆ ಚುನಾವಣೆ ನಡೆಸುವ ರಾಜಕೀಯ ಪ್ರಭುತ್ವದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಹೊರತು, ಇನ್ನೂ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲಾರಂಭಿಸಿಲ್ಲ. ಹೀಗಾಗಿಯೇ ದೇಶದ ಶೇ.60 ರಷ್ಟು ಆಸ್ತಿಯು. ಶೇ.1ರಷ್ಟು ಜನರ ಬಳಿ ಹಾಗೂ ಶೇ.20 ರಷ್ಟು ಆಸ್ತಿಯು ಶೇ.9ರಷ್ಟು ಜನರ ಬಳಿ ಇದ್ದರೆ, ಇನ್ನೂಳಿದ ಶೇ.90 ರಷ್ಟು ಜನರ ಬಳಿ ಕೇವಲ 20 ರಷ್ಟು ಆಸ್ತಿ ಉಳಿದಿದೆ. ಹೀಗೆಯೇ ದೇಶದಲ್ಲಿ ಅಸಮಾನತೆ ಹೆಚ್ಚುತ್ತಾ ಹೋದರೆ, ಹಸಿವು, ನಿರುದ್ಯೋಗ, ಬಡತನ ಹೆಚ್ಚಾಗುವ ಮೂಲಕ ಹಿಂಸೆ, ಕ್ರೌರ್ಯ, ಕೊಲೆ, ಸುಲಿಗೆಯಂತಹ ಅಪರಾಧ ಕೃತ್ಯಗಳು ನಡೆಯಲಿವೆ.
ಆದ್ದರಿಂದ ರಾಜಕೀಯ ಪ್ರಜಾಪ್ರಭುತ್ವದ ಜತೆಗೆ, ಆರ್ಥಿಕ ಪ್ರಜಾಪ್ರಭುತ್ವವವನ್ನು ಸಮೀಕರಿಸುವ ಮೂಲಕ ಆರ್ಥಿಕ ಪ್ರಜಾಪ್ರಭುತ್ವ ತರುವ ಮೂಲಕ ಸಮ ಸಮಾಜ ನಿರ್ಮಾಣ ಮಾಡುವ ಗುರಿ ನಮ್ಮದಾಗಬೇಕೆಂದು ಕಿವಿಮಾತು ಹೇಳಿದರು.

          ಯಾವುದೇ ಒಂದು ಸರ್ಕಾರಕ್ಕೆ ಅದರದೇ ಆದಂತಹ ಧರ್ಮ ಇರಬಾರದು ಹಾಗೂ ಒಂದು ಧರ್ಮದ ಪರವಾಗಿ ಯಾವುದೇ ಸರ್ಕಾರ ನೀತಿಗಳನ್ನು ಜಾರಿಗೆ ತರಬಾರದು. ಬದಲಿಗೆ ಜನರ ಪರವಾದಂತಹ ನೀತಿಗಳನ್ನು ರೂಪಿಸುವುದು ಒಂದು ಸರ್ಕಾರದ ಆದ್ಯ ಕರ್ತವ್ಯವಾಗಬೇಕೆಂದು ಹೇಳಿದರು.

         ಸಾಮಾಜಿಕ ನ್ಯಾಯ ಕೇವಲ ಇಂದು ಮೀಸಲಾತಿಗೆ ಸೀಮಿತವಾಗಿದೆ. ಸರಣಿ ಆತ್ಮಹತ್ಯೆಗೆ ಮುಂದಾಗಿರುವ ರೈತರನ್ನು, ಬೀದಿಪಾಲಾಗುತ್ತಿರುವ ಕಾರ್ಮಿಕರನ್ನು ಹಾಗೂ ಇಂದಿಗೂ ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ನಡೆಸಿಕೊಳ್ಳುತ್ತಿರುವ ಮಹಿಳೆಯರಿಗೂ ಸಹ ಸಾಮಾಜಿಕನ್ಯಾಯವನ್ನು ವಿಸ್ತರಿಸುವ ಕೆಲಸಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

          ಸಂವಿಧಾನವನ್ನು ಬದಲಾಯಿಸುವ, ಅದರ ಪ್ರತಿಯನ್ನು ಸುಡುವ ಸನ್ನಿವೇಶ ದೇಶದಲ್ಲಿ ನಡೆಯುತ್ತಿದೆ. ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯ, ಅಸಹನೆ ಇದ್ದರೆ ಅದನ್ನು ವ್ಯಕ್ತಗೊಳಿಸಬೇಕೇ ಹೊರತು, ಸುಡುವುದು ನಾಗರೀಕತೆಯಲ್ಲ. ಪುಸ್ತಕಗಳನ್ನು ಪೂಜಿಸುವ ದೇಶದಲ್ಲಿ ಪುಸ್ತಕವನ್ನು ಸುಡುವುದು ದೇಶದ್ರೋಹದ ಕೆಲಸ ಅಲ್ಲವೇ? ಎಂದು ಪ್ರಶ್ನಿಸಿದರು.

        ದೇಶ ಎಂದರೆ ಬರೀ ಮಣ್ಣಲ್ಲ, ಜನ. ಹೀಗಾಗಿ ಈ ದೇಶದ ಜನರ ಮೂಲದ ಬಗ್ಗೆ ತಿಳಿದುಕೊಳ್ಳುವ ಕನಿಷ್ಠ ಜ್ಞಾನವಾದರೂ ನಮಗೆ ಬೇಕಾಗಿದೆ. ಭಾರತಕ್ಕೆ ಕೆಲವರು ಆಹಾರಕ್ಕಾಗಿ, ಇನ್ನೂ ಕೆಲವರು ವ್ಯಾಪಾರಕ್ಕಾಗಿ, ಕೃಷಿಗಾಗಿ, ದಾಳಿಕೋರರಾಗಿ, ಆಕ್ರಮಣಕಾರರಾಗಿ ಬಂದರು. ಹೀಗೆ ಬಂದವರಲ್ಲಿ ಅನೇಕರು ಇಲ್ಲೇ ಉಳಿದರು. ಹೀಗಾಗಿ ನಮ್ಮ ರಾಷ್ಟ್ರೀಯತೆ ಮತ್ತು ನಮ್ಮ ಜನಾಂಗದ ಮೂಲ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ ಎಂದ ಅವರು, ಬೇರೆ, ಬೇರೆ ಕಡೆಗಳಿಂದ ಬಂದು ಇಲ್ಲಿ ನೆಲೆಸಿರುವವರು ಹೆಚ್ಚಾಗಿರುವ ಕಾರಣಕ್ಕೆ ಇಲ್ಲಿ ವಿವಿಧ ಬಗೆಯ ಧರ್ಮ, ಭಾಷೆ, ಜನಾಂಗ, ಸಂಸ್ಕತಿ, ಆಚಾರ-ವಿಚಾರಗಳಿವೆ. ಇದನ್ನೇ ಬಹುತ್ವದ ಭಾರತ ಎನ್ನುವುದು ಎಂದು ವಿಶ್ಲೇಷಿಸಿದರು.

        ಪುಸ್ತಕ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಗುರುಶಾಂತ್, ಹೋರಾಟಗಾರ, ಬರಹಗಾರ ಕೆ.ಮಹಾಂತೇಶ್ ಬರೆದಿರುವ ‘ಒಡಲಾಳದ ಕಥನಗಳು’ ಪುಸ್ತಕದಲ್ಲಿ ಅರಿವಿನ ಕಥನ, ಹೋರಾಟದ ಕಥನ, ಮರೆಯಲಾಗದ ಕಥನಗಳಿವೆ. ಇಲ್ಲಿ ಬರಹಗಾರ ವ್ಯಕ್ತಿ ಅಭಿಪ್ರಾಯಕ್ಕಿಂತ ಸಾಮುದಾಯಿಕ ಅಭಿಪ್ರಾಯವನ್ನು ವ್ಯಕ್ತಗೊಳಿಸಿದ್ದಾರೆ. ಇಲ್ಲಿ ಬಹುತೇಕ ಬದುಕಿನ ಅಂತರಾಳದ ಬವಣೆಗಳು ಮೂಡಿ ಬಂದಿವೆ ಎಂದರು.

         ಪುಸ್ತಕ ಲೋಕಾರ್ಪಣೆ ಮಾಡಿದ ಜಿಲ್ಲಾ ವರದಿಗಾರರ ಕೂಟದ ಅಧ್ಕಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಸಂವಿಧಾನ ಓದಿ ಅದರಂತೆ ನಡೆದುಕೊಳ್ಳುವವರ ಕೊರತೆ ಹೆಚ್ಚಾಗಿದೆ. ಈ ಕೊರೆತೆಯನ್ನು ತುಂಬುವವರು ಬೇಕಾಗಿದ್ದಾರೆ. ಇಂದು ಮಾಧ್ಯಮಗಳು ಹೆಚ್ಚಿನ ಆದ್ಯತೆಯನ್ನು ಕಾಪೆರ್ರೇಟ್ ಶಕ್ತಿಗಳಿಗೆ ನೀಡುತ್ತಿದ್ದು, ಬಂಡವಾಳಶಾಹಿಗಳನ್ನು ಓಲೈಸುವ ಕೆಲಸ ಮಾಡುತ್ತಿದೆ. ಸಾಲದಿಂದ ರೈತರು ಸಾವನ್ನಪ್ಪಿದ್ದರೆ ಮಾಧ್ಯಮಗಳಲ್ಲಿ ತೋರಿಸುವುದೇ ಇಲ್ಲ. ಆದರೆ ಯಶ್ ರಾಧಿಕಾಗೆ ಮಗು ಜನನವಾದರೆ, ಧೃವ ಸರ್ಜಾಗೆ ನಿಶ್ಚಿತಾರ್ಥವಾದರೆ ತೋರಿಸುವಂತಹ ಮಟ್ಟಕ್ಕೆ ಇಳಿದಿವೆ ಎಂದರು.

         ಕಾರ್ಯಕ್ರಮದಲ್ಲಿ ಬಂಡಾಯ ಸಾಹಿತಿ ಪ್ರೋ.ಎ.ಬಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಧ್ಯಾಪಕ ಡಾ.ವಿಠ್ಠಲ ಭಂಡಾರಿ, ಕೃತಿಕಾರ ಕೆ.ಮಹಂತೇಶ್ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link