ದಾವಣಗೆರೆ
ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸೇತುವೆ ನಿರ್ಮಿಸಬೇಕೆಂದು ಒತ್ತಾಯಿಸಿ ತಾಲೂಕಿನ ಎಚ್.ಕಲ್ಪನಹಳ್ಳಿ ಬಳಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲು ಮುಂದಾಗಿದ್ದ ಗ್ರಾಮಸ್ಥರನ್ನು ತಡೆದ ಜಿಲ್ಲಾಡಳಿತವು ಸೇತುವೆ ನಿರ್ಮಾಣಕ್ಕೆ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ರಸ್ತೆ ತಡೆಯನ್ನು ವಾಪಾಸು ಪಡೆಯಲಾಯಿತು.
ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ಒತ್ತಾಯಿಸಿ ತಾಲೂಕಿನ ಎಚ್.ಕಲ್ಪನಹಳ್ಳಿ ಸಮೀಪ ಹೆದ್ದಾರಿ ಪಕ್ಕದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರು. ಈ ವಿಷಯ ತಿಳಿದು ದೌಡಾಯಿಸಿದ ಶಾಸಕ ಎನ್.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್.ಬಸವಂತಪ್ಪ ಪ್ರತಿಭಟನಾಕಾರರ ಸಭೆ ನಡೆಸಿ, ಬೇಡಿಕೆ ಈಡೇರಿಸುವ ಬಗ್ಗೆ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆದ್ದಾರಿ ತಡೆ ಚಳವಳಿಯನ್ನು ಹಿಂದಕ್ಕೆ ಪಡೆದರು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ಹೆದ್ದಾರಿ ನಿರ್ಮಾಣದ ವೇಳೆ ವೈಜ್ಞಾನಿಕವಾಗಿ ಸರ್ವೀಸ್ ರಸ್ತೆ ನಿರ್ಮಿಸುತ್ತಿಲ್ಲ. ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಬಂದು ಹೋಗಲು, ಸೇತುವೆಗಳನ್ನು ನಿರ್ಮಿಸಲು ಹಿಂದಿನಿಂದಲೂ ಮನವಿ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಬೇಡಿಕೆಗೆ ಯಾರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಹೆದ್ದಾರಿಯಿಂದ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುವಾಗ ಪಾದಚಾರಿಗಳು, ರೈತಾಪಿ ಜನರು, ವಾಹನಗಳು ಸಾಗುವಾಗ ಸಾಕಷ್ಟು ಅಪಘಾತ, ಸಾವು ನೋವುಗಳು ಸಂಭವಿಸಿವೆ. ಪ್ರತಿ ಸಲವೂ ಸೇತುವೆ ನಿರ್ಮಿಸಲು ಒತ್ತಾಯಿಸಿ ಹೋರಾಟ ನಡೆಸಿದಾಗಲೂ ಕೇವಲ ಭರವಸೆ ಮಾತ್ರ ಸಿಕ್ಕಿದ್ದು, ಈ ಬಾರಿ ಸೇತುವೆ ನಿರ್ಮಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಮಲ್ಲಶೆಟ್ಟಿಹಳ್ಳಿ ಮಾರ್ಗವಾಗಿ ಕಬ್ಬೂರು, ಬೊಮ್ಮೇನಹಳ್ಳಿ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ಸುಗಳು ಸಂಚರಿಸುತ್ತವೆ. ಎಚ್.ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ ಗ್ರಾಮಗಳ ಸೇತುವೆ ಇಲ್ಲದ್ದರಿಂದ ಜಾನುವಾರುಗಳು, ಜನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರೈತರು ಹೊಲಗಳಿಗೆ ಹೋಗಿ, ಬರಲು, ಕೃಷಿ ಉತ್ಪನ್ನ, ಕೃಷಿ ಯಂತ್ರೋಪಕರಣ ಸಾಗಿಸುವುದಕ್ಕೂ ಸಮಸ್ಯೆ ಕಾಡುತ್ತಿದೆ ಎಂದು ಅಲವತ್ತುಕೊಂಡರು.
ಸಾಕಷ್ಟು ಸಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗ ಪ್ರಾಧಿಕಾರವು ಸೇತುವೆ ನಿರ್ಮಾಣವನ್ನು ಕೈಬಿಟ್ಟಿದ್ದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಮಗೆ ಲಿಖಿತ ಭರವಸೆ ನೀಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಸೇತುವೆ ನಿರ್ಮಾಣ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೆದ್ದಾರಿ ತಡೆಯನ್ನು ಗ್ರಾಮಸ್ಥರು ವಾಪಾಸ್ ಪಡೆದರು.ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ, ಮಲ್ಲಶೆಟ್ಟಿಹಳ್ಳಿ ಹನುಮೇಶ, ಎಂ.ಜಿ.ನಾಗರಾಜಪ್ಪ, ಕೆ.ಸಿ.ಕಲ್ಲೇಶಪ್ಪ, ಕೆ.ಎಸ್.ಕಲ್ಲೇಶಪ್ಪ, ಮರುಳಸಿದ್ದಪ್ಪ, ಮುಪ್ಪಿನಪ್ಪ, ಮಂಜಪ್ಪ, ಶಿವಕುಮಾರ, ಎಚ್.ಮಂಜುನಾಥ, ಸೇವ್ಯಾನಾಯ್ಕ, ಅಜ್ಜಪ್ಪ, ಎಚ್.ಕಲ್ಪನಹಳ್ಳಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
