ತಾಯಂದಿರು ಸಮರ್ಥರಿದ್ದರೆ ,ಮಕ್ಕಳು ಸಮರ್ಥರಿರುತ್ತಾರೆ : ಮಾದುಸ್ವಾಮಿ

ತುಮಕೂರು

    ತಾಯಂದಿರು ಸಮರ್ಥರಾಗಿರಲು ಪೌಷ್ಠಿಕಯುಕ್ತ ಉತ್ತಮ ಆಹಾರ ಸೇವಿಸಿಸಬೇಕು ಇದರಿಂದ ಮಕ್ಕಳಲ್ಲಿಯೂ ಸಬಲತೆ ಸಮರ್ಥತೆ ತಾನಾಗಿ ಬರುತ್ತದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಶಕ್ತಿ ಕೇಂದ್ರ ಹಾಗೂ ಸ್ತ್ರೀಶಕ್ತಿ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಷಣ್ ಅಭಿಯಾನ್ ಪಕ್ವಾಡ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

  ನಮ್ಮ ಸಮಾಜದಲ್ಲಿ ಇರುವ ಮೌಢ್ಯತೆಯಿಂದ ಹೆಣ್ಣುಮಕ್ಕಳು ತಾಯಿಯಾದಂತಹ ಸಂದರ್ಭದಲ್ಲಿ ಬಾಣಂತನ ಪತ್ಯೆಯು ಶಿಕ್ಷೆಯಾಗಿದೆ. ಇದಕ್ಕೆ ಬದಲಾಗಿ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾಯಿಗೆ ಆ ಸಮಯದಲ್ಲಿ ಅಗತ್ಯವಾದ ಶಕ್ತಿಯುತ ಆಹಾರ ನೀಡಿ ಸುಖಕಾಲವಾಗಿಸಬೇಕು. ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಶರೀರ ಆರೋಗ್ಯವಾಗಿ ಬಲವಾಗಿದ್ದರೆ ಮನಸ್ಸು ಮತ್ತು ಬುದ್ದಿ ಚನ್ನಾಗಿರುತ್ತದೆ.

     ಆದ್ದರಿಂದ ಮಕ್ಕಳು ಮತ್ತು ಮಹಿಳೆಯರ ಅಪೌಷ್ಠಿಕತೆಯನ್ನು ಹೋಗಲಾಡಿಸಿ ಆರೋಗ್ಯವಂತ, ಶಕ್ತಿಯುತ ಸಮಾಜ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ನ್ಯಾಷನಲ್ ನ್ಯೂಟ್ರಿಷನ್ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಇದರಡಿ ಇಂದು ಜಿಲ್ಲೆಯಲ್ಲಿ ಪೋಷಣ್ ಅಭಿಯಾನ್ ಪಕ್ವಾಡ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲೆಯ ಜನರಿಗೆ ಅನುಕೂಲಮಾಡಿಕೊಡಲಾಗಿದೆ ಎಂದರು.

     ಕರ್ನಾಟಕದಲ್ಲಿ ಬಸವಣ್ಣನವರು ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿ ಶಕ್ತಿ ಮತ್ತು ಅವಕಾಶ ಕೊಟ್ಟಂತಹ ಧಾರ್ಮಿಕರು. ಇದರಿಂದ ಅನೇಕ ವಚನಗಾರ್ತಿಯರು ಹುಟ್ಟಿಕೊಂಡರು. ಸಾಧನೆ ಮಾಡಿರುವ ಹೆಣ್ಣುಮಕ್ಕಳನ್ನು ಮಾದರಿಯಾಗಿಟ್ಟುಕೊಂಡು ಪ್ರತಿಯೊಬ್ಬ ಮಹಿಳೆಯು ಏನಾದರೂ ಸಾಧಿಸಿ ಸಾಧಕರ ಪಟ್ಟಿ ಸೇರಬೇಕು, ಅಮೂಲ್ಯವಾದ ಸಮಯವನ್ನು ವ್ಯರ್ಥಮಾಡ ದೇ ಏನಾದರೂ ಒಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳುವುದು, ಇತರರಿಗೆ ನೆರವಾಗಿ ಸಹಾಯ ಮಾಡುವ ಮೂಲಕ ಕುಟುಂಬಕ್ಕೆ, ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ಕನಸು ಕಂಡು ಕನಸನ್ನು ನನಸು ಮಾಡಿಕೊಳ್ಳುವ ಗುರಿ ಸಾಧನೆಯ ಕಡೆಗೆ ಗಮನಹರಿಸಬೇಕು, ಆದಾಯದ ಮೂಲವನ್ನು ಕಂಡುಕೊಂಡು ಸದೃಢರಾಗಬೇಕು ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಾತನಾಡಿ, ಮಹಿಳೆಯರ ಆರೋಗ್ಯ, ಪೌಷ್ಠಿಕತೆ ಹಾಗೂ ಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಹೆಣ್ಣುಮಕ್ಕಳ ಹೆಸರಲ್ಲಿ ಇರುವ ಉಜ್ವಲ ಅನಿಲ ಯೋಜನೆಯಿಂದ ದೇಶದ ಸುಮಾರು 7-8 ಕೋಟಿ ಕುಟುಂಬಗಳಿಗೆ ಅನುಕೂಲವಾಗಿ ಹೆಣ್ಣುಮಕ್ಕಳು ಹೊಗೆಯಲ್ಲಿ ಅಡಿಗೆ ಮಡುವುದನ್ನು ತಪ್ಪಿಸಲಾಗಿದೆ ಎಂದು ತಿಳಿಸಿದರು.

     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ, ಸ್ವಾತಂತ್ರನಂತರದಲ್ಲಿ ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕೆಂದು ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಗೆ ಮೀಸಲಾತಿ ಕಲ್ಪಿಸಲಾಗಿದೆ ಎಂದರಲ್ಲದೇ, ಮಹಿಳೆಯರಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ ಅದರಲ್ಲೂ ಹೆಚ್ಚು ಕೆಲಸ ಮಾಡುವ ರೈತ ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ.

    ಇಂತಹ ಮಹಿಳೆಯರಿಗಾಗಿಯೇ ಪೋಷಣ್ ಅಭಿಯಾನ್ ಜಾರಿಯಾಗಿದೆ. ಈ ಯೋಜನೆ ಯಶಸ್ವಿಯಾಗಲು ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದರು. ಜಿಲ್ಲೆಯ ಹೆಣ್ಣುಮಕ್ಕಳ ಸಬಲೀಕರಣ ಹಾಗೂ ಉದ್ಯಮಶೀಲತೆಗೆ ವಿಪುಲ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.

    ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಹೆಸರು ಮಾಡಿದ್ದು, ರಾಜ್ಯಮಟ್ಟದ ಅತ್ಯುತ್ತಮ ಸ್ತೀಶಕ್ತಿ ಗುಂಪು ಎಂಬ ಪ್ರಶಸ್ತಿಗೆ ಭಾಜನವಾಗಿದ್ದ ತಿಪಟೂರು ತಾಲ್ಲೂಕು ಈಚನೂರು ಗ್ರಾಮದ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಸದಸ್ಯರನ್ನು ಸನ್ಮಾನಿಸಲಾಯಿತು.

    ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ವಿತರಣೆ ಮತ್ತು ಉದ್ಯೋಗಿನಿ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಉಪನ್ಯಾಸಕಿ ಡಾ. ಸುಜಾತ ಎಂ. ಅವರು ವಿಶೇಷ ಉಪನ್ಯಾಸ ನೀಡಿದರು.

    ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಫರೀದಾ ಬೇಗಂ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಪಾಲಿಕೆ ಉಪ ಮಹಾಪೌರರಾದ ಶಶಿಕಲಾ ಗಂಗಹನುಮಯ್ಯ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುಚ್ಚಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್. ನಟರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ಚಂದ್ರಿಕಾ, ಡಿಡಿಪಿಐ ಎಂ.ಆರ್. ಕಾಮಾಕ್ಷಿ, ತುಮಕೂರು ಕಲ್ಪತರು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ, ಎಲ್ಲಾ ತಾಲ್ಲೂಕುಗಳ ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link