ದಾವಣಗೆರೆ:
ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ, ಮೂತ್ರಪಿಂಡದಲ್ಲಿ ಕಲ್ಲಾಗುವ ಸಾಧ್ಯತೆ ಇದೆ ಎಂದು ಮೂತ್ರ ಕೋಶ ತಜ್ಞ ಡಾ, ಮೋಹನ್ ಬಾಲಯ್ಯ ಅಶ್ವತ್ಥಯ್ಯ ತಿಳಿಸಿದರು.
ನಗರದ ತರಳಬಾಳು ಬಡಾವಣೆಯಲ್ಲಿನ ಮಾಗನೂರು ಬಸಪ್ಪ ಶಾಲಾ ಸಮುಚ್ಛಯ ಸಭಾಂಗಣದಲ್ಲಿ ಶಿವಗೋಷ್ಠಿ ಸಮಿತಿ, ಶ್ರೀಶಿವಕುಮಾರಸ್ವಾಮಿ ಮಹಾಮಂಟಪ ಹಾಗೂ ಸಾದರ ನೌಕರರ ಬಳಗದ ಸಹಯೋಗದಲ್ಲಿ ನಡೆದ ಶಿವಗೋಷ್ಠಿ 270-ಸ್ಮರಣೆ-ವಚನ ಸಿರಿ 42 ಕಾರ್ಯಕ್ರಮದಲ್ಲಿ ಮೂತ್ರ ಪಿಂಡದ ಸಮಸ್ಯೆಗಳು ಮತ್ತು ಪರಿಹಾರ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ದೇಹದ ಅಂಗಾಗಗಳಲ್ಲಿ ಮೂತ್ರ ಪಿಂಡ ಮುಖ್ಯ ಅಂಗ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಕ್ಯಾಲ್ಸಿಯಂ, ಖನಿಜಗಳು ಸೇರಿದಂತೆ ಕೆಲ ಪೋಷಕಾಂಶಗಳು ಬಲ ಕಳೆದುಕೊಂಡು ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಗೆ ಕಾರಣವಾಗಲಿದೆ. ಆದ್ದರಿಂದ ಅಥೇಚ್ಚವಾಗಿ ನೀರುವ ಸೇವಿಸಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ನಿವೃತ್ತ ಶಿಕ್ಷಕ ಕೆ. ನಾಗಪ್ಪ ಮಾತನಾಡಿ, ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿಯ ನಿವೃತ್ತ ಶಿಕ್ಷಕ ಲಿಂ. ಎಂ.ಸಿದ್ಧಲಿಂಗಯ್ಯ ಶಿಕ್ಷಕ ವೃತ್ತಿಯ ಜೊತೆಗೆ ಸಮಾಜ ಸೇವೆ, ಸತ್ಕಾರ್ಯಗಳಲ್ಲೂ ತೊಡಗಿಕೊಂಡಿದ್ದರು. ಮೂಲಭೂತ ವ್ಯವಸ್ಥೆ ಇಲ್ಲದಾಗಿದ್ದ ತೂಲಹಳ್ಳಿಯ ಗ್ರಾಮದ ಏಳಿಗೆಯಲ್ಲಿ ಸಿದ್ಧಲಿಂಗಯ್ಯ ಅವರ ಪಾತ್ರ ಮಹತ್ವದ್ದಾಗಿದೆ ಎಂದರು.
ದಾವಣಗೆರೆ ಭಾಗದಲ್ಲಿ ಜನಮನ ಗೆದ್ದು ಸಿದ್ಧಲಿಂಗಯ್ಯ ಚಿರಪರಿಚಿತರಾಗಿದ್ದರು. ಶ್ರದ್ಧೆ, ನಿಷ್ಠೆ, ಜವಾಬ್ದಾರಿಯನ್ನು ಪ್ರತಿ ಕೆಲಸದಲ್ಲೂ ಮೈಗೂಡಿಸಿಕೊಂಡಿದ್ದರು. ಚಾಣಾಕ್ಷತನ, ವಾಕ್ ಚಾತುರ್ಯ, ವಿನಯ-ವಿಧೇಯತೆಯುಳ್ಳವರಾಗಿದ್ದರು. ತಾವು ಕಷ್ಟದಲ್ಲಿದ್ದರೂ ಇತರರಿಗೆ ನೆರವಾಗುವ ಗುಣ ಹೊಂದಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಆರ್.ಆರ್. ಕುಸಗೂರು ಅಧ್ಯಕ್ಷತೆ ವಹಿಸಿದ್ದರು. ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ ನಡೆಯಿತು. ಪ್ರಸಾದ ಸೇವೆ ನೀಡಿದ ತೂಲಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯು. ಮರುಳಸಿದ್ದಪ್ಪ, ಡಾ. ಎಂ.ಜಿ. ಕಿರಣ್‍ಕುಮಾರ್, ಎಸ್.ಟಿ. ಶಾಂತಗಂಗಾಧರ್, ಕೆ. ಕೆಂಚನಗೌಡ್ರು ಮತ್ತಿತರರು ಕಾರ್ಯಕ್ರಮದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ