ಕೆರೆಗೆ ನೀರು ಬಿಡದಿದ್ದರೆ ಮತದಾನ ಬಹಿಷ್ಕಾರ..!!!

ಬ್ಯಾಡಗಿ:

       ಆಣೂರು ಕೆರೆಗೆ ನೀರು ತುಂಬಿಸದೇ ಇದ್ದಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿರುವ, ತಾಲೂಕಿನ ಕೆರವಡಿ ಗ್ರಾಮಸ್ಥರು ಮಂಗಳವಾರ ಪಟ್ಟಣದಲ್ಲಿನ ತಾಲ್ಲೂಕ ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು ತಾಲೂಕಿನ ಆಣೂರ, ಮಾಸಣಗಿ, ಅಂಗರಗಟ್ಟಿ, ಶಿಡೇನೂರ, ಸೇರಿದಂತೆ ಕೆರವಡಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಮುಂದಾಗಿರುವುದು ಒಟ್ಟಾರೆ 5 ಗ್ರಾಮಗಳು ಈ ನಿರ್ಧಾರಕ್ಕೆ ಬಂದಂತಾಗಿವೆ.

         ಮನವೊಲಿಕೆ ಭರದಲ್ಲಿ ಸುಳ್ಳು, ತಮ್ಮ ಘನತೆಗೆ ತಕ್ಕುದಲ್ಲ:ಈ ಸಂದರ್ಭದಲ್ಲಿ ಮಾತನಾಡಿದ ಶಿವಪುತ್ರಪ್ಪ ಕುಂಚೂರ ಸುಳ್ಳು ಹೇಳಿ ರೈತರನ್ನು ನಂಬಿಸುವ ಪ್ರಯತ್ನಕ್ಕೆ ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಹೋಗಬಾರದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಜಿಲ್ಲಾಧಿಕಾರಿಗಳು ಸುಳ್ಳು ಹೇಳುವ ಮೂಲಕ ಮತದಾನ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುವ ಹಲವಾರು ತಂತ್ರಗಳನ್ನು ಬಳಸುತ್ತಿದ್ದಾರೆ, ಮನವೊಲಿಕೆ ಮಾಡುವ ಭರದಲ್ಲಿ ಸುಳ್ಳು ಹೇಳುವುದು ತಮ್ಮ ಘನತೆಗೆ ತಕ್ಕುದಲ್ಲ ನಿಮ್ಮ ಬೆದರಿಕೆಗಳಿಗೆ ಜಗ್ಗವ ಪ್ರಶ್ನೆಯೇ ಇಲ್ಲವೆಂದರು.

         ಇನ್ನೂ ಹೆಚ್ಚಿನ ಗ್ರಾಮಗಳು ಮತದಾನದಿಂದ ದೂರ ಉಳಿಯಲಿದ್ದಾರೆ: ಲಿಂಗರಾಜ ದೊಡ್ಮನಿ ಮಾತನಾಡಿ, ನೀರಿಗಾಗಿ ತಾಲೂಕಿನಲ್ಲಿನ ಎಲ್ಲ ಗ್ರಾಮಸ್ಥರು ಒಂದಾಗಿ ಹೋರಾಟ ಮಾಡಲು ಸಿದ್ಧರಾಗಿದ್ದಾರೆ, ಹೋರಾಟಕ್ಕೆ ಈಗಾಗಲೇ ರೈತ ಸಂಘ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗ್ರಾಮಗಳು ಮತದಾನದಿಂದ ದೂರ ಉಳಿಯುವ ಲಕ್ಷಣಗಳಿವೆ, ಒಟ್ಟು 5 ಗ್ರಾಮಗಳ ಜನರು ಚುನಾವಣೆ ಬಹಿಷ್ಕರಿಸಿದ್ದು ಕೆಲವೇ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಗ್ರಾಮಗಳು ಸೇರ್ಪಡೆಯಾಗಲಿವೆ, ಹೀಗಾಗಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು..

       ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಂದ ದೂರ: ಕಲವೀರಪ್ಪ ಬ್ಯಾಡಗಿ ಮಾತನಾಡಿ, ಮುಂಬರುವ ಲೋಕಸಭೆ ಸೇರಿದಂತೆ ಯಾವುದೇ ಸಾರ್ವತ್ರಿಕ ಚುನಾವಣೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ನಮ್ಮ ಮೇಲೆ ಯಾವುದೇ ಕ್ರಮಗಳನ್ನು ಕೈಗೊಂಡರೂ ಜಗ್ಗುವುದಿಲ್ಲ ‘ಜೀವ ಬಿಟ್ಟೇವು ಜೀವಜಲ ಬಿಡುವುದಿಲ್ಲ’ ಎಂಬುದು ನಮ್ಮ ಹೋರಾಟದ ಘೋಷವಾಕ್ಯ ಹೀಗಾಗಿ ಕೆರೆಗೆ ನೀರು ತುಂಬಿಸುವುದು ನಮ್ಮ ಅಳಿವು ಉಳಿವಿನ ಪ್ರಶ್ನೆ ಎಂದರು.

         ನೀರು ಕೊಟ್ಟು ಮತ ಕೇಳಿ: ಇಂದುಧರ ಬಡಿಗೇರ ಮಾತನಾಡಿ, ನೀರು ಕೊಟ್ಟು ಮತ ಕೇಳಿ” ಇದೇ ನಮ್ಮಗಳ ನಿರ್ಧಾರವಾಗಿದೆ, ಸಾವಿರ ಅಡಿ ಆಳಕ್ಕೆ ಕೊರೆಸಿದರೂ ಹನಿ ನೀರು ಸಿಗುತ್ತಿಲ್ಲ ಈಗಾಗಲೇ 4 ಕೀಮೀ. ಕ್ರಮಿಸಿ ಕುಡಿಯವ ನೀರು ತರಬೇಕಾಗಿದೆ ಹೀಗಾಗಿ ಚುನಾವಣೆ ಬಹಿಷ್ಕಾರದ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದರು.. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಸವರಾಜ ಗುತ್ತಲ, ಆರ್.ಮತ್ತೂರ, ರುದ್ರಪ್ಪ, ಚಂದ್ರಪ್ಪ, ಕಲ್ಪಪ್ಪ ಸಾಲಿಮಠ, ಎಸ್.ಎಸ್.ಬಾಳಿಕಾಯಿ, ಹೊನ್ನಪ್ಪ ಕಜ್ಜರಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link