ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಸುಳ್ಳು : ಎಂ.ಟಿ. ಗುರುಶಾಂತಪ್ಪ

ಹೊನ್ನಾಳಿ:

     ತಾಲ್ಲೂಕಿನ ಸೋಮನಮಲ್ಲಾಪುರ ಗ್ರಾಮದ ಸರ್ವೇ ನಂಬರ್ 30ರಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಎಂ.ಟಿ. ಗುರುಶಾಂತಪ್ಪ ಅವರು ಕಲ್ಲು ತೆಗೆಯುವ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಕರುನಾಡ ಸಮರ ಸೇನೆ ಅಧ್ಯಕ್ಷ ಮಲ್ಲೇಶ್ ಮಾಳಕ್ಕಿ ಆರೋಪಿಸಿರುವುದು ಶುದ್ಧ ಸುಳ್ಳು, ದುರುದ್ದೇಶಪೂರಿತ ಹೇಳಿಕೆ ಎಂದು ಪರವಾನಿಗೆದಾರ ಎಂ.ಟಿ. ಗುರುಶಾಂತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಈ ವಿಷಯ ಸ್ಪಷ್ಟಪಡಿಸಿದರು.

       ಸೋಮನಮಲ್ಲಾಪುರದ ಅರಣ್ಯ ಇಲಾಖೆಯ ಗುಡ್ಡದ ಪ್ರದೇಶದಲ್ಲಿ ಅಧಿಕೃತವಾಗಿ 1.10 ಗುಂಟೆ ಜಾಗಕ್ಕೆ ನಾನು ಪರವಾನಿಗೆ ಪಡೆದುಕೊಂಡಿದ್ದೇನೆ. ಈಗ 1 ಎಕರೆ ಪ್ರದೇಶದಲ್ಲಿ ಮಾತ್ರ ಕಲ್ಲು ತೆಗೆಯುವ ಕೆಲಸ ನಡೆಯುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಗಣಿ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಎಲ್ಲಾ ರೀತಿಯ ನಿಬಂಧನೆಗೊಳಪಟ್ಟು ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಅಕ್ರಮವಲ್ಲ ಎಂದು ದಾಖಲೆಗಳನ್ನು ಪ್ರದರ್ಶಿಸುವ ಮೂಲಕ ಸ್ಪಷ್ಟಪಡಿಸಿದರು.

      ಗಣಿಗಾರಿಕೆ ಪ್ರದೇಶದಲ್ಲಿ ತಂತಿ ಬೇಲಿ ಹಾಕುವ ಸಂಬಂಧ ಅರಣ್ಯ ಇಲಾಖೆಗೆ 6 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ನಮಗೆ ಕೊಟ್ಟ ಲೀಸ್‍ನ ಅವಧಿ ಮುಗಿದ ಮೇಲೆ ಅರಣ್ಯ ಇಲಾಖೆಯವರು ಅಲ್ಲಿ ಯಾರೂ ಪ್ರವೇಶಿಸದಂತೆ ತಂತಿ ಬೇಲಿ ಹಾಕುತ್ತಾರೆ ಎಂದರು. ಗಣಿಗಾರಿಕೆಗೆ ಯಾವುದೇ ಬಾಲ ಕಾರ್ಮಿಕರನ್ನು ನೇಮಿಸಿಕೊಂಡಿಲ್ಲ ಎಂದರು.

      ಸಿಡಿಮದ್ದು ಸಿಡಿಸಲು ಅನುಮತಿ ಪಡೆದುಕೊಂಡ ಗುತ್ತಿಗೆದಾರರನ್ನು ಬಳಸಿಕೊಳ್ಳುತ್ತೇವೆ. ಜನಸಂಪರ್ಕ ಇಲ್ಲದ ಸಂದರ್ಭದಲ್ಲಿ ಈ ಕೆಲಸ ನಡೆಯುತ್ತದೆ. ಸೋಮನಮಲ್ಲಾಪುರ ಗ್ರಾಮದಿಂದ ಕಲ್ಲು ತೆಗೆಯುವ ಪ್ರದೇಶ 3 ಕಿ.ಮೀ. ದೂರದಲ್ಲಿದೆ. ಯಾವುದೇ ಮನೆಗಳಿಗೆ ಹಾನಿಯಾಗುವ ಪ್ರಶ್ನೆಯೇ ಇಲ್ಲ ಎಂದರು.

        ಗಣಿಗಾರಿಕೆಗೆ ಹೊಸದಾಗಿ ವಾಹನಗಳನ್ನು ಖರೀದಿಸಿದ್ದು, ಇನ್ನೂ ನಂಬರ್ ಬರೆಸಲಾಗಿಲ್ಲ. ನೋಂದಣಿ ಪ್ರಕ್ರಿಯೆ ಮುಗಿದ ಕೂಡಲೇ ನಂಬರ್ ಬರೆಸಲಾಗುವುದು ಎಂದರು.

       ಹಣಕ್ಕೆ ಬೇಡಿಕೆ: ಕರುನಾಡ ಸಮರ ಸೇನೆಯ ಪದಾಧಿಕಾರಿ ಟೈಲ್ಸ್ ವ್ಯಾಪಾರಿ ಇಸ್ಮಾಯಿಲ್ ಅವರು ಕಲ್ಲು ಗಣಿಗಾರಿಕೆ ಮಾಡುವವರು ನಮಗೆ ಹಣ ತಂದು ಕೊಡುತ್ತಿದ್ದಾರೆ. ನೀವೂ ಕೂಡಾ ನಮಗೆ ಹಣ ಕೊಡಬೇಕು ಎಂದು ಫೋನ್ ಮಾಡಿ ಡಿಮ್ಯಾಂಡ್ ಮಾಡಿದರು ಎಂದು ಸಬ್ ಲೀಸ್ ಪಡೆದುಕೊಂಡ ಗುತ್ತಿಗೆದಾರ ರಾಘವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಅವರು ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ನಾವು ಹಣ ಕೊಡಲಿಲ್ಲ. ಹೀಗಾಗಿ ನಮ್ಮ ವಿರುದ್ಧ ಪ್ರತಿಭಟನೆ ಮಾಡಲಾಗಿದೆ ಎಂದು ವಿವರಿಸಿದರು.

      ಈ ಸಂಘಟನೆಯವರು ಇದೇ ರೀತಿಯ ಕಿರುಕುಳ ಕೊಟ್ಟರೆ ಕಾನೂನು ಮೊರೆ ಹೋಗಲಾಗುವುದು ಎಂದು ಗುರುಶಾಂತಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೊನ್ನಾಳಿ ಟೌನ್ ಸಹಕಾರ ಸಂಘದ ಅಧ್ಯಕ್ಷ ಡಿ.ಆರ್. ಶಿವಶಂಕರಪ್ಪ, ಮರಡಿಗೌಡ್ರು, ಮಾನವ ಹಕ್ಕು ಆಯೋಗದ ಸದಸ್ಯ ವಸಂತ ಪೂಜಾರ್, ಗೊಲ್ಲರಹಳ್ಳಿಯ ಸಾಮಿಲ್ ಬಸವರಾಜಪ್ಪ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link