ಪರಿಸರ ಸಂರಕ್ಷಣೆ, ಮೂಲಸೌಕರ್ಯಕ್ಕೆ ಕ್ರಮ

ಚಿತ್ರದುರ್ಗ:

      ಜಿಲ್ಲೆಯಲ್ಲಿನ ಗಣಿಗಾರಿಕೆ ಪ್ರದೇಶದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಪರೋಕ್ಷ ಗಣಿ ಬಾಧಿತ ಪ್ರದೇಶ ವ್ಯಾಪ್ತಿಯೆಂದು ನಿಗದಿಪಡಿಸಿ, ಇಲ್ಲಿನ ಪರಿಸರ ಸಂರಕ್ಷಣೆ, ಮೂಲಭೂತ ಸೌಕರ್ಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅವರು ಹೇಳಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಚಿತ್ರದುರ್ಗ ಜಿಲ್ಲೆಯಲ್ಲಿ ಹೊಳಲ್ಕೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಗಣಿಗಾರಿಕೆ ಪ್ರದೇಶವಿದೆ. ಹೀಗಾಗಿ ಡಿಎಂಎಫ್ ಅನುದಾನ ಹೊಳಲ್ಕೆರೆ ತಾಲ್ಲೂಕಿನಿಂದಲೇ ಶೇ. 95 ರಷ್ಟು ಸಂಗ್ರಹವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತ್ಯಕ್ಷ ಗಣಿಬಾಧಿತ ಹಾಗೂ ಪರೋಕ್ಷ ಗಣಿಬಾಧಿತ ಪ್ರದೇಶಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗುತ್ತಿದ್ದು, ಗಣಿಗಾರಿಕೆ ಪ್ರದೇಶದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯನ್ನು ಪರೋಕ್ಷ ಗಣಿ ಬಾದಿತ ಪ್ರದೇಶ ವಲಯವನ್ನಾಗಿ ನಿಗದಿಪಡಿಸಲಾಗಿದೆ ಎಂದು ಹೇಳಿದರು

        2016-17 ರಿಂದ ಈವರೆಗೆ ಒಟ್ಟು 104. 36 ಕೋಟಿ ರೂ. ಡಿಎಂಎಫ್ ನಿಧಿ ಸಂಗ್ರಹವಾಗಿದೆ. ಈ ಪೈಕಿ 1.01 ಕೋಟಿ ರೂ. ಹೊಳಲ್ಕೆರೆ ತಾಲ್ಲೂಕು ಒಂದರಿಂದಲೇ ಸಂಗ್ರಹವಾಗಿದೆ. ಉಳಿದಂತೆ ಚಳ್ಳಕೆರೆ ತಾಲ್ಲೂಕು- 67.88 ಲಕ್ಷ, ಚಿತ್ರದುರ್ಗ- 1.47 ಕೋಟಿ, ಹಿರಿಯೂರು-8.97 ಲಕ್ಷ, ಹೊಸದುರ್ಗ- 39.40 ಲಕ್ಷ, ಮೊಳಕಾಲ್ಮೂರು ತಾಲ್ಲೂಕಿನಿಂದ 20.39 ಲಕ್ಷ ರೂ. ನಿಧಿ ಸಂಗ್ರಹವಾಗಿದೆ.

        ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ವಿವಿಧ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೆ ಮೊದಲ ಹಂತದಲ್ಲಿ 21 ಕೋಟಿ ರೂ., ಹಾಗೂ ಎರಡನೆ ಹಂತದಲ್ಲಿ 48.25 ಕೋಟಿ ರೂ. ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, 3 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಿದರು

      ಡಿಎಂಎಫ್ ಅನುದಾನ ಸಂಗ್ರಹ ಪ್ರಕ್ರಿಯೆಯು ನಿರಂತರವಾಗಿದ್ದು, ಖನಿಜ ಪ್ರತಿಷ್ಠಾನದ ಮಾರ್ಗಸೂಚಿಯಂತೆ ಸಂಗ್ರಹವಾಗಿರುವ ಮೊತ್ತಕ್ಕೆ ಮೂರು ಪಟ್ಟು ಅನುಪಾತದ ಮೊತ್ತಕ್ಕೆ ಅನುಗುಣವಾಗಿ ಅಂದರೆ ಸುಮಾರು 312 ಕೋಟಿ ರೂ. ಗಳ ಮೊತ್ತಕ್ಕೆ ಗಣಿಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಬೇಕಿದ್ದು, ಅದರಂತೆ ಕೂಡಲೆ ಕ್ರಿಯಾ ಯೋಜನೆ ರೂಪಿಸಬೇಕು.

       ಡಿಎಂಎಫ್ ನಿಧಿ ಬಳಕೆಗಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಯನ್ವಯ ಅನುದಾನ ನಿಗದಿಪಡಿಸಿ, ಕ್ರಿಯಾ ಯೋಜನೆ ರೂಪಿಸಿದರೆ ಯಾವುದೇ ಆಕ್ಷೇಪಣೆ ಬರುವುದಿಲ್ಲ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಸಭೆಗೆ ಗೈರು ಹಾಜರಾದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರರಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

        ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಬಾಧಿತ ಪ್ರದೇಶಗಳನ್ನು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಮಿತಿಯಿಂದಲೇ ವೈಜ್ಞಾನಿಕವಾಗಿ ಗುರುತಿಸುವುದಲ್ಲದೆ, ಗಣಿಗಾರಿಕೆ, ಧೂಳು, ದಾಸ್ತಾನು ಪ್ರದೇಶ, ಸಾರಿಗೆ ಕಾರಿಡಾರ್‍ಗಳಲ್ಲೂ ಬಾಧಿತ ಪ್ರದೇಶ ನಿಗದಿಪಡಿಸಬೇಕು. ಅಲ್ಲದೆ ಭೌತಿಕ ಮತ್ತು ಸಾಮಾಜಿಕ ಪರಿಣಾಮದ ಪ್ರದೇಶ ಗುರುತಿಸುವುದೂ ಅಗತ್ಯವಾಗಿದೆ ಎಂದರು

       ವ್ಯಾಪ್ತಿ ನಿಗದಿಯಾಗದಿದ್ದಲ್ಲಿ, ಕ್ರಿಯಾ ಯೋಜನೆ ರೂಪಿಸುವುದು ಕಷ್ಟಕರವಾಗಲಿದೆ. ಸಮಿತಿಯ ನಿರ್ಧಾರದಂತೆ ಡಿಎಂಎಪ್ ನಿಧಿ ಅನುದಾನದಡಿ ಪ್ರಥಮ ಆದ್ಯತೆಯಾಗಿ ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ ಈ ಕ್ಷೇತ್ರಗಳಿಗೆ ತಲಾ ಶೇ. 10 ರಷ್ಟು ಅನುದಾನ, ಅಂಗವಿಕಲರ ಕಲ್ಯಾಣ, ನೈರ್ಮಲ್ಯ, ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೆ ತಲಾ ಶೆ. 05 ಸೇರಿದಂತೆ ಒಟ್ಟು ಶೇ. 60 ರಷ್ಟು ಅನುದಾನವನ್ನು ಮೀಸಲಿಡಲು ತೀರ್ಮಾನಿಸಲಾಗಿದೆ.

        ಉಳಿದಂತೆ ಇತರೆ ಆದ್ಯತೆಯಡಿ ಮೂಲಭೂತ ಸೌಕರ್ಯ, ನೀರಾವರಿ, ಶಕ್ತಿ ಮತ್ತು ನೀರಿನ ಅಭಿವೃದ್ಧಿ, ಪರಿಸರದ ಗುಣಮಟ್ಟ ಹೆಚ್ಚಿಸುವ ಕಾರ್ಯಗಳಿಗೆ ತಲಾ ಶೇ. 10 ಸೇರಿದಂತೆ ಒಟ್ಟು ಶೇ. 40 ರಷ್ಟು ಅನುದಾನ ವಿನಿಯೋಗಿಸಲು ತೀರ್ಮಾನಿಸಲಾಗಿದೆ ಎಂದರು.

        ಸಭೆಯಲ್ಲಿ ಶಾಸಕರುಗಳಾದ ಟಿ. ರಘುಮೂರ್ತಿ, ಗೂಳಿಹಟ್ಟಿ ಶೇಖರ್, ಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಜಿ.ಪಂ. ಸದಸ್ಯ ನರಸಿಂಹರಾಜು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಸೇರಿದಂತೆ ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap