ಗ್ರಾಮೀಣ ಮಹಿಳೆಯರ ಆರೋಗ್ಯ ಸುಧಾರಣೆಯಾಗಬೇಕು; ಕೆ.ಅನಂತ್

ಚಿತ್ರದುರ್ಗ:

      ಗ್ರಾಮೀಣ ಪ್ರದೇಶಗಳಲ್ಲಿ ಬಡ ಮಹಿಳೆಯರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಿ ನರಳುತ್ತಿರುವವರನ್ನು ಗುರುತಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್ ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.

      ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ತ.ರಾ.ಸು.ರಂಗ ಮಂದಿರದಲ್ಲಿ ನಡೆದ 30 ವರ್ಷದಿಂದ 65 ವರ್ಷದ ಮಹಿಳೆಯರಿಗೆ ಆರೋಗ್ಯ ತಪಾಸಣೆ ಬಗ್ಗೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

      ಕೆಲವು ಮಹಿಳೆಯರಿಗೆ ತಮಗೆ ಯಾವ ಕಾಯಿಲೆಯಿದೆ ಎನ್ನುವ ಬಗ್ಗೆ ಗೊತ್ತೆ ಇರುವುದಿಲ್ಲ. ಎರಡು ಅಥವಾ ಮೂರನೆ ಸ್ಟೇಜ್‍ನಲ್ಲಿರುವವರನ್ನು ಪತ್ತೆ ಹಚ್ಚಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರೆ ಅದಕ್ಕಿಂತಲೂ ಪುಣ್ಯದ ಕೆಲಸ ಬೇರೆ ಯಾವುದೂ ಇಲ್ಲ.

     ರಾಜ್ಯದಲ್ಲಿ 1500 ಆಸ್ಪತ್ರೆಗಳನ್ನು ಗುರುತಿಸಿದ್ದೇವೆ. ಯಾವ ಖಾಯಿಲೆಗೆ ರೋಗಿಯನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆನ್ನುವುದನ್ನು ತಿಳಿದುಕೊಂಡು ರೋಗದಿಂದ ನರಳುತ್ತಿರುವವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಮೂಲ್ಯವಾದ ಪ್ರಾಣ ಉಳಿಸಿ ಇಲಾಖೆಯ ಕಾರ್ಯಕ್ರಮಗಳು ಯಶಸ್ವಿಯಾಗಲು ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಆಶಾ ಕಾರ್ಯಕರ್ತೆಯರಲ್ಲಿ ಮನವಿ ಮಾಡಿದರು.

      ಆರೋಗ್ಯವಂತ ಮಹಿಳೆಯರು ಕಡ್ಡಾಯವಾಗಿ ಆರು ತಿಂಗಳು ಇಲ್ಲವೇ ಪ್ರತಿ ವರ್ಷಕ್ಕೊಮ್ಮೆ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಿ. ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ತಪಾಸಣೆ ನಡೆಸುವ ಕಾರ್ಯವನ್ನು ಸದ್ಯದಲ್ಲಿಯೇ ಆಯೋಜಿಸಲಾಗುವುದು ಎಂದು ಹೇಳಿದ ಅವರು ಡಿಸೆಂಬರ್ ಒಳಗೆ ಕ್ಯಾಂಪ್ ಮಾಡಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಿದರು.

     ಜಿ.ಪಂ.ಸದಸ್ಯ ನರಸಿಂಹರಾಜು ಮಾತನಾಡುತ್ತ ಮಹಿಳೆಯರ ಆರೋಗ್ಯಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅದಕ್ಕಾಗಿ ಯಾರು ಮುಜುಗರಪಟ್ಟುಕೊಳ್ಳದೆ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಹೇಳಿದರು.

     ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುವ ಗ್ರಾಮೀಣ ಬಡ ಮಹಿಳೆಯರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ನಿಮ್ಮಗಳ ಮೇಲಿರುವುದರಿಂದ ಪ್ರಾಥಮಿಕ ಹಂತದಲ್ಲಿಯೇ ವ್ಯಾದಿಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸುವ ಮೂಲಕ ಸೇವೆಯಲ್ಲಿ ದೇವರನ್ನು ಕಾಣಿ ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಹೋಗಿ ಯಾರಲ್ಲಿ ಯಾವ ಕಾಯಿಲೆಯಿದೆ ಎಂಬುದನ್ನು ತಿಳಿದುಕೊಂಡು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಟ್ಸ್‍ಪ್, ಫೇಸ್‍ಬುಕ್‍ಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಸಂಕೋಚ ಬಿಟ್ಟು ಚಿಕಿತ್ಸೆ ಪಡೆದುಕೊಳ್ಳಿ ಎಂದರು.

      ಜಿ.ಪಂ.ಸದಸ್ಯ ಗುರುಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪಾಲಾಕ್ಷಪ್ಪ, ಕುಷ್ಟ ರೋಗ ನಿವಾರಣಾ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ಡಾ.ಕಂಗಾಳಿಮಠ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರುಗಳಾದ ಎಂ.ಬಿ.ಹನುಮಂತಪ್ಪ, ಖಾಸಿಂಸಾಬ್ ಆಶಾ ಕಾರ್ಯಕರ್ತೆ ಸುಮ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap