ಹೊಸದುರ್ಗ;
ನಾಡಿನ ಬೆನ್ನಲಬು ಕೃಷಿಕರೇ ಹೊರತು; ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ಸಾಧು-ಸಂತರಾಗಲಿ ಅಲ್ಲ. ಯಾವ ನಾಡಿನಲ್ಲಿ ಕೃಷಿಕರು ಅವಗಣೆನೆಗೆ ಒಳಗಾಗುತ್ತಾರೋ ಆ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ. ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಸಾಣೆಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ ಎಸ್ ಎಸ್ ರಂಗಮಂದಿರದಲ್ಲಿ ಆಯೋಜಿಸಿದ್ದ `ಮಣ್ಣಿನ ಫಲವತ್ತತೆ ಮತ್ತು ಸಮಗ್ರ ಕೃಷಿ’ ಕುರಿತ ವಿಚಾರಸಂಕಿರಣದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಾರಂಪರಿಕವಾಗಿ ಹೊನ್ನು, ಹೆಣ್ಣು, ಮಣ್ಣನ್ನು ಮಾಯೆಯೆಂದು ಜನ ಕರೆಯುತ್ತಿದ್ದರು. ಆದರೆ 12 ನೆಯ ಶತಮಾನದ ಶರಣರು ಇವುಗಳನ್ನು ಮಾಯೆ ಎಂದು ಪರಿಗಣಿಸದೆ ಮನದ ಮುಂದಣ ಆಸೆಯೇ ಮಾಯೆ ಎಂದರು. ಆಸೆಯೇ ಮಾಯೆ. ಆಸೆಯನ್ನು ತ್ಯಜಿಸಿದವನೇ ಈಶ. ಈ ನಾಡಿನಲ್ಲಿ ಆಸೆಯನ್ನು ತ್ಯಜಿಸಿದವನು ಕೃಷಿಕ. ಈ ಕೃಷಿಕರೇ ಈಶ. ಯಾವ ಆಹಾರ ಪದಾರ್ಥಗಳನ್ನೂ ಜೆರಾಕ್ಸ್ ಮಾಡಲು ಸಾಧ್ಯವಿಲ್ಲ. ನಿಜವಾದ ಜೆರಾಕ್ಸ್ ಮಿಷನ್ ಭೂತಾಯಿ. ಇಂಥ ಭೂತಾಯಿಯ ಬಗ್ಗೆ ಅವಜ್ಞೆ ಶುರುವಾಗಿದೆ.
ರೈತರು ಒಂದು ವರ್ಷ ನಮ್ಮ ಬೇಡಿಕೆಗಳು ಈಡೇರುವವರೆಗೂ ಸತ್ಯಾಗ್ರಹ ಮಾಡಿದರೆ ನಾಡಿನ ಸ್ಥಿತಿ ಏನಾಗಬಹುದೆಂದು ಯಾರು ಊಹಿಸಲಾರುರು ಎಂದರು ಕೃಷಿಯೂ ಒಂದು ಉದ್ಯಮವೇ. ಕಾರ್ಖಾನೆಗಳಲ್ಲಿ ಉತ್ಪಾದನೆಯಾದ ವಸ್ತುಗಳಿಗೆ ಬೆಲೆ ಕಟ್ಟುವಂತೆ ರೈತ ಉತ್ಪಾದಿಸಿದ ಬೆಳೆಗಳಿಗೂ ಬೆಲೆ ನಿಗದಿಮಾಡುವ ಕ್ಷಮತೆ ರೈತರಿಗೆ ಬರಬೇಕು. ಭೂಮಿ, ನೀರು, ಆಕಾಶ, ಗಾಳಿ ಮತ್ತು ಬೆಂಕಿ ಪಂಚಭೂತಗಳು. ಇವುಗಳು ಸಮಸ್ಥಿತಿಯಲ್ಲಿದ್ದರೆ ಕೃಷಿಕರ ಬದುಕು ಉಲ್ಲಾಸವಾಗಿರಲು ಸಾಧ್ಯ ಎಂದು ಶ್ರೀಗಳು ನುಡಿದರು
ಕೃಷಿಕರಲ್ಲಿ ಕೃಷಿಯ ಬಗ್ಗೆಯೇ ಬೇಸರ ಮೂಡಿದೆ. ಒಂದು ಜವಾನ ಕೆಲಸ ಸಾಕು ಎನ್ನುವಂತಾಗಿದೆ. ವ್ಯವಸಾಯ ಎಂದರೆ ನೀನು ಸಾಯ, ನಿನ್ನ ಮಗ ಸಾಯ, ನಿನ್ನ ಮನೆಮಂದಿಯಲ್ಲ ಸಾಯ ಎನ್ನುವ ಮಾತಿದೆ ಇದು ಸಾಯ ಅಲ್ಲ `ಸಹಾಯ’. ಭೂಮಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಎಷ್ಟೇ ಕಷ್ಟ ಬಂದರೂ ರೈತರು ಭೂಮಿಯನ್ನು ಮಾರಬಾರದು.
ಭೂಮಿಗೆ ಸಿಗಬೇಕಾದ ಗೌರವ ನೀಡದೇ ಹೋದರೆ ಭೂಮಿಯ ಮೇಲೆ ರೈತರು ಅತ್ಯಾಚಾರ ಮಾಡಿದಂತೆ. ಸರಿಯಾಗಿ ಅರ್ಥಮಾಡಿಕೊಂಡು ಕೃಷಿ ಮಾಡಿದರೆ ಕೃಷಿ ಖಂಡಿತಾ ಲಾಭದಾಯಕವೇ. ಇದಕ್ಕೆ ಉದಾಹರಣೆ ಕವಿತಾ ಮಿಶ್ರ ಮತ್ತು ಹುಲ್ಲುನಾಚೇಗೌಡ. ಇವರು ತಮ್ಮ ಉದಾಹರಣೆಯ ಮೂಲಕ ಕೃಷಿಕರಿಗೆ ಮನೋಬಲವನ್ನು, ಹೊಸ ಯೋಚನಾ ಕ್ರಮಗಳನ್ನು ಅನುಸರಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು
ರೈತ ಯಶಸ್ವಿಯಾಗಲು ಒಂದೆರಡು ವರ್ಷಗಳು ಸಾಲದು; ಇದೊಂದು ನಿರಂತರ ಪ್ರಕ್ರಿಯೆ. ಇಂದು ರಾಸಾಯನಿಕ ಗೊಬ್ಬರಗಳಿಂದ ಭೂಮಿ ಬರಡಾಗಿದೆ. ಮತ್ತೆ ಭೂತಾಯಿಗೆ ಸತ್ವ ತುಂಬುವ ಅಗತ್ಯವಿದೆ. ಬಹುಮಹಡಿ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ರೈತರು ಹಾಲು, ತರಕಾರಿ, ಸೌದೆಗಳನ್ನು ಕೊಳ್ಳುವ ಸ್ಥಿತಿ ಬಂದಿರುವುದು ದುರಂತದ ಸಂಕೇತ. ಗ್ರಾಮಗಳು ಕೃಷಿ ಪ್ರವಾಸೋದ್ಯಮದ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಹರಪನಹಳ್ಳಿ ತಾಲ್ಲೂಕಿನ ಕಡಬಗೆರೆ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಇಂಥ ಸಣ್ಣ ಸಣ್ಣ ಪ್ರಯತ್ನಗಳಿಂದಲೇ ದೊಡ್ಡ ದೊಡ್ಡ ಕಾರ್ಯ ನಡೆಯುವವು. ಈ ಪ್ರಯತ್ನ ನಿಮ್ಮ ನಿಮ್ಮ ಗ್ರಾಮಗಳಲ್ಲೂ ನಡೆದು ದೇಶಕ್ಕೆ ಮಾದರಿಯಾಗಲಿ ಎಂದರು.
`ಸಮಗ್ರ ಕೃಷಿ ಪದ್ಧತಿ’ ಕುರಿತಂತೆ ರಾಯಚೂರಿನ ಯಶಸ್ವಿ ರೈತ ಮಹಿಳೆ ಕವಿತಾ ಉಮಾಶಂಕರ್ ಮಿಶ್ರಾ ಮಾತನಾಡಿ ಕುವೆಂಪು ಅವರು ಹೇಳಿದಂತೆ ಕರ್ಮ ಮತ್ತು ಧರ್ಮ ಎರಡೂ ರೈತರ ಮೇಲೆಯೇ ನಿಂತಿವೆ. ರೈತರ ಮಕ್ಕಳಿಗೆ ಹೆಣ್ಣುಕೊಡಲು, ಹೆಣ್ಣುಮಕ್ಕಳು ಮದುವೆಯಾಗಲು ಒಪ್ಪುತ್ತಿಲ್ಲ. ಕೇವಲ ಆಳುಗಳ ಮೇಲೆ ಅವಲಂಬಿಸಿದರೆ ಕೃಷಿ ಸುಖದಾಯಕವಾಗುವುದಿಲ್ಲ ಎಂದರು
`ಮಣ್ಣಿನ ಫಲವತ್ತತೆ’ ಕುರಿತಂತೆ ಕೋಲಾರದ ಸಾವಯವ ಕೃಷಿ ತಜ್ಞ ಡಾ. ಕೆ ಆರ್ ಹುಲ್ಲುನಾಚೇಗೌಡ ಮಾತನಾಡಿ ಕವಿತಾ ಮಿಶ್ರ ಭಾರತದಲ್ಲಿಯೇ ಹೆಣ್ಣುಮಕ್ಕಳು ಕೃಷಿಯಲ್ಲಿ ಸಾಧನೆ ಮಾಡಿದವರು. ನಾನು ಪ್ರಾಧ್ಯಾಪಕನಾಗಿ ವೃತ್ತಿ ಆರಂಭಿಸಿದ್ದೆ. ಮನೆಯಲ್ಲಿ ರೇಶ್ಮೆ ಕೃಷಿ ಮಾಡುತ್ತಿದ್ದರು. ಅದರಲ್ಲಿ ವಿಫಲರಾದಾಗ. ನಾನು ವೃತ್ತಿಗೆ ರಾಜಿನಾಮೆ ನೀಡಿ ಮತ್ತೆ ಹಳ್ಳಿಗೆ ವಾಪಸ್ಸು ಬಂದು ರೇಶ್ಮೆ ಕೃಷಿ ಆರಂಭಿಸಿ ಯಶಸ್ವಿಯಾದೆ ಎಂದರು
ಥಿಯರಿ ಓದುವುದರ ಜೊತೆಗೆ ಪ್ರಾಕ್ಟಿಲ್ ಆಗಿ ಕೆಲ ಮಾಡಲು ಶುರು ಮಾಡಿದೆ. ಸಾಕಷ್ಟು ಹಣ ಸಂಪಾದನೆ ಮಾಡಿದ್ದೇನೆ. ನನ್ನ ಖರ್ಚಿನಲ್ಲಿಯೇ ಇಂಥ ಸಾವಿರಾರು ಕಾರ್ಯಕ್ರಮಗಳನ್ನು ಮಾಡಿದ್ದೇನೆ. ನಿಜವಾದ ಬೆಳಕಿನ ಹಬ್ಬ ಇದು. ನಮ್ಮ ಸಂಕುಚಿತ ಸ್ವಭಾವವನ್ನು ಬಿಟ್ಟು ಹೆಮ್ಮೆಯಿಂದ `ರೈತ’ ಎಂದು ಪರಿಚಯಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








