ದೇಶದಲ್ಲಿ ಶೇ 40 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ : ಆರ್.ಚೌಡರೆಡ್ಡಿ ತೂಪಲ್ಲಿ

ಗುಬ್ಬಿ

    ಬಿಜೆಪಿ ಸರ್ಕಾರ ಮೂರು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಷ್ಟೇ ಸಂಖ್ಯೆ ನಿರುದ್ಯೋಗ ಸೃಷ್ಟಿಸಿ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಈ ಸಂದರ್ಭದಲ್ಲಿ ಪದವೀಧರರು ಬಿಜೆಪಿ ಸರ್ಕಾರದಿಂದ ಏನನ್ನೂ ನಿರೀಕ್ಷಿಸಲಾಗದ ಸ್ಥಿತಿ ಇದೆ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆರ್.ಚೌಡರೆಡ್ಡಿ ತೂಪಲ್ಲಿ ತಿಳಿಸಿದರು.

    ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಶೇ 40 ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಸ್ವಯಂ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕಾದ ಬಿಜೆಪಿ ಸರ್ಕಾರ ಕೇವಲ ವ್ಯಾಪಾರೀಕರಣ ನಡೆಸಿಕೊಂಡು ಕಾಲಹರಣ ಮಾಡಿದೆ ಎಂದು ದೂರಿದರು.

   ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅನುಭವಿ ಶಿಕ್ಷಣ ಸಚಿವರಾಗಿ ಬಸವರಾಜು ಹೊರಟ್ಟಿ ಮಾಡಿದ ಕಾರ್ಯ ಅಭೂತಪೂರ್ವ. ಅಂದು ಶಾಲಾಕಾಲೇಜು ಸ್ಥಾಪಿಸಿ ಶಿಕ್ಷಣ ರಂಗದಲ್ಲಿ ಕ್ರಾಂತಿ ನಡೆಸಿದ್ದರು. ಈ ವೇಳೆ ಸಾವಿರಾರು ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಗ್ರಾಮೀಣ ಭಾಗದ ಪದವೀಧರರ ಬಗ್ಗೆ ಕಾಳಜಿವಹಿಸಿತ್ತು. ಈ ಬಗ್ಗೆ ತಿಳಿದ ಪದವೀಧರರು ಜೆಡಿಎಸ್‍ಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಕೆಲಸ ಕಾರ್ಯ ಮಾಡಲು ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ಅತಿಥಿ ಶಿಕ್ಷಕರು ಹಾಗೂ ಖಾಸಗಿ ಶಾಲಾ ಶಿಕ್ಷಕರ ಬದುಕು ಬೀದಿಗೆ ಬಿದ್ದಿದೆ. ಕೋವಿಡ್ ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕಿದ್ದ ಸರ್ಕಾರ ಅವರಿಗೆ ಕನಿಷ್ಠ ಆಹಾರ ಕಿಟ್ ಕೂಡಾ ನೀಡಲಿಲ್ಲ. ಅನ್ಯ ಉದ್ಯೋಗ ಸಿಗದೇ ಅಲೆದಾಡುವ ಅವರ ಬದುಕಿಗೆ ಅರ್ಥ ತರಲು ಪ್ರಾದೇಶಿಕ ಪಕ್ಷವೇ ಬೇಕಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿಸಿ ಬಡವರ ಕಲ್ಯಾಣಕ್ಕೆ ನಾಂದಿ ಹಾಡಿ ಎಂದ ಅವರು ಜೆಡಿಎಸ್‍ನಿಂದ ಕಾಂಗ್ರೆಸ್‍ನತ್ತ ಸಾಗಿ ಅಭ್ಯರ್ಥಿಯಾಗಿರುವ ರಮೇಶ್‍ಬಾಬು ಅವರಿಂದ ಜೆಡಿಎಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ನಮ್ಮ ಕಾರ್ಯಕರ್ತರು ಎಂದಿಗೂ ಪಕ್ಷ ನಿಷ್ಠೆಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು.

   ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಪ್ರಧಾನಿ ಮೋದಿ ಅವರು ನೀಡಿದ ಉದ್ಯೋಗ ಸೃಷ್ಟಿ ಭರವಸೆ ಹುಸಿಯಾಗಿದೆ. ಅವರ ಆಡಳಿತ ವೈಖರಿ ಬುದ್ದಿಜೀವಿಗಳಿಗೆ ಬೇಸರ ತಂದಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪದವೀಧರರು ಖಂಡಿತ ಬಿಜೆಪಿಯಿಂದ ದೂರ ಉಳಿಯಲಿದ್ದಾರೆ. ಕಳೆದ ಒಂದು ವರ್ಷದಿಂದ ಯಾವುದೇ ಸಾಧನೆ ಮಾಡದ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರೆಹಾವಳಿ, ಕೋವಿಡ್ ನಿಯಂತ್ರಣದಲ್ಲಿ ಸೋತಿದೆ. ಬದುಕು ದುಸ್ಥರವಾದ ಸಂದರ್ಭದಲ್ಲಿ ಪದವೀಧರರ ಜೀವನಕ್ಕೆ ಯಾವುದೇ ಭರವಸೆ ನೀಡಲಾರರು. ಈ ನಿಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ಬೆಂಬಲಿಸಿ ಚುನಾವಣೆ ನಡೆಸಲು ಕಾರ್ಯಕರ್ತರಿಗೆ ಸೂಚಿಸಿದರು.

   ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜು, ಅಪ್ಪಾಜಿಗೌಡ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಆರ್. ಗುರುರೇಣುಕಾರಾಧ್ಯ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ಸದಸ್ಯ ವೀರಭದ್ರಯ್ಯ, ಪಪಂ ಸದಸ್ಯರಾದ ಶೌಕತ್‍ಆಲಿ, ಕುಮಾರ್, ರೇಣುಕಾಪ್ರಸಾದ್, ಮುಖಂಡರಾದ ಕೆ.ಆರ್.ವೆಂಕಟೇಶ್, ಡಾ:ನಬೀಖಾನ್, ಚನ್ನಬಸವಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link