ತುಮಕೂರು-ಯಶವಂತಪುರ ಡೆಮು ರೈಲು ಗಾಡಿಗೆ ಚಾಲನೆ

ತುಮಕೂರು

      ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದ್ದು, ಇದಕ್ಕೆ ತಕ್ಕಂತೆ ರೈಲು ನಿಲ್ದಾಣವನ್ನು ಸ್ಮಾರ್ಟ್ ರೈಲು ನಿಲ್ದಾಣವನ್ನಾಗಿ ಪರಿವರ್ತಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಮನವಿಯನ್ನು ಪರಿಗಣಿಸಿ ಸ್ಮಾರ್ಟ್ ರೈಲ್ವೆ ಸ್ಟೇಷನ್ ಆಗಿ ಪರಿವರ್ತಿಸಲಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

     ತುಮಕೂರು-ಯಶವಂತಪುರ, ಯಶವಂತಪುರ-ತುಮಕೂರು ನಡುವೆ ಸಂಚರಿಸುವ ಡೆಮು ಸೇವಾ ಸರ್ವೀಸ್ ರೈಲು ಗಾಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈಲ್ವೆ ನಿಲ್ದಾಣದಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ, ಈ ನಿಲ್ದಾಣವನ್ನು ಮತ್ತಷ್ಟು ಉತ್ತಮಗೊಳಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.

     ಕಾಲ ಬದಲಾದಂತೆ ರೈಲುಗಳ ಚಾಲನೆಯಲ್ಲಿಯೂ ಅನೇಕ ಬದಲಾವಣೆಗಳಾಗುತ್ತಿವೆ. ಈಗ ಡೆಮು ರೈಲು ಚಾಲನೆಯಾಗಿದ್ದು, ಮುಂದಿನ ದಿನಗಳಲ್ಲಿ ಬುಲೆಟ್ ರೈಲು, ಫಾಸ್ಟ್ ಟ್ರ್ಯಾಕ್ ಟ್ರೈನ್‍ಗಳು ಬರಲಿವೆ. ಇದಕ್ಕಾಗಿ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಹಲವು ಅನುಕೂಲಗಳನ್ನು ಮಾಡಿಕೊಟ್ಟಿದೆ. ತುಮಕೂರು-ಯಶವಂತಪುರ ರೈಲು ಗಾಡಿಯ ಚಾಲನೆಯ ಹಿಂದೆ ರೈಲ್ವೆ ಪ್ರಯಾಣಿಕರ ಹೋರಾಟ ವೇದಿಕೆಯ ತಂಡದ ಶ್ರಮವಿದೆ. ಅವರು ನಮ್ಮಗಳ ಹಿಂದೆ ಬಿದ್ದು ಒತ್ತಡ ಹಾಕಿದ ಪರಿಣಾಮವಾಗಿ ಈಗ ಈ ರೈಲಿಗೆ ಚಾಲನೆ ದೊರೆತಿದೆ ಎಂದರು.

      ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮ ಮಾತನಾಡಿ, ಭಾರತೀಯ ರೈಲ್ವೆಯು ಸಣ್ಣ ಪಟ್ಟಣಗಳ ಮತ್ತು ಪ್ರಮುಖ ನಗರಗಳ ನಡುವೆ ಸಂಚರಿಸುವ ಜನರಿಗಾಗಿ ಅಂತಿಮ ದೂರದ ಸಂಪರ್ಕವನ್ನು ಸಾಧಿಸುವ ಮಹತ್ವದ ಹೆಜ್ಜೆಯಾಗಿ ಅಕ್ಟೋಬರ್ 15 ರಂದು 10 ಸೇವಾ ಸರ್ವೀಸ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇವುಗಳಲ್ಲಿ 5 ರೈಲುಗಳು ಎಲ್ಲಾ ದಿನಗಳು ಸಂಚರಿಸುತ್ತವೆ. ಉಳಿದ ರೈಲುಗಳ ಸೇವೆಯು ವಾರದಲ್ಲಿ 6 ದಿನ ಲಭ್ಯವಿರುತ್ತವೆ ಎಂದರು.

      ರೈಲು ಸಂಖ್ಯೆ 76527/76528 ಗಾಡಿಯು ಯಶವಂತಪುರ-ತುಮಕೂರು-ಯಶವಂತಪುರ ಮಾರ್ಗದಲ್ಲಿ ಭಾನುವಾರ ಹೊರತುಪಡಿಸಿ ವಾರದಲ್ಲಿ 6 ದಿನಗಳ ಕಾಲ ಚಾಲನೆಯಲ್ಲಿರುತ್ತದೆ. ಡೆಮು ಸೇವಾ ಸರ್ವೀಸ್ ರೈಲು ಗಾಡಿಯ ನಿರಂತರ ಸೇವೆಯು ಅ.15 ರಿಂದ ಪ್ರಾರಂಭವಾಗಿದೆ. ರಾತ್ರಿ 7.50 ಗಂಟೆಗೆ ಯಶವಂತಪುರದಿಂದ ಹೊರಟು, 9.25 ಗಂಟೆಗೆ ತುಮಕೂರನ್ನು ತಲುಪಲಿದೆ. ಮರಳಿ ರೈಲು ಸಂಖ್ಯೆ 76528 ರೈಲು ಗಾಡಿಯು ತುಮಕೂರಿನಿಂದ ರಾತ್ರಿ 9.50 ಗಂಟೆಗೆ ಹೊರಟು 11.25ಕ್ಕೆ ಯಶವಂತಪುರ ತಲುಪಲಿದೆ ಎಂದರು.

     ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೇರಿದಂತೆ ವಿವಿಧ ಅಧಿಕಾರಿಗಳು, ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link