ಗಾಂಧಿಗೂ ದೇಶದ್ರೋಹಿ ಪಟ್ಟ, ಅಪಾಯದಲ್ಲಿ ದೇಶ..!!

ದಾವಣಗೆರೆ:

    ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೇ ದೇಶ ದ್ರೋಹಿಯಂತೆ ಬಿಂಬಿಸುವ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ದೇಶ ಇದೆ ಎಂದು ಸೀತಮ್ಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅರುಣಕುಮಾರಿ ಬಿರಾದರ್ ಆತಂಕ ವ್ಯಕ್ತಪಡಿಸಿದರು.

    ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಬುಧವಾರ ‘ರಾಷ್ಟ್ರಪಿತನಿಗೆ ನಾವೆಷ್ಟು ಹತ್ತಿರ…? ಹಾಗೂ ಮದ್ಯಪಾನದ ದುಷ್ಪರಿಣಾಮಗಳ ಬಗೆಗೆ ಗಾಂಧೀಜಿಯವರ ನಿಲುವುಗಳು’ ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.

    ಇತ್ತೀಚೆಗೆ ಯುವಕರ ವಾಟ್ಸಾಪ್ ಹಾಗೂ ಫೇಸ್‍ಬುಕ್ ಸ್ಟೇಟಸ್‍ಗಳಲ್ಲಿ ಗಾಂಧೀಜಿ ಅವರನ್ನು ದೇಶ ದ್ರೋಹಿಯಂತೆ ಮತ್ತು ಗಾಂಧಿಯನ್ನು ಕೊಂದ ಗೋಡ್ಸೆಯನ್ನು ದೇಶ ಪ್ರೇಮಿಯಂತೆ ಬಿಂಬಿಸುವ ಸಂದೇಶ ಹರಿಬಿಡಲಾಗಿತ್ತು. ಇದನ್ನು ನೋಡಿ ನಾನು ಬೆಚ್ಚಿಬಿದ್ದೆ ಎಂದು ಕಳವಳ ವ್ಯಕ್ತಪಡಿಸಿದರು.

     ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾದ್ವಿಯೊಬ್ಬರು ಗಾಂಧೀಜಿ ಅವರ ಪ್ರತಿಕೃತಿಗೆ ಗುಂಡು ಹೊಡೆದು, ಗೋಡ್ಸೆಯನ್ನು ದೇಶ ಭಕ್ತ ಎಂದೆಲ್ಲಾ ಹಾಡಿ, ಹೋಗಳಿ ಸಂಸದರಾಗಿ ಆಯ್ಕೆಯಾಗಿರುವುದನ್ನು ನೋಡಿದರೆ, ನಮ್ಮ ಜನರ ಮನಸ್ಥಿತಿ ಎಂತಹದ್ದಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

    ಗಾಂಧಿಯವರೇ ಅವರ ಸಹಚರರ ಬಳಿಯಲ್ಲಿ ಯಾವುದೋ ಕಾಯಿಲೆ ಬಂದು ಸತ್ತರೆ ನಾನು ಮಹಾತ್ಮನಾಗುವುದಿಲ್ಲ. ಅಕಸ್ಮಾತ್ ನನ್ನ ಮೇಲೆ ಯಾರಾದರೂ ಗುಂಡು ಹಾರಿಸಿದರೂ ನನ್ನಲ್ಲಿ ಅವರ ಬಗ್ಗೆ ಇಂದಿಷ್ಟು ದ್ವೇಷಭಾವ ಬಾರದೇ ಸಾಯಬೇಕೆಂಬುದಾಗಿ ಹೇಳಿಕೊಂಡಿರುವುದನ್ನು ನೋಡಿದರೆ, ಅವರೆಷ್ಟು ಜೀವಪರವಾಗಿದ್ದರು ಎಂಬುದು ಸಾಬೀತಾಗಲಿದೆ. ಗಾಂಧಿಯನ್ನು ಕೊಂದು ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ನಾಥುರಾಮ್ ಶಿಕ್ಷೆಬೇಡ, ಕ್ಷಮಾಧಾನ ನೀಡಿ ಎಂಬುದಾಗಿ ಗಾಂಧೀಜಿಯವರ ಪುತ್ರ ರಾಮದಾಸ್ ಪ್ರತಿಪಾದಿಸಿದ್ದರು. ಅಂತಹ ಅಹಿಂಸೆ ಪ್ರತಿಪಾದಕ, ಮಾನವತವಾದದ ಸಾಕಾರ ಮೂರ್ತಿಯನ್ನು ಇಂದು ದೇಶ ದ್ರೋಹಿಯಂತೆ ಬಿಂಬಿಸುತ್ತಿರುವುದು ಅತ್ಯಂತ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

    ಗಾಂಧೀಜಿಯವರ ಬದುಕಿಗೆ ಒಂದು ಆಯಾಮವಿಲ್ಲ, ಹಲವಾರು ಆಯಾಮಗಳಿವೆ. ಹೀಗಾಗಿ ಅವರನ್ನು ಇನ್ನೂ ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ ಎಂದ ಅವರು, ನಾನು, ಮಕ್ಕಳು, ಮೊಮ್ಮಕ್ಕಳೇ ಅಧಿಕಾರ, ಸಂಪತ್ತು ಅನುಭವಿಸಬೇಕೆಂಬ ಮನಸ್ಥಿತಿಯ ಸ್ವಾರ್ಥ ರಾಜಕಾರಣಿಗಳು ಇರುವ ಈ ದೇಶದಲ್ಲಿ ಗಾಂಧಿ ಮನಸ್ಸು ಮಾಡಿದ್ದರೆ, ಉನ್ನತ ಪದವಿ ಪಡೆಯಬಹುದಾಗಿತ್ತು. ಮಕ್ಕಳಿಗೆ ಒಳ್ಳೆಯ ಸ್ಥಾನ ಕೊಡಿಸಬಹುದಿತ್ತು. ಆದರೆ, ಅವರೆಂದೂ ತಮ್ಮ ನಾಲ್ಕು ಜನ ಮಕ್ಕಳಿಗೆ ಉನ್ನತ ಪದವಿ ಕೊಡಿಸಲಿಲ್ಲ. ಬದಲಿಗೆ ತನ್ನಮಗ ಹರಿದಾಸನಿಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಮಂಜೂರಾಗಿದ್ದ ಸ್ಕಾಲರ್‍ಶಿಪ್‍ನಲ್ಲಿ ಬೇರೆಯ ವಿದ್ಯಾರ್ಥಿಯನ್ನು ವಿದೇಶಕ್ಕೆ ಕಳುಹಿಸಿದ್ದರು. ಇದು ಗಾಂಧಿಯ ವ್ಯಕ್ತಿತ್ವ ಎಂದು ಬಣ್ಣಿಸಿದರು.

    ಗಾಂಧೀಜಿಯವರು ಎಂದೂ ಆದರ್ಶಗಳನ್ನು ಬಾಯಿ ಮಾತಿನಲ್ಲಿ ಹೇಳಲಿಲ್ಲ. ಬದಲಿಗೆ ಸ್ವತಃ ಅವರ ಜೀವನದಲ್ಲಿ ಅಳವಡಿಸಿಕೊಂಡರು. ಬುದ್ಧ, ಬಸವ, ಯೇಸುಕ್ರಿಸ್ತ, ಮೊಹಮ್ಮದ್ ಪೈಗಂಬರ್ ಅವರಂತಹ ಹಲವು ದಾರ್ಶನಿಕರ ತತ್ವಗಳನ್ನು ಏರಕ ಹೋಯ್ದಾಗ ಮಾತ್ರ ಗಾಂಧಿಯವರಂತಹ ವ್ಯಕ್ತಿತ್ವ ರೂಪಗೊಳ್ಳಲು ಸಾಧ್ಯ ಎಂದ ಅವರು, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಅಮೇರಿಕಾದ ಮಾರ್ಟಿನ್ ಲೂಥರ್‍ಕಿಂಗ್ ಅವರುಗಳು ಗಾಂಧೀಜಿಯವರ ಮಾರ್ಗದಲ್ಲೇ ನಡೆದು, ಅಲ್ಲಿಯ ವರ್ಣಭೇದ ನೀತಿ ಮತ್ತು ಮೇಲು, ಕೀಳು ತೊಡೆದು ಹಾಕಿದ್ದರು.

   ಗಾಂಧೀಜಿ ಇಡೀ ಜಗತ್ತಿಗೆ ಪ್ರೇರಕ ಶಕ್ತಿಯಾಗಿರುವ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಯಾಕೆ ಅವರನ್ನು ಹಿನ್ನೆಲೆಗೆ ತಳ್ಳಲಾಗುತ್ತಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದ ಅವರು, ದೇಶದಲ್ಲಿ ಇಂದು ನಡೆಯುತ್ತಿರುವ ಮಹಿಳೆಯರ, ದಲಿತರ ಮೇಲಿನ ದಾಳಿಗಳು, ಆರ್ಥಿಕ ಅಧಃಪತನ ಗಾಂಧಿಯ ರಾಮರಾಜ್ಯದ ಕನಸಿಗೆ ತದ್ವಿರುದ್ಧವಾಗಿವೆ ಎಂದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಸ್.ಮಂಜುನಾಥ್ ಕುರ್ಕಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಕರ್ನಾಟಕಕ್ಕೆ ಒಟ್ಟು 17 ಬಾರಿ ಭೇಟಿ ನೀಡಿದ್ದು, ದಾವಣಗೆರೆಗೆ 1934 ಹಾಗೂ 1927ರಲ್ಲಿ ಎರಡು ಬಾರಿ ದಾವಣಗೆರೆಗೆ ಭೇಟಿ ನೀಡಿದ್ದು. ಆಗ ಹರಿಹರವನ್ನು ಸಂಧಿಸಿ, ಶಿವಮೊಗ್ಗೆಯ ಕಡೆಗೆ ಪ್ರಯಾಣ ಬೆಳೆಸಿದ್ದ ಗಾಂಧೀಜಿಯವರು ಮಲೆಬೆನ್ನೂರಿನ ಕುಠೀರದಲ್ಲಿ ವಿಶ್ರಾಂತಿ ಪಡೆದಿದ್ದರು. ಆ ಕುಠೀರವನ್ನೇ ಬಾಪೂಜಿ ಹಾಲ್ ಎಂಬುದಾಗಿ ಕರೆಯಲಾಗುತ್ತಿದೆ. ಆದರೆ, ಖಾಸಗಿ ವ್ಯಕ್ತಿಯ ಹಿಡಿತದಲ್ಲಿದ್ದ ಈ ಬಾಪೂಜಿ ಹಾಲ್ ಅನ್ನು ಕಸಾಪ ತನ್ನ ಸುಪರ್ದಿಗೆ ಪಡೆದು ಅಭಿವೃದ್ಧಿಗೊಳಿಸಿ, ಅಲ್ಲಿ ಗ್ರಂಥಾಲಯ ನಿರ್ಮಿಸಿದೆ ಎಂದರು.

    ಗಾಂಧೀಜಿಯವರು ತಮ್ಮ ಮುಂದೆ ಧರ್ಮ ಮತ್ತು ನೈತಿಕತೆ ಪ್ರಶ್ನೆ ಬಂದರೆ, ನೈತಿಕತೆಯನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಅವರು ನೈತಿಕತೆ ಮತ್ತು ಬದ್ಧತೆಗೆ ಎಂದೂ ಚ್ಯೂತಿಬಾರದಂತೆ ಬದುಕಿದ್ದರು. ಆದರೆ, ನಮ್ಮ ಮುಂದೆ ಈ ಆಯ್ಕೆ ಬಂದರೆ, ನಾವು ಧರ್ಮವನ್ನು ಆಯ್ಕೆ ಮಾಡಿಕೊಂಡು, ನೈತಿಕತೆಯನ್ನು ಬಿಟ್ಟುಬಿಡುತ್ತೇವೆ. ಹೀಗಾಗಿಯೇ ಇಂದು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಧರ್ಮಾಂಧರು ಅಲ್ಲಲ್ಲಿ, ಕೋಮುವಾದದ ವಿಷ ಬೀಜ ಬಿತ್ತಿ ದೇಶದಲ್ಲಿ ಗಲಭೆ ಸೃಷ್ಟಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

    ಗಾಂಧೀಜಿ ಮಹಾಘಾತಕಗಳು ಕರೆದಿದ್ದ ಏಳು ರೀತಿಯ ಸಮಾಜಘಾತುಕ ಶಕ್ತಿಗಳು ರುದ್ರನರ್ತನ ನಡೆಸುತ್ತಿವೆ. ರಕ್ತಪಾತ ಇಲ್ಲದೆಯೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರನ್ನು ಗುಂಡಿಟ್ಟು ಕೊಂದವರ ಪರ ಮಾತನಾಡುವರು ಹೆಚ್ಚುತ್ತಿರುವ ಸಂದರ್ಭದಲ್ಲಿ ನಾವು ಗಾಂಧೀಗೆ ಎಷ್ಟು ಹತ್ತಿರ? ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದ್ದು, ನಮಗೆ ಗಾಂಧೀಯ ಹೆಸರು ಹೇಳುವ ನೈತಿಕತೆಯೂ ಇಲ್ಲ ಎಂದು ಹೇಳಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ನಿರ್ದೇಶಕ ಅಶೋಕ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ್ ಬಿ.ಎಲ್. ನಿಟ್ಟೂರ್ ಕಾರ್ಯಕ್ರಮ ನಿರೂಪಿಸಿದರು.

 

Recent Articles

spot_img

Related Stories

Share via
Copy link
Powered by Social Snap