ಹೆಣ್ಣು-ಗಂಡು ಸಮಾನರೆಂಬ ಭಾವನೆ ಮೂಡಲಿ

ದಾವಣಗೆರೆ:

       ನಮ್ಮ ಮನ, ಮನೆಗಳಲ್ಲಿ ಸಮಾನತೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿರುವ ಗಂಡು ಮೇಲು, ಹೆಣ್ಣು ಕೀಳೆಂಬ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅರಕ್ಷಕ ಮಹಾನಿರೀಕ್ಷಕರಾದ ಡಿ. ರೂಪಾ ಅಭಿಪ್ರಾಯಪಟ್ಟರು.

        ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯುತ್ತಿರುವ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಗುರುವಾರ ಮಹಿಳೆ: ಸೃಜನಶೀಲತೆಯ ಸಾಧ್ಯತೆಗಳು ವಿಷಯದ ಗೋಷ್ಠಿ-4ರಲ್ಲಿ ಆಡಳಿತಾತ್ಮಕ ಸಾಧ್ಯತೆಗಳು ಕುರಿತು ಮಾತನಾಡಿದ ಅವರು, ನಮ್ಮಗಳ ಮನೆಯಲ್ಲಿ ಹೆಣ್ಣು, ಗಂಡು ಮಕ್ಕಳನ್ನು ಸಮನಾಗಿ ಕಾಣುವ, ಬೆಳೆಸುವ ಕಾರ್ಯವಾಗಬೇಕು, ಆಕೆಯ ಆಸೆ, ಕನಸು, ಗುರಿಗಳನ್ನು ಪ್ರೋತ್ಸಾಹಿಸುವ ಹಾಗೂ ಆಕೆಯ ಅಭಿಪ್ರಾಯ, ನಿರ್ಧಾರಗಳಿಗೆ ಮನ್ನಣೆ ನೀಡುವ ಕಾರ್ಯಗಳಾದಾಗ ಮಾತ್ರ ಸಮಾನತೆ, ಸಮಸಮಾಜ ನಿರ್ಮಾಣ ಸಾಧ್ಯವೆಂದು ಹೇಳಿದರು.

         ಯಾವ ಮಹಿಳೆ ಆರ್ಥಿಕ, ಸಾಮಾಜಿಕ ವಿಷಯಗಳ ಕುರಿತು ಸ್ವತಂತ್ರಳಾಗಿ ನಿರ್ಧಾರ ಕೈಗೊಳ್ಳುತ್ತಾಳೋ ಅದುವೇ ಮಹಿಳಾ ಸಬಲೀಕರಣ. ತಂದೆ, ಗಂಡ, ಮನೆ, ಮಕ್ಕಳು ಹೀಗೆ ಎಲ್ಲರ ಅಗತ್ಯತೆಗಳನ್ನು ಪೂರೈಸುವ ಮಹಿಳೆ ಮಾತ್ರ ಅಬಲೆ. ದಿನನಿತ್ಯ ಆಕೆ ಮಾಡುವ ಕಾರ್ಯಗಳು ಬೆಟ್ಟದಷ್ಟಿದ್ದರೂ ಆಕೆಯ ಕೆಲಸಕ್ಕೆ ಬೆಲೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಾನೂನು ಮಹಿಳೆಗೆ ಶೇ. 33ರಷ್ಟು ರಿಷರ್ವೇಷನ್ ನೀಡಿದ್ದರೂ ಆದರ ಪಾಲನೆಯಾಗುತ್ತಿಲ್ಲ. ಹೆಣ್ಣಿಗೆ ಶಿಕ್ಷಣ ಮಹತ್ವ ತಿಳಿದರೆ ಇಡೀ ಕುಟುಂಬವೇ ಶಿಕ್ಷಣದಲ್ಲಿ ಮೇಲುಗೈ ಸಾಧಿಸಲು ಸಾಧ್ಯ ಎಂದು ಅವರು ವಿವರಿಸಿದರು.

        ಇತ್ತೀಚಿನ ದಿನಗಳಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲಿ ಪುರುಷನಷ್ಟೇ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಹೆಣ್ಣು ಮಕ್ಕಳನ್ನು ಹೆಚ್ಚು ಓದಿಸಲು ಅವಕಾಶ ನೀಡಬೇಕು. ಇದು ಪೋಷಕರ ಜವಾಬ್ದಾರಿ. ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಇದ್ದಾರೆ. ತೊಟ್ಟಿಲು ತೂಗುವ ಕೈ ದೇಶ ಆಳಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೆಣ್ಣಿಗೆ ಶಿಕ್ಷಣದ ಪ್ರಾಮುಖ್ಯತೆ ತಿಳಿದಾಗ ಸಮಾಜ ಸುಧಾರಣೆ ಸಾಧ್ಯ. ಸಬಲೀಕರಣವೆಂದರೆ ನಮ್ಮ ಕುಟುಂಬ, ಸಮಾಜಕ್ಕೆ ಒಳಿತು ಮಾಡುವುದು ಅಷ್ಟೇ ಅಲ್ಲ ಆಕೆ ಸ್ವಇಚ್ಚೆಯಿಂದ ಒಳ್ಳೆಯ ನಿರ್ಧಾರ ಪಡೆಯಬೇಕು. ಇದಕ್ಕೆ ಅವಕಾಶಬೇಕು. ಆರ್ಥಿಕತೆ, ಉದ್ಯೋಗ, ಕುಟುಂಬ ನಿರ್ವಹಣೆ ವಿಷಯದಲ್ಲಿ ಮಹಿಳೆಯ ಅಭಿಪ್ರಾಯ ಪರಿಗಣಿಸುತ್ತಿಲ್ಲ, ಇದು ಸರಿಯಲ್ಲ ಎಂದರು.

           ಸ್ತ್ರೀ ಸಶಕ್ತೀಕರಣ ಮತ್ತು ಕಾನೂನುಗಳು ವಿಷಯ ಕುರಿತು ವಕೀಲ ಎನ್.ಟಿ.ಮಂಜುನಾಥ್ ಮಾತನಾಡಿ, ರಾಮಾಯಣ, ಮಹಾಭಾರತದ ಕಾಲದಿಂದಲೂ ಮಹಿಳೆಯರ ಶೋಷಣೆ ನಡೆಯುತ್ತಲೆ ಇದೆ. ಅಂದು ರಾಮಾಯಣ ಕಾಲಘಟ್ಟದಲ್ಲಿ ದೇವರು ಎನಿಸಿಕೊಂಡ ರಾಮ ಸೀತೆಯನ್ನು ಕಾಡಿಗಟ್ಟಿದ್ದರು. ಆಕೆಯನ್ನು ಅಗ್ನಿ ಪರೀಕ್ಷೆಗೆ ಒಡ್ಡಿ ಆಕೆಯ ವ್ಯಕ್ತಿತ್ವ ತೋರಿಸಿಕೊಡುವುದಾಗಿತ್ತು. ಆದರೆ, ಎಲ್ಲಿಯೂ ಪುರುಷರು ಅಗ್ನಿ ಪರೀಕ್ಷೆಗೊಳಗಾದ ಪ್ರಸಂಗಗಳು ನಡೆದಿಲ್ಲ, ಕೇವಲ ಸ್ತ್ರೀಗೆ ಮಾತ್ರ ಈ ಕಟ್ಟುಪಾಡಿತ್ತು. ಇಂದಿಗೂ ಮಹಿಳೆಯರನ್ನು ಹಂತ ಹಂತವಾಗಿ ಶೋಷಿಸುವುದು ನಿರಂತರವಾಗಿ ಸಾಗಿದೆ ಎಂದರು.

         ಗೋಷ್ಠಿಯಲ್ಲಿ ಸುಶೀಲದೇವಿ ರಾವ್ ಅಧ್ಯಕ್ಷತೆ ವಹಿಸಿ, ಸಾಂಸ್ಕತಿಕ ಸಾಧ್ಯತೆಗಳು ವಿಷಯದ ಕುರಿತು ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ. ಲೋಕೇಶ್ ಅಗಸನಕಟ್ಟೆ ಇದ್ದರು. ಶೈಲಜಾ ತಿಮ್ಮೇಶ್ ಸ್ವಾಗತಿಸಿದರು. ಚಂದ್ರಿಕಾ ನಿರೂಪಿಸಿದರು. ವಿಜಯ ಚಂದ್ರಶೇಖರ್ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link