ದಾವಣಗೆರೆ:
ಸಂವಿಧಾನವನ್ನು ಓದಿ ಅರ್ಥ ಮಾಡಿಕೊಂಡು, ಅದು ನಮಗೆ ನೀಡಿರುವ ಮೂಲಭೂತ ಹಕ್ಕು ಪ್ರತಿಪಾದಿಸುವುದರ ಜೊತೆಗೆ, ಕರ್ತವ್ಯವನ್ನು ಪಾಲಿಸಿದರೆ ಭಾರತ ಅಪರಾಧ ಮುಕ್ತ ರಾಷ್ಟ್ರವಾಗಿ ನಿರ್ಮಾಣವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್ ಜಿ ಪ್ರತಿಪಾದಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನ ಗ್ರಂಥವು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ. ಈ ಗ್ರಂಥವನ್ನು ಪ್ರತಿಯೊಬ್ಬ ಭಾರತೀಯರು ಓದಲೇಬೇಕು. ಇದನ್ನು ಓದಿದರೇ, ಯಾರೂ ಸಹ ಅಪರಾಧವನ್ನು ಮಾಡಲು ಸಾಧ್ಯವೇ ಇಲ್ಲ. ಸಂವಿಧಾನವನ್ನು ಓದಿ ಅದರಲ್ಲಿರುವ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ, ಭಾರತ ಅಪರಾಧ ಮುಕ್ತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಭಾರತ ಬ್ರಿಟೀಷರಿಂದ ಸ್ವತಂತ್ರಗೊಂಡ ಮೇಲೆ ನಮ್ಮ ದೇಶಕ್ಕೂ ಒಂದು ಸಂವಿಧಾನಬೇಕೆಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ದೇಶದ ಪ್ರಥಮ ಕಾನೂನು ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂವಿಧಾನ ರಚಿಸುವ ಜವಾಬ್ದಾರಿ ನೀಡಿ, ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಸಮಿತಿಯು ರಚಿಸಿದ ಸಂವಿಧಾನದ ಕೆಲ ಪರಿಚ್ಛೇದಗಳನ್ನು 19496 ನವೆಂಬರ್ 26ರಿಂದ ಜಾರಿಗೆ ತರಲಾಯಿತು. ಬಳಿಕ 1950ರ ಜನವರಿ 26ರಂದು ಸಂವಿಧಾನದ ಎಲ್ಲಾ ಪರಿಚ್ಛೇದಗಳನ್ನು ಜಾರಿಗೊಳಿಸಲಾಯಿತು .
ಈ ಹಿನ್ನೆಲೆಯಲ್ಲಿ ನವೆಂಬರ್ 26 ಅನ್ನು 2015ರ ವರೆಗೆ ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ, 2015ರ ನಂತರ ಸಂವಿಧಾನ ದಿನಾಚರನೆಯನ್ನಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ಪೂರ್ಣ ಪ್ರಮಾಣದಲ್ಲಿ ಸಂವಿಧಾನ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಸಂವಿಧಾನ ಜಾರಿಯಾದ ಜನವರಿ 26 ಅನ್ನು ಗಣರಾಜ್ಯವನ್ನಾಗಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಭಾರತದಲ್ಲಿರುವ ಎಲ್ಲಾ ಧರ್ಮಗಳಿಗೂ ಒಂದೊಂದು ಧರ್ಮ ಗ್ರಂಥಗಳಿವೆ. ಆದರೆ, ಇವೆಲ್ಲವುದಕ್ಕಿಂತ ಸಂವಿಧಾನ ಭಾರತ ದೇಶದ ಪವಿತ್ರ ಗ್ರಂಥವಾಗಿದೆ ಎಂದ ಅವರು, ಬ್ರಿಟೀಷರಿಂದ ದೇಶ ಸ್ವತಂತ್ರಗೊಂಡ ಸಂದರ್ಭದಲ್ಲಿ ದೇಶದಲ್ಲಿ ಬಡತನ, ಅಕ್ಷರತೆ ಸೇರಿದಂತೆ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದವು. ಹೀಗಾಗಿ ಈ ಸಮಸ್ಯೆಗಳಿಂದ ಜನರನ್ನು ಹೊರ ತರಬೇಕೆಂಬ ಕಾರಣಕ್ಕೆ ಸಂವಿಧಾನದಲ್ಲಿ ಜನರಿಗೆ ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನು ಸಹ ಗುರುತಿಸಲಾಗಿದೆ. ಆದರೆ, ಪ್ರಸ್ತುತ ಬಹುತೇಕರು ಹಕ್ಕು ಪ್ರತಿಪಾದಿಸುತ್ತಾರೆ. ಆದರೆ, ಕರ್ತವ್ಯಗಳನ್ನು ನಿಭಾಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಎಲ್ಲರಿಗೂ ಸಮಾನತೆ, ಸಮಾನ ವೇತನ, ಸಮಾನ ಗೌರವ ಸಿಗಬೇಕೆಂಬುದು ಸಂವಿಧಾನದ ಆಶಯವಾಗಿದೆ. ಆದರೆ, ಇವೆಲ್ಲವೂ ನಿಮಗೆ ಸಿಗುತ್ತಿದೇಯಾ, ಹೀಗಾಗಿ ನಿಮ್ಮ ಹಕ್ಕುಗಳನ್ನು ಜಾಗೃತಿ ಗೊಳಿಸುವ ಉದ್ದೇಶದಿಂದ ಸಂವಿಧಾನ ದಿನಾಚರಣೆ ಆಚರಿಸಲಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದವರ ಮೇಲೆ ನಡೆದಿರುವ ದೌರ್ಜನ್ಯಗಳ ವಿರುದ್ಧ ಹೋರಾಡಿ ನ್ಯಾಯ ಪಡೆಯಲು ಉಚಿತ ಕಾನೂನು ಪ್ರಾಧಿಕಾರದಿಂದ ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆಯ ಅಡಿಯಲ್ಲಿ ಕಾನೂನು ನೆರವು ನೀಡಲಾಗುತ್ತಿದೆ. ಬಡವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ನಮ್ಮ ಮನೆಯನ್ನು ನಿರ್ವಹಿಸಲು ಹೇಗೆ ಚೌಕಟ್ಟು ಹಾಕಿಕೊಂಡಿದ್ದೇವೋ, ಅದೇರೀತಿ ದೇಶವನ್ನು ಮುನ್ನಡಿಸಲು ಹಾಕಿಕೊಂಡಿರುವ ಚೌಕಟ್ಟನ್ನೇ ಸಂವಿಧಾನವಾಗಿದೆ. ಮೇಲಸ್ತರದಿಂದ ಕೆಳಗಿನ ಹಂತದ ಗ್ರಾಮ ಪಂಚಾಯಿತಿಯ ವರೆಗೂ ಅಧಿಕಾರ ವಿಕೇಂದ್ರೀಕರಣ ಮಾಡಿ ದೇಶವನ್ನು ಸದೃಢವಾಗಿ ಮುನ್ನಡೆಸುವುದು, ಮತ್ತೊಂದು ಧರ್ಮದ ಮೇಲೆ ದಬ್ಬಾಳಿಕೆ ಬಾಡದೇ ಸಾಮರಸ್ಯದಿಂದ ಜೀವನ ನಡೆಸುವುದು ಸಂವಿಧಾನದ ಆಶಯವಾಗಿದೆ. ಸಂವಿಧಾನವನ್ನು ಅರ್ಥ ಮಾಡಿಕೊಂಡು ನಮ್ಮ ಹಕ್ಕು ಪ್ರತಿಪಾದಿಸುವುದರ ಜೊತೆಗೆ, ಕರ್ತವ್ಯ ನಿಭಾಯಿಸಿದರೆ, ದೇಶ ತನ್ನತಾನೇ ಮುಂದುವರೆಯಲಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, ಸಂವಿಧಾನ ಅರ್ಥ ಮಾಡಿಕೊಳ್ಳುವ ಮೊದಲು, ಈ ದೇಶವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದರೆ, ತೆಲುಗು ಕವಿಯೊಬ್ಬರು ಹೇಳುವಂತೆ ದೇಶ ಎಂದರೆ, ಮಣ್ಣು, ನದಿ, ಕಾಡು ಅಲ್ಲ. ಮನುಷ್ಯ. ಹೀಗಾಗಿ ಮನುಷ್ಯನನ್ನು ಹಾಗೂ ಆತನ ಸಂಸ್ಕøತಿ, ಆಚಾರ, ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಸುಶಿಕ್ಷಿತರೇ ಸಂವಿಧಾನವನ್ನು ಅರ್ಥ ಮಾಡಿಕೊಳ್ಳದೇ, ಸಪಸ್ವರ ಎತ್ತುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನೆರಳು ಬೀಡಿ ಕಾರ್ಮಿಕ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ ನಿರೂಪಿಸಿ, ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ