ಹಾವೇರಿ
ಲಿಖಿತವಾದ, ದೀರ್ಘವಾದ, ದ್ವಂದ್ವಗಳಿಲ್ಲದ ಮತ್ತು ಸಂದಿಗ್ದತೆಗಳಿಲ್ಲದ ಜಗತ್ತಿನ ಅತ್ಯಂತ ದೊಡ್ಡ ಸಂವಿಧಾನ ನಮ್ಮ ರಾಷ್ಟ್ರದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಚ್.ಎಸ್.ರೇಣುಕಾದೇವಿ ಅವರು ಹೇಳಿದರು.
ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾ ಭವನದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಪ್ರಯುಕ್ತ ಕಾನೂನು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂವಿಧಾನದಡಿಯಲ್ಲಿಯೇ ಎಲ್ಲಾ ಕಾನೂನುಗಳು ರಚನೆಯಾಗಿ ಜಾರಿಗೆ ಬರುತ್ತವೆ ಮತ್ತು ಕಾಲ ಕಾಲಕ್ಕೆ ಕಾನೂನುಗಳಲ್ಲಿ ಹಲವು ತಿದ್ದುಪಡಿಗಳಾಗುತ್ತಿವೆ. ಈ ಕಾನೂನುಗಳ ಅರಿವನ್ನು ಪ್ರತಿಯೊಬ್ಬ ನಾಗರಿಕರೂ ಹೊಂದಿರಬೇಕು ಹಾಗೂ ಪಾಲಿಸಬೇಕು. ವ್ಯಕ್ತಿಯೊಬ್ಬ ಮಾಡಿರುವ ಅಪರಾಧಕ್ಕೆ ಎರಡು ಸಲ ಶಿಕ್ಷೆ ವಿಧಿಸಲು ಕಾನೂನಿನಡಿ ಅವಕಾಶವಿಲ್ಲ. ಒಂದು ಅಪರಾಧಕ್ಕೆ ಅಪರಾಧವಾದ ಕಾಲಕ್ಕೆ ಜಾರಿಯಲ್ಲಿರುವ ಕಾನೂನು ಮಾತ್ರ ಅನ್ವಯವಾಗುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ಅರಿತಿರಬೇಕು. ಅಪರಾಧಗಳು ನಡೆದ ನಂತರ ಅದರ ವಿರುದ್ಧ ಹೋರಾಡುವ ಬದಲು ಮೊದಲೇ ಜಾಗೃತರಾಗಿ ಅಪರಾಧ ಕೃತ್ಯಗಳು ನಡೆಯದಂತೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಮಾತನಾಡಿ, ಭಾರತದಲ್ಲಿ ಹಲವು ಧರ್ಮಗಳು ಆಚರಣೆಯಲ್ಲಿದ್ದು, ಪ್ರತಿಯೊಂದು ಧರ್ಮಕ್ಕೂ ಪ್ರತ್ಯೇಕ ಧರ್ಮಗ್ರಂಥಗಳಿವೆ. ಆದರೆ ನಿಜ ಅರ್ಥದಲ್ಲಿ ಸಂವಿಧಾನವು ನಮ್ಮ ಧರ್ಮ ಗ್ರಂಥವಾಗಿದೆ. ಸಂವಿಧಾನದ ಮಹತ್ವ ನಮ್ಮ ಅರಿವಿಗೆ ಬರುವುದು ಸ್ವಾತಂತ್ರ್ಯ ಪೂರ್ವದ ಸಂಕಷ್ಟದ ದಿನಗಳ ಬಗ್ಗೆ ಅರಿತಾಗ ಮಾತ್ರ. ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದಿದ್ದರೂ ಸಹ ಹಲವು ವಿಷಯಗಳಲ್ಲಿ ಇಂದಿಗೂ ಸಂಘರ್ಷಗಳು ನಡೆಯುತ್ತಿರುವುದು ಕಾಣುತ್ತೇವೆ. ಇದಕ್ಕೆ ಕಾರಣ ಅನಕ್ಷರತೆ ಮತ್ತು ಕಾನೂನು ಅರಿವಿನ ಕೊರತೆ, ನಾವು ಉತ್ತಮ ಜೀವನ ನಡೆಸಬೇಕಾದಲ್ಲಿ ಸುಶಿಕ್ಷಕಿತರಾಗಿ, ನಮ್ಮ ನೆಲದ ಕಾನೂನುಗಳನ್ನು ಮತ್ತು ಸಂವಿಧಾನದಲ್ಲಿ ನಿರ್ದೇಶಿಸಲಾದ ಮೂಲಭೂತ ಕರ್ತವ್ಯಗಳನ್ನು ಅರಿತು ಪಾಲಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀಮತಿ ವೈ.ಎಲ್. ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ಯಾಯವಾದವರಿಗೆ ನ್ಯಾಯ ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ಪ್ರತಿಯೊಬ್ಬರೂ ಕಾನೂನಿನ ಸಾಮಾನ್ಯಜ್ಞಾನ ಹೊಂದಬೇಕು, ಕಾನೂನನ್ನು ಗೌರವಿಸಬೇಕು. ನಮ್ಮ ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ ಹಾಗೂ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಸುನಂದಾ ಮಡಿವಾಳರ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ ಅವರು ಮಾತನಾಡಿ, ವಿಧಾನದ ಅನುಚ್ಛೇದ 21ರನ್ವಯ ಪ್ರತಿಯೊಬ್ಬ ವ್ಯಕ್ತಿಗೆ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ನೀಡಲಾಗಿದೆ. ವಿವಿಧತೆಯಲ್ಲಿ ಏಕತೆಯ ವಿಶಿಷ್ಟ ಸಂಸ್ಕತಿ ನಮ್ಮ ದೇಶದ್ದಾಗಿದೆ. ನಮ್ಮ ಹಕ್ಕುಗಳನ್ನು ಚಲಾಯಿಸುವಾಗ ಇತರರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕೆ.ಸಿ.ಸದಾನಂದಸ್ವಾಮಿ, ಎ.ವಿ.ಪಾಟೀಲ, ವಾಸುದೇವ ಆರ್.ಗುಡಿ, ಶ್ರೀಮತಿ ಲಕ್ಷ್ಮಿ ಎನ್.ಗರಗ, ಶ್ರೀಮತಿ ಶ್ರೀದೇವಿ ದರಬಾರೆ, ತರಬೇತಿ ದಿವಾಣಿ ನ್ಯಾಯಾಧೀಶರಾದ ಹರೀಶ್ ಜಿ. ಹಾಗೂ ಹರೀಶ ಕೆ.ಎಂ., ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಪಿ.ಎಂ.ಬೆನ್ನೂರ, ಮುಖ್ಯ ಆಡಳಿತಾಧಿಕಾರಿ ಹರೀಶಪ್ಪ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಎಂ.ಎಚ್.ವಲಿಕಾರ ಅವರು ಮೂಲಭೂತ ಕರ್ತವ್ಯಗಳ ಕುರಿತು ಉಪನ್ಯಾಸ ನೀಡಿದರು. ಶಿರಸ್ತೇದಾರ ಸುದರ್ಶನ ಕುಲಕರ್ಣಿ ಅವರು ಸ್ವಾಗತಿಸಿದರು. ಲಿಂಗರಾಜ ಕಾರ್ಯಕ್ರಮ ನಿರೂಪಿಸಿದರು.