ದಾವಣಗೆರೆ:
ಇಂದಿನಿಂದ ‘ನನ್ನ ಪರಿವಾರ ಬಿಜೆಪಿ ಪರಿವಾರ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಬೆಳಗ್ಗೆ 8.30ಕ್ಕೆ ತಮ್ಮ ಮನೆಯ ಮೇಲೆ ಧ್ವಜಾರೋಹಣ ಮಾಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ಬೂತ್ ಮಟ್ಟದ ಅಧ್ಯಕ್ಷರು, ಮಹಾಶಕ್ತಿ ಕೇಂದ್ರಗಳ ಮುಖಂಡರು, ಪ್ರಧಾನ ಕಾರ್ಯದರ್ಶಿಗಳು, ಬಿಜೆಪಿ ಅಭಿಮಾನಿಗಳ ಮನೆಯಂಗಳ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಲಾಗುವುದು. ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಕಾಮಗಾರಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕೇಂದ್ರ ಸರ್ಕಾರದ ಯೋಜನೆಯ ಫಲಾನುಭವಿಗಳು ಕರೆಯಿಸಿ ಅವರ ಮುಖಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಯಾರಿಗೆ ಕೇಂದ್ರ ಸರ್ಕಾರದ ಯೋಜನೆಗಳು ದೊರೆತಿಲ್ಲವೋ, ಅಂತಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕೆಲಸ ಮಾಡಲಾಗುವುದು. ಉಜ್ವಲಭವಿಷ್ಯ ಯೋಜನೆಯಡಿಯಲ್ಲಿ 95 ಸಾವಿರ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಗಳ ವಿತರಣೆ ಮಾಡಲಾಗಿದೆ. ಅದೇ ರೀತಿ ಮುದ್ರಾ ಯೋಜನೆ ಅಡಿ 62 ಸಾವಿರ ಜನಕ್ಕೆ ಸಾಲ ಕೊಡಲಾಗಿದೆ.ಮಾತೃವಂದನಾ ಯೋಜನೆ ಅಡಿಯಲ್ಲಿ 24 ಸಾವಿರ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಸ್ವಚ್ಚ ಭಾರತ್ ಯೋಜನೆಯಡಿ 6500 ಶೌಚಾಲಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಹೀಗೆ ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕಮಲ್ ಸಂದೇಶ ಬೈಕ್ ರ್ಯಾಲಿ, ಲೋಕಸಭೆ ಚುನಾವಣೆ ಘೋಷಣೆಯಾದ ದಿನದಿಂದ ಮತದಾನದವರೆಗೂ ಹಮ್ಮಿಕೊಳ್ಳಲಾಗಿದೆ . ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಆದೇಶದ ಮೇರೆಗೆ ದೇಶಾದ್ಯಂತದ 5 ಕೋಟಿ ಬಿಜೆಪಿ ಅಭಿಮಾನಿ ಮನೆ ಮೇಲೆ ಧ್ವಜಾರೋಹಣ ನೆರವೇರಿಸಲಾಗುವುದು. ಕಮಲ್ ಜ್ಯೋತಿ ಕಾರ್ಯಕ್ರಮವನ್ನು ಎಲ್ಲಾ ಮಂಡಲಗಳಲ್ಲಿ ಆಯೋಜಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೆಚ್.ಎನ್.ಶಿವಕುಮಾರ್, ಎನ್.ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಹೇಮಂತ್ ಕುಮಾರ್, ಟಿಂಕರ್ ಮಂಜಣ್ಣ, ಪ್ರವೀಣ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
