ಇಂದಿರಾ ಕ್ಯಾಂಟೀನ್ ಅಕ್ರಮ : ಲೋಕಾಯುಕ್ತ ತನಿಖೆ ಸಾಧ್ಯತೆ

ತುಮಕೂರು:

     ನಗರದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಈ ಹಿಂದೆ ನಡೆದಿದ್ದ ಅಕ್ರಮ, ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಲು ಸದಸ್ಯರನೇಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಸಾಧ್ಯತೆಗಳು ಕಂಡುಬಂದಿವೆ.

     2018-19ನೇ ಸಾಲಿನಲ್ಲಿ ನಡೆದಿದ್ದ ಈ ಅವ್ಯವಹಾರದ ಬಗ್ಗೆ `ಪ್ರಜಾಪ್ರಗತಿ’ ದಿನಪತ್ರಿಕೆಯಲ್ಲಿ ಸುದೀರ್ಘ ವರದಿ ಪ್ರಕಟಿಸಲಾಗಿತ್ತು. ಪತ್ರಿಕಾ ವರದಿ ಹಿನ್ನೆಲೆಯಲ್ಲಿ ಅಂದಿನ ಆಯುಕ್ತರು ಇದರ ತನಿಖೆಗಾಗಿ ಒಂದು ಸಮಿತಿಯನ್ನೂ ಸಹ ರಚಿಸಿದ್ದರು. ಈ ಸಮಿತಿ ವರದಿ ನೀಡಿ ವರ್ಷಗಳು ಉರುಳಿದರೂ ಅದನ್ನು ಬಹಿರಂಗಪಡಿಸಲೇ ಇಲ್ಲ. ಸದರಿ ವರದಿಯನ್ನು ಬಹಿರಂಗ ಪಡಿಸುವಂತೆ ಕಳೆದ 5 ತಿಂಗಳ ಹಿಂದೆ 30ನೇ ವಾರ್ಡ್ ಪಾಲಿಕೆ ಸದಸ್ಯ ವಿಷ್ಣುವರ್ಧನ್ ಆಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ವರದಿಯೂ ಬಹಿರಂಗಗೊಳ್ಳಲಿಲ್ಲ.

     ದಿನಾಂಕ: 25-8-2020ರಂದು ಮಹಾನಗರ ಪಾಲಿಕೆಯ ವಿಶೇಷ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಸದರಿ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಪ್ರಸ್ತಾಪಕ್ಕೆ ಸದಸ್ಯ ವಿಷ್ಣುವರ್ಧನ್ ಕೋರಿದ್ದರು. ಈ ಹಿನ್ನೆಲೆಯಲ್ಲಿ ವಿಷಯದ ಚರ್ಚೆಗೆ ಬಂದಾಗ ಇಂದಿರಾ ಕ್ಯಾಂಟೀನ್‍ನಲ್ಲಾಗಿರುವ ಅವ್ಯವಹಾರ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ಸದಸ್ಯ ಮಲ್ಲಿಕಾರ್ಜುನ್ ಸೇರಿದಂತೆ ಇತರೆ ಹಲವು ಸದಸ್ಯರು ದನಿಗೂಡಿಸಿದರು.

     ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ನಿರ್ಧರಿಸಲಾಯಿತೆಂದು ತಿಳಿದು ಬಂದಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ಲೆಕ್ಕದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಪಾಲಿಕೆಯ ಆರೋಗ್ಯಾಧಿಕಾರಿಯನ್ನು ಅವರ ಮಾತೃ ಇಲಾಖೆಯಾದ ಪಶು ವೈದ್ಯ ಇಲಾಖೆಗೆ ವಾಪಸ್ ಕಳುಹಿಸಲು ಸಹ ನಿರ್ಧರಿಸಲಾಗಿದೆ.

    ಬಡವರಿಗಾಗಿಯೇ ವಿಶೇಷ ಕಾಳಜಿ ವಹಿಸಿ ಇಂದಿರಾ ಕ್ಯಾಂಟೀನ್ ರೂಪಿಸಲಾಗಿದೆ. ಆದರೆ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಿರ್ವಹಣೆಯಾಗುತ್ತಿದ್ದ ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತದೆ. ಪ್ರತಿದಿನವೂ ಕ್ರಮವಾಗಿ 500 ಪ್ರಮಾಣವನ್ನು ತೋರಿಸಿರುವ ಲೆಕ್ಕದ ದಾಖಲೆಗಳು ಈ ಕ್ಯಾಂಟೀನ್‍ಗಳಲ್ಲಿ ಇದ್ದವು.

    ವಾಸ್ತವವಾಗಿ ಬೆಳಗಿನ ತಿಂಡಿ 100 ರಿಂದ 150 ಖರ್ಚಾಗಿರಬಹುದೆನ್ನುವ ಮಾಹಿತಿಗಳು ಕೇಳಿಬರತೊಡಗಿದವು. ಊಟದ ವಿಚಾರದಲ್ಲಿ ಇದೇ ರೀತಿಯ ಲೆಕ್ಕಗಳು ದೊರಕಿದವು. ಪ್ರತಿದಿನವೂ ಸರ್ಕಾರದ ನಿಗದಿತ ಪ್ರಮಾಣದ ಅಂಕಿ ಅಂಶಗಳನ್ನು ದಾಖಲೆಗಳಲ್ಲಿ ತೋರಿಸಿ ಅಷ್ಟೂ ಪ್ರಮಾಣಕ್ಕೆ ಹಣ ಪಡೆದಿರುವ ಬಹುದೊಡ್ಡ ಅಕ್ರಮಗಳು ಬಯಲಿಗೆ ಬರತೊಡಗಿದವು.

   ಇಂದಿರಾ ಕ್ಯಾಂಟೀನ್‍ನಲ್ಲಿ ಒಂದು ತಿಂಡಿಗೆ 5ರೂ ನಿಗದಿಪಡಿಸಲಾಗಿದೆ. ಸರ್ಕಾರವು 6.95 ರೂ.ಗಳನ್ನು ನೀಡುತ್ತದೆ. ಒಟ್ಟು 1 ತಿಂಡಿಗೆ 11.95 ರೂ.ಗಳು ಖರ್ಚು ಬರುತ್ತದೆ. ಕ್ಯಾಂಟೀನ್‍ನಲ್ಲಿ ತಿಂಡಿ ತಿಂದ ಗ್ರಾಹಕರು 5 ರೂ. ನೀಡಿದರೆ ಉಳಿದ ಹಣವನ್ನು ಸರ್ಕಾರ ಪಾವತಿಸುತ್ತದೆ. ಅದೇ ರೀತಿ 1 ಊಟಕ್ಕೆ 10 ರೂ. ನಿಗದಿಪಡಿಸಲಾಗಿದೆ. ಇದಕ್ಕೆ ತಗಲುವ ವಾಸ್ತವ ವೆಚ್ಚ 22.40 ರೂ.ಗಳು. ಸರ್ಕಾರವು 12.40 ರೂ.ಗಳನ್ನು ನೀಡುತ್ತದೆ.

   ಮೇಲಿನ ಅಂಕಿ ಅಂಶಗಳನ್ನೇ ಒಮ್ಮೆ ಅವಲೋಕಿಸಿದಾಗ ವಾಸ್ತವವಾಗಿ ಹೇಗೆ ಅಕ್ರಮಗಳು ನಡೆದಿವೆ ಎಂಬುದು ಗೋಚರಿಸುತ್ತದೆ. ಪ್ರತಿದಿನ ಕನಿಷ್ಠ 200 ತಿಂಡಿ, 300 ಊಟ ಹೆಚ್ಚು ಸೇರಿಸಿದರೆ ಸಾಕು. ಅಷ್ಟು ಪ್ರಮಾಣದ ಹಣ ಸರ್ಕಾರದ ಬೊಕ್ಕಸದಿಂದ ಬಂದು ಬೀಳುತ್ತದೆ. ಇವೆಲ್ಲವೂ ಒಳಂದೊಳಗೆ ನಡೆದಿರುವ ಮೋಸದಾಟಗಳು.

    ಈ ಅಕ್ರಮವು ಮಾಧ್ಯಮದಲ್ಲಿ 2018-19ರಲ್ಲಿ ವರದಿಯಾಗುತ್ತಿದ್ದಂತೆಯೇ ಒಂದು ತನಿಖಾ ಸಮಿತಿ ರಚಿಸಲಾಯಿತು. ಆದರೆ ಈ ಸಮಿತಿಯ ವರದಿಯೂ ಲಭ್ಯವಾಗಲಿಲ್ಲ. ಮುಂದಿನ ಕ್ರಮಗಳು ಏನಾದವು ಎಂಬ ಬಗ್ಗೆಯೂ ಮಾಹಿತಿ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಧ್ವನಿ ಎತ್ತಿದ ವಿಷ್ಣುವರ್ಧನ್ ಮತ್ತಿತರರು ತನಿಖಾ ವರದಿಯೇ ಸಮಂಜಸವಾಗಿಲ್ಲ. ಆದಕಾರಣ ನಿಷ್ಪಕ್ಷಪಾತ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸುವುದೇ ಸೂಕ್ತ ಎಂದು ಪ್ರತಿಪಾದಿಸಿದ್ದರು. ಬಡವರಿಗಾಗಿ ನೀಡಲಾಗಿರುವ ಅನ್ನದ ಹಣವನ್ನೂ ತಿನ್ನುವಂತಹ ಅಧಿಕಾರಿಗಳು ಇರುವಾಗ ಇಂತಹ ವಿಷಯಗಳನ್ನು ನಿರ್ಲಕ್ಷಿಸಲು ಸಾಧ್ಯವೆ? ಹೀಗಾಗಿ ಅಕ್ರಮ ಬಯಲಾಗಲೇಬೇಕು, ಸೂಕ್ತ ತನಿಖೆಯಾಗಬೇಕು ಎಂಬುದು ಹಲವು ಸದಸ್ಯರ ವಾದ. ಸದಸ್ಯರ ಒತ್ತಾಯಕ್ಕೆ ಮಣಿದು ಇದೀಗ ಪಾಲಿಕೆಯು ಈ ವಿಷಯವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವುದು ಅನಿವಾರ್ಯ ಎಂಬ ಸ್ಥಿತಿಗೆ ಬಂದು ನಿಂತಿದೆ.

    ಸದಸ್ಯ ವಿಷ್ಣುವರ್ಧನ್ ವಿಷಯ ಮಂಡಿಸಿದ್ದಾರೆ. ನಾವೆಲ್ಲ ಹಲವರು ಅನುಮೋದಿಸಿದ್ದೇವೆ. ಈ ಪ್ರಕರಣ ಲೋಕಾಯುಕ್ತ ತನಿಖೆಗೆ ಒಳಪಡುವುದು ಉತ್ತಮ, ಪಾಲಿಕೆಯ ಸಭೆಯಲ್ಲೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್‍ನಲ್ಲಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಆರೋಗ್ಯಾಧಿಕಾರಿಯನ್ನು ಮಾತೃ ಇಲಾಖೆಗೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಗಿದೆ ಎನ್ನುತ್ತಾರೆ ಸದಸ್ಯ ಮಲ್ಲಿಕಾರ್ಜುನ್.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap