ಬೆಂಗಳೂರು
ವಿಶ್ವ ವಿಖ್ಯಾತ ಇಂದ್ರಜಾಲ ಮಾಂತ್ರಿಕ ಪಿ.ಸಿ.ಸರ್ಕಾರ್ ಅವರ “ಇಂದ್ರಜಾಲ್” ಎಂಬ ಮೆಗಾ ಮ್ಯಾಜಿಕ್ ಶೋ ನಗರದ ಟೌನ್ ಹಾಲ್‍ನಲ್ಲಿ ಪ್ರಾರಂಭವಾಗಿದ್ದು, ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸುತ್ತಿದೆ.
ನವೆಂಬರ್ 11 ರ ವರೆಗೆ ನಡೆಯಲಿರುವ ಈ ಮ್ಯಾಜಿಕ್ ಶೋನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನೂರಾರು ಕೈಚಳಕವನ್ನು ಪಿ ಸಿ ಸರ್ಕಾರ್ ತೋರಿಸುತ್ತಿದ್ದಾರೆ. ಸರ್ಕಾರ್ ಅವರ ರಕ್ತದಲ್ಲೇ ಮ್ಯಾಜಿಕ್ ಬೆರೆತಿದ್ದು ಅವರೇ ಹೇಳುವಂತೆ “ನಾನು ನಿದ್ದೆ ಮಾಡುವಾಗ ಮ್ಯಾಜಿಕ್ ಅನ್ನು ಉಸಿರಾಡುತ್ತೇನೆ; ಎಚ್ಚರದಲ್ಲಿದ್ದಾಗ ಮ್ಯಾಜಿಕ್ ಗಾಗಿ ಕೆಲಸ ಮಾಡುತ್ತೇನೆ”. ಎನ್ನುತ್ತಾರೆ.
ಸರ್ಕಾರ್ ಕುಟುಂಬ ವಿಶ್ವದ ಅತಿ ದೊಡ್ಡ ಜಾದೂಗಾರ ಕುಟುಂಬ. ಪಿಸಿ ಸರ್ಕಾರ್ ಈ ಕಲೆಯನ್ನು ಮೊದಲ ಬಾರಿಗೆ ವಿಶ್ವ ವೇದಿಕೆಗೆ ಪರಿಚಯಿಸಿದರೆ ಅವರ ಮಕ್ಕಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲೆಗೆ ಮಹತ್ವ ದೊರೆಯುವಂತೆ ಮಾಡಿದ್ದಾರೆ. ಸರ್ಕಾರ್ ಕುಟುಂಬ ಭಾರತೀಯ ಮ್ಯಾಜಿಕ್‍ನ ರಾಯಭಾರಿಗಳಾಗಿದ್ದಾರೆ.
ಪಿಸಿ ಸರ್ಕಾರ್‍ರನ್ನು ಸಾಮಾನ್ಯವಾಗಿ ಭಾರತದ ಲಿಯೊನಾರ್ಡೊ-ಡಾ-ವಿನ್ಸಿ ಎಂದು ಕರೆಯುತ್ತಾರೆ. ಈಗ ಅವರ ಪುತ್ರ ಪಿಸಿ ಸರ್ಕಾರ್ (ಮಾಸ್ಟರ್) ಕುಟುಂಬದ ಅತ್ಯಂತ ಕಿರಿಯ ಮ್ಯಾಜಿಶಿಯನ್ ಆಗಿದ್ದು, ತನ್ನ ತಾತನಿಗೆ ಹೆಸರು ತಂದುಕೊಟ್ಟಿದ್ದ ‘ಎ ಪೇಂಟರ್ ಮತ್ತು ಎ ಡ್ರಮ್ಮರ್’ ಶೋಗೆ ಹೊಸತನದ ಛಾಪು ಒತ್ತಿ ಮರು ಸೃಷ್ಟಿಸಿ ಸರ್ಕಾರ್ ಕುಟುಂಬದ ಮ್ಯಾಜಿಕ್ ದೀಪ ಮತ್ತೆ ಪ್ರಕಾಶಮಾನವಾಗಿ ಉರಿಯುವಂತೆ ಮಾಡಿದ್ದಾರೆ.
ಅವರ ಇನ್ನೊಂದು ಪ್ರದರ್ಶನ “ಸೋಲ್ ಥ್ರೂ ದಿ ಸೋಲ್”ನಲ್ಲಿ ಭ್ರಮೆ ಹುಟ್ಟಿಸುವ ಸನ್ನಿವೇಶಗಳಿದ್ದವು, ಅವು ಪ್ರೇಕ್ಷಕರನ್ನು ತಮ್ಮ ಆಸನಗಳ ತುದಿಯಲ್ಲಿ ಕೂರುವಂತೆ ಮಾಡುತ್ತಿವೆ. “ಬಡ್ರ್ಸ್ ಫ್ರಮ್ ನೋವೇರ್” ಎನ್ನುವುದು ಶುದ್ಧ ಮ್ಯಾಜಿಕಲ್ ವರ್ಕ್ ಆಗಿದ್ದು, ಅಲ್ಲಿ ಪಂಜರದಲ್ಲಿರುವ ಪಕ್ಷಿಗಳು ಸಂಪೂರ್ಣವಾಗಿ ಮಾಯವಾಗುತ್ತವೆ. ಏನು ನಡೆಯುತ್ತಿದೆ ಎಂದು ತಿಳಿಯುವಷ್ಟರಲ್ಲಿ ಈಜಿಪ್ಟ್ ರಾಜಕುಮಾರಿಯ ದೇಹ ಗಾಳಿಯಲ್ಲಿ ತೇಲಾಡಿ ಶವಪೆಟ್ಟಿಗೆಯಿಂದ ಕಣ್ಮರೆಯಾಗುತ್ತದೆ, ನಂತರ ಮತ್ತೆ ಕಾಣಿಸಿಕೊಳ್ಳುತ್ತದೆ. ಜಾದು ಪ್ರದರ್ಶನ ವೀಕ್ಷಿಸುವವರೂ ಸಂಪೂರ್ಣವಾಗಿ ಬೆವೆತು ಒದ್ದೆಯಾದದ್ದಿದೆ.
ನಂತರ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಸುತ್ತು. ಹೌದು, ಯುವತಿಯೊಬ್ಬಳ ನಡುವನ್ನು ತುಂಡರಿಸಿ ಮತ್ತೆ ಒಂದಾಗಿಸಿದಾಗ ಆಕೆ ಜೀವಂತವಾಗಿ ಮೇಲೆದ್ದು ಬರುತ್ತಾಳೆ. ಪ್ರೇಕ್ಷಕರಿಂದ ಈ ಪ್ರದರ್ಶನಕ್ಕೆ ಕರತಾಡನಗಳ ಸುರಿಮಳೆ. ಕೊನೆಗೆ ಜಾದೂಗಾರ ತನ್ನ ಮೇಲೆಯೇ ಮ್ಯಾಜಿಕ್ ಪ್ರಯೋಗಿಸಿಕೊಂಡ. ವೇದಿಕೆಯಲ್ಲಿ ಅಸ್ಥಿ ಪಂಜರದ ಜೊತೆ ಆಟವಾಡುತ್ತ ತಕ್ಷಣ ಸಭಾಂಗಣದ ಮಧ್ಯ ಭಾಗದಲ್ಲಿ ಸಭಿಕರ ಮಧ್ಯೆ ಕಾಣಿಸಿಕೊಂಡ. ಇದರೊಂದಿಗೆ ಆತ ಒಬ್ಬ ಅತ್ಯುತ್ತಮ ಜಾದೂಗಾರ ಎಂಬುದನ್ನು ಸಾಬೀತು ಪಡಿಸಿದ. ಇಡೀ ಜನಸಮೂಹವೇ ಕ್ಷಣ ಕಾಲ ದಿಗ್ಭ್ರಮೆಗೊಂಡಿತು. ಇದು ಅವರ ಜಾದು ಮಹಿಮೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
