ಕೈಗಾರಿಕಾ ಸಂಘಟನೆಗಳು ವಾಸ್ತವತೆಯನ್ನು ಜನರ ಮುಂದೆ ಇಡಲಿ : ಜಗದೀಶ್ ಶೆಟ್ಟರ್

ಬೆಂಗಳೂರು:

      ನೂತನ ಕೈಗಾರಿಕಾ ನೀತಿ-2019-2024ರ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಎಲ್ಲಾ “ಕೈಗಾರಿಕಾ ಅಸೋಸಿಯೇಷನ್”ನ ಮುಖ್ಯಸ್ಥರೊಂದಿಗೆ ಕರ್ನಾಟಕ ಉದ್ಯೋಗ ಮಿತ್ರ ಭವನದಲ್ಲಿ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ, ಹಲವು ಸಲಹೆಗಳನ್ನು ಪಡೆದುಕೊಂಡರು,

     ಬಳಿಕ ಮಾತನಾಡಿದ ಅವರು, ನೂತನ ಕೈಗಾರಿಕಾ ನೀತಿ ಹಿನ್ನೆಲೆಯಲ್ಲಿ ಕೈಗಾರಿಕಾ ಸಂಘಟನಾ ಮುಖ್ಯಸ್ಥರು ನೀಡಿರುವ ಎಲ್ಲಾ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಪಾಲಿಸಿ ಅಗತ್ಯತೆಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಲಾಗುವುದು. ಪ್ರಸ್ತುತ ರಾಜ್ಯದಲ್ಲಿ ಇರುವ ಪಾಲಿಸಿ ಈ ವರ್ಷಾಂತ್ಯಕ್ಕೆ ಅಂತ್ಯಗೊಳ್ಳಲಿದೆ. ನೂತನ ಪಾಲಿಸಿ ಸಿದ್ಧತೆ ನಡೆಸಲಾಗುತ್ತಿದೆ. ಕೈಗಾರಿಕೆಯಲ್ಲಿ ಮುಂದಿರುವ ಇತರೆ ರಾಜ್ಯಗಳಲ್ಲಿನ ಕೈಗಾರಿಕಾ ನೀತಿಯನ್ನು ಅಧ್ಯಯನ ನಡೆಸಿ, ಉತ್ತಮ ಅಂಶಗಳನ್ನು ನಮ್ಮ ಪಾಲಿಸಿಯಲ್ಲೂ ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಇದರ ಭಾಗವಾಗಿ ರಾಜ್ಯದ ಎಲ್ಲಾ ಕೈಗಾರಿಕಾ ಅಸೋಸಿಯೇಷನ್‍ನ ಮುಖ್ಯಸ್ಥರನ್ನು ಈ ಸಭೆಗೆ ಆಹ್ವಾನಿಸಿ ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ನೂತನ ಪಾಲಿಸಿ ಕರಡು ಸಿದ್ಧವಾದ ಬಳಿಕ ಮತ್ತೊಂದು ಸುತ್ತು ಎಲ್ಲಾ ಕೈಗಾರಿಕಾ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದೇನೆ ಎಂದು ಹೇಳಿದರು.

     25 ವರ್ಷದ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಕೇಂದ್ರ ಸರಕಾರ ತಂದಿರುವ ಕೈಗಾರಿಕಾ ಪಾಲಿಸಿಯನ್ನು ಸೂಕ್ತರೀತಿಯಲ್ಲಿ ಪಾಲಿಸಿದರೆ ಸಾಕಷ್ಟು ಸಮಸ್ಯೆಗಳು ನೀಗಲಿವೆ, ಕೈಗಾರಿಕಾ ಕ್ಷೇತ್ರ ಹಾಗೂ ಯುವ ಉದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಕೇಂದ್ರ ಸರಕಾರ ಅನೇಕ ಕಾರ್ಯಕ್ರಮಗಳನ್ನು ತಂದಿದೆ.ಅದನ್ನು ಸೂಕ್ತರೀತಿಯ ಅನುಷ್ಠಾನವನ್ನು ನಮ್ಮ ಸರಕಾರ ಮಾಡಲಿದೆ ಎಂದರು.

    ಕೈಗಾರಿಕಾ ಅಭಿವೃದ್ಧಿಗೆ ವಾಯು ಮಾರ್ಗ, ರೈಲು ಮಾರ್ಗ ಸುಲಲಿತವಾಗಿರಬೇಕು. ಹೈದರಾಬಾದ್ ಕರ್ನಾಟಕವಾದ ಕಲುಬುರ್ಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದೇವೆ. ಕಲುಬುರ್ಗಿ ವಿಮಾನ ನಿಲ್ದಾಣ ಲೋಕಾರ್ಪಣೆಯಾದ ನಂತರ ಈ ಭಾಗದಲ್ಲಿ ಕೈಗಾರಿಕೆ ಇನ್ನಷ್ಟು ಬೆಳೆಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

    ಪ್ರಸ್ತುತ ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವಿದೆ. ಆದರೆ, ಈಸ್ ಆಫ್ ಡೂಯಿಂಗ್ ಬಿಸಿನೆಸ್ (ಈಒಡಿಬಿ) ಸಮರ್ಪಕವಾಗಿ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಿದ್ದೇನೆ ಎಂದರು.

     ಮತ್ತೊಂದೆಡೆ ಆರ್ಥಿಕ ಕುಸಿತದ ಬಗ್ಗೆ ಅನಗತ್ಯ ಗೊಂದಲ ಉಂಟಾಗುತ್ತಿದೆ. ಕೈಗಾರಿಕಾ ಸಂಘಟನೆ ಮುಖ್ಯಸ್ಥರು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ತಜ್ಞರು ಮಾಧ್ಯಮಗಳಿಗೆ ಇದರ ವಾಸ್ತವದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿ ಎಂದು ಶೆಟ್ಟರ್ ಅವರು ಸೂಚಿಸಿದರು.ಕೆಲ ಕ್ಷೇತ್ರಗಳಲ್ಲಿ ಮಾತ್ರ ಆರ್ಥಿಕ ಕುಸಿತ ಸಂಭವಿಸಿದೆ. ಅದೂ ಕೂಡ ತಾತ್ಕಾಲಿಕ. ರಾಜ್ಯದಲ್ಲಿ ಯಾವುದೇ ಕೈಗಾರಿಕೆ ಮುಚ್ಚಿಲ್ಲ. ಜನರಿಗೆ ತಪ್ಪು ಸಂದೇಶ ಹೋಗಬಾರದು. ಹೀಗಾಗಿ ಕೈಗಾರಿಕಾ ಸಂಘಟನೆಗಳ ಮುಖ್ಯಸ್ಥರು ಮಾಧ್ಯಮದ ಮೂಲಕ ಆರ್ಥಿಕ ಪರಿಸ್ಥಿತಿಯ ವಾಸ್ತವದ ಸ್ಥಿತಿಯನ್ನು ಜನರ ಮುಂದಿಡುವಂತೆ ಸಲಹೆ ನೀಡಿದರು.

      ಆರ್ಥಿಕ ಕುಸಿತದ ಬಗ್ಗೆ ಅನಗತ್ಯ ಗೊಂದಲ ನಿರ್ಮಾಣ ಮಾಡುವುದರಿಂದ ಕೈಗಾರಿಕಾ ಕ್ಷೇತ್ರದಲ್ಲಿನ ಹೂಡಿಕೆ ಮೇಲೆ ಹೊಡೆತ ಬೀಳಲಿದೆ ಎಂದರು.

      ಸಭೆಯಲ್ಲಿ ಎಫ್‍ಕೆಸಿಸಿಐ, ಕಾಸಿಯಾ, ಪೀಣ್ಯ ಕೈಗಾರಿಕಾ ಸಂಘ, ಕರ್ನಾಟಕ ಮಹಿಳಾ ಉದ್ಯಮಿಗಳ ಸಂಸ್ಥೆ, ಇಂಡಿಯನ್ ಮಿಷನ್ ಟೂಲ್ ಅಸೋಸಿಯೇಷನ್ ಸೇರಿದಂತೆ 50ಕ್ಕೂ ಹೆಚ್ಚು ಕೈಗಾರಿಕಾ ಸಂಘಟನೆ ಮುಖ್ಯಸ್ಥರು ಹಾಗೂ ಪದಾಧಿಕಾರಿ ಗಳು ಪಾಲ್ಗೊಂಡು ಹಲವು ಸಲಹೆ ಹಾಗೂ ಮನವಿ ಸಲ್ಲಿಸಿದರು.ಸಭೆಯಲ್ಲಿ ಪ್ರಧಾನಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link