ಪ್ರವಾಹ ಸಂತ್ರಸ್ತರಿಗೆ ಇನ್ಫೋಸಿಸ್ ಪ್ರತಿಷ್ಠಾನದಿಂದ 10 ಕೋಟಿ ರೂ. ನೆರವು.!

ಬೆಂಗಳೂರು

     ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡಿರುವ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಇನ್ಫೋಸಿಸ್ನ ಅಂಗಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆಯಾದ ಇನ್ಫೋಸಿಸ್ ಪ್ರತಿಷ್ಠಾನ 10 ಕೋಟಿ ರೂ ನೆರವು ಘೋಷಿಸಿದೆ.

     ಈಗಾಗಲೇ ರಾಯಚೂರು, ಬಾಗಲಕೋಟೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಇನ್ ಫೋಸಿಸ್ ಪ್ರತಿಷ್ಠಾನ ಪರಿಹಾರ ಕಾರ್ಯ ಆರಂಭಿಸಿದ್ದು, ಉಳಿದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತನ್ನ ಸೇವಾ ಜಾಲವನ್ನು ವಿಸ್ತರಿಸಿದೆ. ಸ್ವಯಂಸೇವಕರೊಂದಿಗೆ ಹಂತಹಂತವಾಗಿ ಪರಿಹಾರ ಕಾರ್ಯಗಳಲ್ಲಿ ನಿರತವಾಗಲಿದ್ದು, ಕುಡಿಯುವ ನೀರು, ಆಹಾರ ಉತ್ಪನ್ನಗಳು, ಬಟ್ಟೆ ಮತ್ತು ವೈದ್ಯಕೀಯ ಕಿಟ್ಗಳು ಸೇರಿದಂತೆ ಪ್ರವಾಹ ಪ್ರದೇಶಗಳ ಜನರ ಅಗತ್ಯ ವಸ್ತುಗಳ ವಿತರಣೆ ಕಾರ್ಯವನ್ನು ಈಗಾಗಲೇ ಆರಂಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

      ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಅನಾಹುತಗಳು ಸಂಭವಿಸಿದ್ದು, ರಸ್ತೆ, ರೈಲು ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೌಂಡೇಶನ್ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದು, ಅಗತ್ಯ ಇರುವೆಡೆ ಪರಿಹಾರ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.

       ಇನ್ಫೋಸಿಸ್ ಫೌಂಡೇಶನ್ ದೇಶದಲ್ಲಿ ಪ್ರಕೃತಿ ವಿಕೋಪಗಳಿಗೆ ತುತ್ತಾದ ಜನರಿಗೆ ನೆರವಾಗುತ್ತಾ ಬಂದಿದೆ. ಇತ್ತೀಚೆಗೆ ಒಡಿಶಾದಲ್ಲಿ ಸೈಕ್ಲೋನ್ನಿಂದ ಉಂಟಾದ ಅನಾಹುತಗಳಿಗೆ ತುತ್ತಾದ ಜನರಿಗೆ ನೆರವಾಗಿತ್ತು. ಇದಲ್ಲದೇ, ಕಳೆದ ವರ್ಷ ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆ, ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ನೆರವಿನ ಹಸ್ತ ಚಾಚಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap