ಹುಬ್ಬಳ್ಳಿ:
ಪಕ್ಷದ ವರಿಷ್ಠರು ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಭಾನುವಾರ ಹೇಳಿದರು.
ಪಕ್ಷ ಸೂಚಿಸಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ, ಇಲ್ಲವೇ ಚುನಾವಣಾ ಪ್ರಚಾರ ಮಾಡಬೇಕು, ಪಕ್ಷ ಸಂಘಟನೆ ಮಾಡಬೇಕೆಂದರೆ ಅದಕ್ಕೂ ಸಿದ್ಧನಿದ್ದೇನೆ. ಇದನ್ನು ನಾನು ಬಿಜೆಪಿಗೆ ಮರು ಸೇರ್ಪಡೆಯದಾಗಿನಿಂದ ಹೇಳುತ್ತಿದ್ದೇನೆ ಎಂದು ಹೇಳಿದರು.
ನಾನು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ವರಿಷ್ಠರು ನನ್ನ ಬಳಿ ಚರ್ಚೆ ಮಾಡಿಲ್ಲ. ಅವರು ಯಾವ ಕ್ಷೇತ್ರ ಸೂಚಿಸುತ್ತಾರೋ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ. ಇದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಹಿರಿಯ ಸಂಸದರಿಗೆ ಟಿಕೆಟ್ ಕೈತಪ್ಪುವ ವಿಚಾರಕ್ಕೆ, ಇದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಆದರೆ ದೆಹಲಿ ಮಟ್ಟದಲ್ಲೇನು ಚರ್ಚೆಯಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. 2-3 ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಆಗುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು.