ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಇ-ಆಸ್ತಿ ತಂತ್ರಾಂಶ ಅಳವಡಿಕೆಗೆ ಸೂಚನೆ..!

ತುಮಕೂರು
    ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ ಹಾಗೂ ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಅದನ್ನು ತುಮಕೂರು ಸೇರಿದಂತೆ ರಾಜ್ಯದ ಎಲ್ಲ 10 ಮಹಾನಗರ ಪಾಲಿಕೆಗಳು ಒಳಗೊಂಡು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಳವಡಿಸಿ, ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸೂಚಿಸಿದೆ.ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ಸುತ್ತೋಲೆ (ಸಂಖ್ಯೆ: ನಅಇ/02/ಎಂ.ಎನ್.ಇ./2019-ಇ, ದಿನಾಂಕ 17-06-2019) ಹೊರಡಿಸಿದೆ.
    ಈ ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ ಮತ್ತು ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು/ತಿದ್ದುಪಡಿ ಮಾಡಲು, ಆಸ್ತಿಗಳ ಮಾಲೀಕತ್ವ ಹಕ್ಕು ವರ್ಗಾವಣೆ ಮಾಡಲು ಮತ್ತು ಆಸ್ತಿ ತೆರಿಗೆ ವಹಿಯ ನಕಲನ್ನು (ನಮೂನೆ-3) ಡಿಜಿಟಲ್ ಸಹಿಯೊಂದಿಗೆ ತಂತ್ರಾಂಶದಿಂದ ಸೃಜಿಸಿ ಅಧಿಕೃತ ಮತ್ತು ಅನಧಿಕೃತವಲ್ಲದ ಆಸ್ತಿಗಳಿಗೆ ನೀಡಲು ಅವಕಾಶ ಕಲ್ಪಸಲಾಗಿದೆ ಎಂದು ಸದರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
     ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಏರ್ಪಟ್ಟಿದ್ದ ಇ.ಓ.ಡಿ.ಬಿ. ಪರಿಶೀಲನಾ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿ, ಇ-ಆಸ್ತಿ ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಜೋಡಣೆ ಮಾಡಲು ಹಾಗೂ 10 ಮಹಾನಗರ ಪಾಲಿಕೆಗಳನ್ನು ಒಳಗೊಂಡಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶವನ್ನು ಅಳವಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ಸಹ ಮತ್ತೊಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಿದೆ.
ಉಲ್ಲಂಘಿಸಿದರೆ ಶಿಸ್ತುಕ್ರಮ
     ನಿಯಮಬಾಹಿರವಾಗಿ ತೆರೆದಿರುವ ಖಾತೆಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ/ ಯೋಜನಾ ಪ್ರಾಧಿಕಾರ/ ಪುರಸಭೆ ಯೋಜನಾ ಪ್ರಾಧಿಕಾರ ಅಥವಾ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದಿಂದ ರದ್ದುಪಡಿಸಲು/ಖಾತೆಯನ್ನು ನೀಡಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಇಂತಹ ಖಾತೆಗಳನ್ನು ವಿಸ್ತರಿಸಿದರೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಎಚ್ಚರಿಸಲಾಗಿದೆ.
     ಮಹಾನಗರ ಪಾಲಿಕೆಗಳು ವ್ಯವಸ್ಥಿತವಾಗಿ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಿ, ಜಾಗರೂಕತೆಯಿಂದ ಆಸ್ತಿಗಳ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ನಾಗರಿಕರಿಗೆ ನೀಡುವ ನಮೂನೆ-2 ರಲ್ಲಿ ಎಲ್ಲ ಮಾಹಿತಿಗಳೂ ಲಭ್ಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಒಂದು ವೇಳೆ ತಂತ್ರಾಂಶದಲ್ಲಿ ದಾಖಲಿಸಿದ ಮಾಹಿತಿಗಳಲ್ಲಿ ಯಾವುದೇ ರೀತಿಯ ತಪ್ಪೆಸಗಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿ/ನೌಕರರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ನಿಯಮಬಾಹಿರ ಖಾತೆ ರದ್ದುಪಡಿಸಲೂ ಸೂಚನೆ
     ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮಬಾಹಿರವಾಗಿ ತೆರೆದಿರುವ ಖಾತೆಗಳನ್ನು ಉಪಲೋಕಾಯುಕ್ತರ ನಿರ್ದೇಶÀನದ ಅನುಸಾರ ರದ್ದುಪಡಿಸುವಂತೆ ಸೂಚಿಸಿ, ಪೌರಾಡಳಿತ ನಿರ್ದೇಶಕರು ಕಳೆದ ವರ್ಷ ಹೊರಡಿಸಿರುವ ಒಂದು ಸುತ್ತೋಲೆ (ಸಂಖ್ಯೆ:23350/ ಡಿ.ಎಂ.ಎ./121/ ಜಿಪಿಎಸ್/2017-18, ದಿನಾಂಕ 05-01-2018) ಸಹ ಈಗ ಮುನ್ನಲೆಗೆ ಬಂದಿದ್ದು, ಚರ್ಚೆಗೆಡೆಮಾಡಿಕೊಟ್ಟಿದೆ.
     ಸಕ್ಷಮ ಪ್ರಾಧಿಕಾರಗಳಿಂದ ವಿನ್ಯಾಸ ಅನುಮೋದನೆ ಪಡೆಯದೆ ಇರುವ ನಿವೇಶನಗಳಿಗೆ ಖಾತೆಯನ್ನು ನೀಡಬಾರದೆಂದು ಈಗಾಗಲೇ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿರುತ್ತದೆ. ಅಲ್ಲದೆ ಇನ್ನಿತರೆ ಹಲವು ಪ್ರಕರಣಗಳಲ್ಲಿ ನಿಯಮಬಾಹಿರವಾಗಿ ಖಾತಾ ವರ್ಗಾವಣೆ ಮಾಡುತ್ತಿರುವ ಕುರಿತು ಹಲವಾರು ದೂರುಗಳು ಸ್ವೀಕೃತವಾಗುತ್ತಿವೆ. ಆದ್ದರಿಂದ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಯಮಬಾಹಿರ ಖಾತಾ ವರ್ಗಾವಣೆಗಳನ್ನು ಗುರುತಿಸಿ ನಿಯಮಾನುಸಾರ ರದ್ದುಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಆಯುಕ್ತರು/ಪೌರಾಯುಕ್ತರು/ ಮುಖ್ಯಾಧಿಕಾರಿಗಳಿಗೆ ಈ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap