ತುಮಕೂರು
ಸಿಗ್ನಲ್ ಜಂಪ್ ಮಾಡುವುದು ಸೇರಿದಂತೆ ತುಮಕೂರು ನಗರದಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ವಿವಿಧ 7 ಅತ್ಯಾಧುನಿಕ ಕೆಲಸಗಳನ್ನು ನಿರ್ವಹಿಸುವ ಇಂಟಿಗ್ರೆಟೆಡ್ ಸಿಟಿ ಕಮಾಂಡಿಂಗ್ ಅಂಡ್ ಕಂಟ್ರೋಲಿಂಗ್ ಕೇಂದ್ರವು ಮಹಾನಗರ ಪಾಲಿಕೆ ಆವರಣದಲ್ಲಿ ಇಂದಿನಿಂದ (ಗುರುವಾರ) ಕಾರ್ಯಾರಂಭ ಮಾಡಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಈ ಕೇಂದ್ರವನ್ನು ಸಂಸದರಾದ ಜಿ.ಎಸ್. ಬಸವರಾಜು ಅವರು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರದ ಮೂಲಕ ತುಮಕೂರು ನಗರದ 8 ಜಂಕ್ಷನ್‍ಗಳಲ್ಲಿ ರಸ್ತೆ ನಿಯಮ ಉಲ್ಲಂಘಿಸುವ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಇದರಿಂದಾಗಿ ಶಿಸ್ತುಬದ್ಧ ಸಾರಿಗೆ ವ್ಯವಸ್ಥೆ ನಗರದಲ್ಲಿ ಅನುಷ್ಟಾನಗೊಳ್ಳಲಿದೆ. ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿದೆ. ಇಂದು ಈ ಕೇಂದ್ರವನ್ನು ಆರಂಭಿಸಿದ್ದು, ಈ ಬಗ್ಗೆ ನಗರದ ಜನತೆಗೆ ವ್ಯಾಪಕ ಅರಿವು ಮೂಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ನಂತರ ಸಂಚಾರ ಉಲ್ಲಂಘನೆಗೆ ಈ ಕೇಂದ್ರದ ಮೂಲಕ ನೋಟೀಸ್ ಜಾರಿ ಮಾಡಿ ದಂಡವನ್ನು ಸಂಗ್ರಹಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿ, ಶಾಸಕ ಜ್ಯೋತಿಗಣೇಶ್ ಅವರು ನಗರದ ಕ್ಯಾತ್ಸಂದ್ರ, ಬಟವಾಡಿ, ಟೌನ್‍ಹಾಲ್ ಸರ್ಕಲ್, ಶಿವಕುಮಾರ ಸ್ವಾಮೀಜಿ ಸರ್ಕಲ್ ಸೇರಿದಂತೆ 8 ಜಂಕ್ಷನ್‍ಗಳಲ್ಲಿ ರೆಡ್‍ಲೈಟ್ ವೈಲೇಷನ್, ಡಿಟೀಕ್ಷನ್ ಕ್ಯಾಮೆರಾ, ಆಟೋಮ್ಯಾಟಿಕ್ ನಂಬರ್‍ಪ್ಲೇಟ್, ರೆಕಗ್ನಿಷನ್ ಕ್ಯಾಮೆರಾ ಸೇರಿದಂತೆ ವಿವಿಧ ರೀತಿಯ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಕ್ಯಾಮೆರಾಗಳು ರಸ್ತೆ ಉಲ್ಲಂಘನೆ ಮಾಡುವ ವಾಹನಗಳ ನಂಬರ್ ಪ್ಲೇಟ್‍ಗಳನ್ನು ಸೆರೆಹಿಡಿಯಲಿವೆ.
ನಂತರ ಸಂಬಂಧಿಸಿದ ವಾಹನ ಮಾಲೀಕರಿಗೆ ದಂಡ ವಿಧಿಸಲು ನೋಟೀಸ್‍ನ್ನು ಈ ಕೇಂದ್ರದ ಮೂಲಕ ಜನರೇಟ್ ಮಾಡಿ ಪೊಲೀಸ್ ಇಲಾಖೆ ಜಾರಿ ಮಾಡಲಿದೆ. ಕೇಂದ್ರಿಕೃತ ವ್ಯವಸ್ಥೆಯಿಂದ ನಗರದಲ್ಲಿ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಯ ಮೇಲೂ ನಿಗಾವಹಿಸಬಹುದಾಗಿದೆ ಎಂದರು.
ಈ ಕೇಂದ್ರವು ತಾತ್ಕಾಲಿಕವಾಗಿ ಪಾಲಿಕೆ ಆವರಣದಲ್ಲಿ ಪ್ರಾರಂಭವಾಗಿದ್ದು, ತದನಂತರ ನಗರದ ಜಿಲ್ಲಾ ಎಸ್‍ಪಿ ಕಛೇರಿ ಆವರಣಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲಿದೆ. ಬೀದಿ ದೀಪಗಳ ನಿರ್ವಹಣೆ, ಜಿಪಿಎಸ್ ಆಧಾರಿತ ಆಸ್ತಿಗಳ ನೋಂದಣಿ ಸೇರಿದಂತೆ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ಈ ಕೇಂದ್ರ ನಿರ್ವಹಿಸಲಿದೆ. ಎಫ್ಕಾನ್ ಇಂಡಿಯಾ ಸಂಸ್ಥೆಯು 5 ವರ್ಷಗಳ ಕಾಲ ಈ ಕೇಂದ್ರವನ್ನು ನಿರ್ವಹಿಸಿ ಪಾಲಿಕೆ ಹಸ್ತಾಂತರಿಸಲಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಸ್ತಿ ತೆರಿಗೆ ಪಾವತಿ, ನೀರು ಬಿಲ್ಲು, ಸಕಾಲ ಮತ್ತಿತರ ಸೌಲಭ್ಯಗಳನ್ನು ಪಡೆಯಲು ನಗರದ ಜನರಿಗೆ ಅನುಕೂಲವಾಗುವ “ಸ್ಮಾರ್ಟ್ ತುಮಕೂರು” ಆ್ಯಪ್‍ಗೆ ಸಂಸದರು ಹಾಗೂ ಶಾಸಕರು ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಎಸ್‍ಪಿ ಡಾ: ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಭೂಬಾಲನ್ ಸೇರಿದಂತೆ ಹಲವರು ಹಾಜರಿದ್ದರು.