ಬ್ಯಾಡಗಿ:
ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಟ್ಟು 91 ಕೀ.ಮೀ.ರೈಲ್ವೆ ಟ್ರ್ಯಾಕ್ ಅಭಿವೃದ್ಧಿಗೆ 144 ಕೋಟಿ ರೂ.ಒದಗಿಸಿದ್ದೇನೆ, ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಇಂಟರ್‍ಸಿಟಿ ರೈಲ್ವೆ ನಿಲುಗಡೆಗೆ ಅವಕಾಶ ಕಲ್ಪಿಸುವ ಮೂಲಕ ಗೌರವ ಹೆಚ್ಚಿಸಿದ್ದೇನೆ, ಹೆಚ್ಚಿನ ಜನರು ರೈಲ್ವೆಯಲ್ಲಿ ಪ್ರಯಾಣಿಸುವ ಮೂಲಕ ಇಲಾಖೆಗೆ ಆದಾಯವನ್ನು ವೃದ್ಧಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಧಾರವಾಡ-ಬೆಂಗಳೂರು ಇಂಟರ್‍ಸಿಟಿ ಟ್ರೈನ್ ಬ್ಯಾಡಗಿ ನಿಲ್ದಾಣದಲ್ಲಿ ನಿಲುಗಡೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ, ದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದ್ದು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಾಗಿದೆ ಎಂದರು.
ವಿವಿಧ ಸಂಘಟನೆಗಳು ಹೋರಾಟ: ಇಂಟರ್‍ಸಿಟಿ ನಿಲುಗಡೆಗಾಗಿ ಸಾಕಷ್ಟು ಬಾರಿ ಹಲವು ಸಂಘಟನೆಗಳು ಪ್ರತಿಭಟನೆ ಮಾಡುವ ಮೂಲಕ ಮನವಿ ಸಲ್ಲಿಸಿದ್ದವು ಕಳೆದ 10 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಇಂತಹ ಮನವಿಗಳು ಸಲ್ಲಿಕೆಯಾಗಿವೆ, ಆದರೆ ತಾಂತ್ರಿಕ ಕಾರಣಗಳಿಂದ ಬ್ಯಾಡಗಿ ಪಟ್ಟಣಕ್ಕೆ ಇಂಟರ್‍ಸಿಟಿ ನಿಲುಗಡೆಯಾಗಿರಲಿಲ್ಲ, ಇದೀಗ ನಿಲುಗಡೆಯ ಸುಸಂದರ್ಭ ಒದಗಿ ಬಂದಿದ್ದು ನನ್ನನ್ನೂ ಸೇರಿದಂತೆ ಬ್ಯಾಡಗಿ ಜನತೆಯ ಬಹುದಿನಗಳ ಆಸೆ ಈಡೇರಿದಂತಾಗಿದೆ.
ಕೇವಲ 11 ಸ್ಟೇಶನ್‍ಗಳಿಗೆ 144 ಕೋಟಿ: ಲೋಕಸಭಾ ವ್ಯಾಪ್ತಿಯಲ್ಲಿ ಬರುವ 91 ಕೀ.ಮೀ. ಉದ್ದದ ರೈಲ್ವೆ ಹಳಿಯಿದ್ದು, ಇದರಲ್ಲಿ ಕೇವಲ 11 ನಿಲ್ದಾಣಗಳಿವೆ, ಅವುಗಳನ್ನು ಮೇಲ್ದರ್ಜೆಗೇರಿಸುವುದೂ ಸೇರಿದಂತೆ ಸೇತುವೆ ನಿರ್ಮಾಣ ಇನ್ನಿತರ ಕಾಮಗಾರಿಗಳಿಗೆ 144 ಕೋಟಿ ರೂ.ಅನುದಾನವನ್ನು ಕೇಂದ್ರ ರೈಲ್ವೆ ಇಲಾಖೆ ನೀಡಿದೆ, ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ಬಹುಶಃ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ದೊರಕಿರುವ ಸಾಧ್ಯತೆಗಳಿಲ್ಲ ಎಂದರು.
ಬ್ಯಾಡಗಿ ನೂತನ ರೈಲ್ವೆ ನಿಲ್ದಾಣಕ್ಕೆ: ಬ್ಯಾಡಗಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಇಂಗಿತ ವ್ಯಕ್ತಪಡಿಸಿದ್ದು ಇದಕ್ಕಾಗಿ ರೂ.5 ಕೋಟಿ ಅನುದಾನ ಒದಗಿಸಲಾಗಿದ್ದು ಈಗಾಗಲೇ ಕಾಮಗಾರಿ ಆರಂಭವಾಗಿದೆ, ಇತ್ತೀಚೆಗೆ ಬ್ಯಾಡಗಿ ನಿಲ್ದಾಣಕ್ಕೆ ಅತ್ಯುತ್ತಮ ಸ್ವಚ್ಚ ನಿಲ್ದಾಣವೆಂದು ವೀಭಾಗೀಯ ಪ್ರಶಸ್ತಿ ಕೂಡ ದೊರಕಿರುವುದು ಸಂತೋಷದ ವಿಷಯ ಇದಕ್ಕೆಲ್ಲಾ ಸಾರ್ವಜನಿಕರ ಸಹಕಾರವೇ ಮುಖ್ಯವಾಗಿದೆ ಎಂದರು.
ಮೂಲ ಸೌಕರ್ಯಕ್ಕಾಗಿ ಇನ್ನೂ ಬೇಡಿಕೆಗಳಿವೆ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ನರೇಂದ್ರ ಮೋದಿಯವರ ಸಾರಥ್ಯದಲ್ಲಿ ದೇಶವಿಂದು ವಿಶ್ವದಲ್ಲೇ ಮುಂಚೂಣಿಯತ್ತ ಸಾಗುತ್ತಿದೆ, ಅವರನ್ನು ಒಬ್ಬ ವ್ಯಕ್ತಿಯಾಗಿ ನೋಡುವುದಕ್ಕಿಂತ ಒಂದು ಶಕ್ತಿಯಾಗಿ ಪರಿಗಣಿಸಬೇಕಾಗಿದೆ ಎಂದ ಅವರು, ರೈಲ್ವೆ ನಿಲ್ದಾಣದಲ್ಲಿ ಹಳಿಗಳನ್ನು ದಾಟಲು ಪ್ರಯಾಣಿಕರಿಗೆ ಮೇಲ್ಸೆತುವೆ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಇನ್ನೂ ಹೆಚ್ಚು ಶಕ್ತಿಯನ್ನು ಹಾಕಬೇಕಾಗಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಪ್ರಯತ್ನವಾಗಲಿ: ಹಾವೇರಿ ಶಾಸಕ ನೆಹರು ಓಲೇಕಾರ ಮಾತನಾಡಿ, ಜಿಲ್ಲೆಯಲ್ಲಿ ವಿಮಾಣ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸುವ ಕಾರ್ಯಗಳಾಗಬೇಕು, ಜಿಲ್ಲೆಯ ಜನರು ನೂರು ಕಿ.ಮೀ.ತೆರಳಿ ವಿಮಾವನ್ನು ಹತ್ತುವಂತಹ ವ್ಯವಸ್ಥೆಯಾಗಿದೆ, ಮಾನ್ಯ ಸಂಸದರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಮೂಲಕ ಜಿಲ್ಲೆಗೊಂದು ವಿಮಾನನಿಲ್ದಾಣ ಮಂಜೂರು ಮಾಡಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಮಖಂಡರಾದ ಶಿವಬಸಪ್ಪ ಕುಳೇನೂರ ಸೇರಿದಂತೆ ರೈಲ್ವೆ ಸುಧಾರಣಾ ಸಮಿತಿ, ರೈಲ್ವೆ ಹೋರಾಟ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.