ಹರಪನಹಳ್ಳಿ:
ಮಹಿಳೆಯರಿಗೆ ಪ್ರೋತ್ಸಾಹ ನೀಡಿದರೆ ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲೂ ಉನ್ನತ ಸಾಧನೆ ಮಾಡಬಲ್ಲಳು ಎಂಬುವುದಕ್ಕೆ ನೂರಾರು ನಿದರ್ಶನಗಳಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಹೇಳಿದರು.
ಪಟ್ಟಣದ ಕಾಶಿಮಠದಲ್ಲಿ ಭಾನುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಅಂತರ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಮಹಿಳೆಯರು ಸಕ್ರಿಯರಾಗಿ ಭಾಗವಹಿಸಿದ್ದರು. ತೊಟ್ಟಿಲು ತೂಗುವ ಕೈ ಜಗತ್ತು ನಿಬಾಯಿಸಬಲ್ಲದು ಎಂಬುದಕ್ಕೆ ಅಂದಿನ ಮಹಿಳೆಯರೇ ಸಾಕ್ಷಿ ಆಗಿದ್ದರು. ಬದಲಾದ ಕಾಲಘಟ್ಟದಲ್ಲಿ ಮಹಿಳೆ ಇಂದು ಎಲ್ಲ ರಂಗದಲ್ಲೂ ತನ್ನ ಛಾಪು ಮೂಡಿಸಿ ದೇಶದ ಅಭಿವೃದ್ಧಿಯಲ್ಲಿ ಉನ್ನತ ಕೊಡುಗೆ ನೀಡಿದ್ದಾಳೆ ಎಂದರು.
ದೇಶದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ. ಹೀಗಿದ್ದರೂ ಭ್ರೂಣಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಜನಸಂಖ್ಯೆಯಲ್ಲಿ ಗಂಡುಗಿಂತ ಹೆಣ್ಣಿನ ಸಂಖ್ಯೆ ಕಡಿಮೆಯಾಗಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ವರದಕ್ಷಿಣೆ, ಬಾಲ್ಯವಿವಾಹ, ಲೈಂಗಿಕ ಕಿರುಕುಳಗಳು ಹೆಚ್ಚು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಹೇಳಿದರು.
ಪುರುಷನಕ್ಕಿಂತ ಮಹಿಳೆಯಿಂದಲೇ ಮಹಿಳೆ ಮೇಲೆ ಅನ್ಯಾಯವಾಗುತ್ತಿದೆ. ಮಹಿಳೆಯ ರಕ್ಷಣೆಗೆ ಸಾಕಷ್ಟು ಕಾನೂನುಗಳು ಜಾರಿಗೆ ತಂದಿದ್ದರೂ ಅವುಗಳ ದುರ್ಬಳಕೆ ಆಗುತ್ತಿದೆ. ದುರ್ಬಲ ಮನಸ್ಸು ನಮ್ಮದಾಗದೇ ನಮ್ಮ ಶಕ್ತಿಯನ್ನು ಅರಿತ್ತು ಮುನ್ನಡೆಯಬೇಕು . ಸರ್ಕಾರಗಳು ಸಾಕಷ್ಟು ಯೋಜನೆಗಳು ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ನಿಮ್ಮ ಸಮಸ್ಯೆಗಳಿಗೆ ಕಾನೂನು ಸೇವಾ ಸಮಿತಿ ಸ್ಪಂದಿಸುತ್ತದೆ ಎಂದು ಹೇಳಿದರು.
ಎಎಸ್‍ಐ ಜಾತಪ್ಪ ಮಾತನಾಡಿ, ಮಹಿಳೆಯರಿಗೆ ಕಾನೂನಿನಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. ಹೀಗಿದ್ದರೂ ಅವು ಸಮರ್ಪಕ ಅನುಷ್ಠಾನಕ್ಕೆ ಬರುತ್ತಿಲ್ಲ. ಶಿಕ್ಷಣ, ಮಾಹಿತಿ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ದೂರದರ್ಶನಗಳಲ್ಲಿ ಕಾನೂನು ಬಗ್ಗೆ ಸಾಕಷ್ಟು ಮಾಹಿತಿಗಳು ಪ್ರಸಾರವಾಗುತ್ತಿದ್ದರೂ ಮಹಿಳೆಯರು ಧಾರಾವಾಹಿಗಳಿಗೆ ಅಂಟಿಕೊಂಡಿದ್ದಾರೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಇದ್ಲಿ ರಾಮಪ್ಪ ಮಾತನಾಡಿ, ಸನಾತನ ವಿಚಾರವನ್ನು ಇಟ್ಟುಕೊಂಡು ನಾವು ಹಿಂದಕ್ಕೆ ಹೋಗುತ್ತಿದ್ದೇವೆ. ಸದ್ಯ ದಿನಮಾನಗಳಲ್ಲಿ ಮೆಹಿಳೆಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯಗಳನ್ನು ನಡೆಯುತ್ತಿವೆ. ದೇವಸ್ಥಾನ ಪ್ರವೇಶಿಸಲು ಕೋರ್ಟ್ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಬಂದಿದೆ. ಮಹಿಳೆಯರ ಮಾರಾಟ ಮಾಡುವ ಪ್ರಕರಣಗಳು ನಡೆಯುತ್ತಿವೆ. ಮಹಿಳೆಯರಿಗೆ ಅನ್ಯಾಯವಾದಾಗ ಪೊಲೀಸ್ ಇಲಾಖೆಗಳು ಪ್ರಕರಣ ದಾಖಲಿಸಿ ನ್ಯಾಯ ಒದಗಿಸಬೇಕು ಎಂದರು.
ವಕೀಲ ಎಂ.ಮೃತ್ಯುಂಜಯ ಉಪನ್ಯಾಸ ನೀಡಿ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸ್ಥಳಕ್ಕೂ ಹೋದರೂ ಮಹಿಳೆಯರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ಎಲ್ಲ ರಂಗದಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. 1994ರಲ್ಲಿ ಪ್ರಸವ ಪೂರ್ವ ಲಿಂಗ ಪರೀಕ್ಷೆ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು.
ಭ್ರೂಣಹತ್ಯೆಗೆ ಕಾರಣವಾಗುವ ವೈದ್ಯರ ಮೇಲೆ 5 ವರ್ಷ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದರು.ಕಾಶಿ ಮಠದ ಕಿರಿಯ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸುವರ್ಣ ಆರುಂಡಿ ಮಾತನಾಡಿದರು. ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ಶೋಭಾ, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಗಣೇಶ್ ಮರಾಠೆ, ವಕೀಲರ ಸಂಘದ ಉಪಾಧ್ಯಕ್ಷೆ ಜೆ.ಸೀಮಾ, ಮಹಿಳಾ ಸಮಾಲೋಚಕರಾದ ಲೀಲಾ ಲಿಂಗರಾಜ, ವಕೀಲರಾದ ಸಿದ್ದೇಶ್, ಕೆ.ಬಸವರಾಜ, ಸಮನ್ವಯಾಧಿಕಾರಿ ಉಮಾ, ನಿವೃತ್ತ ಶಿಕ್ಷಕ ಹಾಲಪ್ಪ, ಶೇಖರಗೌಡ ಪಾಟೀಲ್ ಇತರರಿದ್ದರು.