ಬೆಂಗಳೂರು
ಮನೆಗಳವು ಸುಲಿಗೆ ಮಾಡಿದ ಚಿನ್ನ ಬೆಳ್ಳಿ ಆಭರಣಗಳನ್ನು ಯಂತ್ರದಿಂದ ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಅಂತರ್‌ರಾಜ್ಯ ಸುಲಿಗೆಕೋರ ಹಾಗೂ ಆತನ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಸಿಸಿಬಿ ಪೊಲೀಸರು 52 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಆರ್ ಪುರಂನ ದೇವಸಂದ್ರದ ಅಂತರ್‌ರಾಜ್ಯ ಸುಲಿಗೆಕೋರ ಸಮ್ಮು ಅಲಿಯಾಸ್ ಬಶೀರ್ (35) ಹಾಗೂ ಆತನ ಸಹಚರ ಬೆನ್ಸನ್‌ಟೌನ್‌ನ ಸಾಜಿದ್ ಆಲಿಬೇಗ್ (35)ನನ್ನು ಬಂಧಿಸಿ, 1 ಪಿಸ್ತೂಲು, 7 ರೌಂಡ್ಸ್, 1032 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ, ಆಲ್ಟೊ ಕಾರು ಸೇರಿ 52 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸಮ್ಮು, ವಿದ್ಯಾರಣ್ಯಪುರದ ಬಳಿ ಕಳವು ಮಾಡಿದ್ದ ಕಾರಿನಲ್ಲಿ ಸುಲಿಗೆ ಮಾಡಲು ಹೋಗುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರ ತಂಡ ಬಂಧಿಸಿ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನ ಬೆಳ್ಳಿ ಆಭರಣಗಳನ್ನು ಕರಗಿಸಿ ಮಾರಾಟ ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿಗಳು ಕಳವು ಮಾಡಿದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಿದರೆ, ಪೊಲೀಸರಿಗೆ ಸಿಕ್ಕಿ ಬೀಳುವ ಕಾರಣಕ್ಕಾಗಿ ಮನೆಯಲ್ಲಿಯೇ ಆಭರಣ ಕರಗಿಸುವ ಯಂತ್ರವನ್ನು ತಂದಿಟ್ಟುಕೊಂಡಿದ್ದರು. ಅಲ್ಲದೆ. ಆಭರಣಗಳನ್ನು ತೂಕ ಮಾಡುವ ಸೂಕ್ಷ್ಮ ಯಂತ್ರಗಳು ಆರೋಪಿಗಳ ಬಳಿ ದೊರೆತಿವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳವು ಮಾಡಿದ ಚಿನ್ನ-ಬೆಳ್ಳಿ ಆಭರಣಗಳನ್ನು ಮನೆಯಲ್ಲಿಯೇ ಕರಗಿಸಿ ಗಟ್ಟಿ ಮಾಡಿ ಅವುಗಳನ್ನು ಆರೋಪಿ ಸಮ್ಮು, ತನ್ನ ಸಹಚರನಾದ ಸಾಜಿದ್ ಅಲಿ ಬೇಗ್ ಮುಖಾಂತರ ವಿಲೇವಾರಿ ಮಾಡುತ್ತಿದ್ದ. ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ 3, ಅಮೃತಹಳ್ಳಿ-ಹೆಣ್ಣೂರು ತಲಾ 2, ಸಂಪಿಗೆ ಹಳ್ಳಿ, ಬಾಗಲೂರು, ಕಾಡುಗೋಡಿ, ಬ್ಯಾಟರಾಯನಪುರ ತಲಾ 1 ಸೇರಿ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮೋಜಿನ ಜೀವನ
ಆರೋಪಿ ಸಮ್ಮು ಬಿಹಾರದಿಂದ ಪಿಸ್ತೂಲ್ ಹಾಗೂ ರೌಂಡ್ಸ್‌ಗಳನ್ನು ಖರೀದಿಸಿ ತೆಗೆದುಕೊಂಡು ಬಂದು ಕಳವು ಮಾಡಿದ ಆಲ್ಟೊ ಕಾರಿನಲ್ಲಿ ಸಂಚರಿಸುತ್ತ ಒಂಟಿಯಾಗಿ ಓಡಾಡುವವರು ಹಾಗೂ ವಾಹನ ಸವಾರರನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನ-ಬೆಳ್ಳಿ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ.
ಅಲ್ಲದೆ, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಆರೋಪಿಯು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿ ಮೋಜಿನ ಜೀವನ ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಭಾಸ್ಕರ್‌ರಾವ್ ತಿಳಿಸಿದರು.
30 ಪ್ರಕರಣ ಪತ್ತೆ
ಸಿಸಿಬಿ ಪೊಲೀಸರಿಗೂ ಸಿಕ್ಕಿ ಬೀಳುವ ಮುನ್ನ 30ಕ್ಕೂ ಹೆಚ್ಚು ಮನೆಗಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಸಮ್ಮು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು, ಮತ್ತೆ ಹಳೇ ಛಾಳಿಗಿಳಿದಿದ್ದ. ಆರೋಪಿ ನಡೆಸಿದ್ದ 300 ಕಳ್ಳತನದ ವಿಚಾರಣೆ ಕೂಡ ಇನ್ನೂ ಕೋರ್ಟಿನಲ್ಲಿ ಆರಂಭವಾಗಿರಲಿಲ್ಲ. ಇದರಿಂದಾಗಿ ಆತನಿಗಾಗಿ ಮತ್ತೆ ಕಳ್ಳತನ ಕೃತ್ಯ ನಡೆಸುವುದು ಸುಲಭವಾಗಿತ್ತು ಎಂದು ಭಾಸ್ಕರ್‌ರಾವ್ ತಿಳಿಸಿದರು.
ಆರೋಪಿಯು ಪಿಸ್ತೂಲ್ ತೋರಿಸಿ ಜೀವಬೆದರಿಕೆ ಹಾಕಿ ಬಹುತೇಕ ಸುಲಿಗೆ-ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು, ಸಾಕಷ್ಟು ಶ್ರಮವಹಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು. ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
