ಬಳ್ಳಾರಿ:
ಜಿಲ್ಲೆಯ ಸಂಡೂರು ತಾಲೂಕು ವಡ್ಡು ಗ್ರಾಮದಲ್ಲಿ ಆರುವರ್ಷದ ಬಾಲಕಿಯ ನಿಗೂಢ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿವೆ. ಗ್ರಾಮದ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ವಲಸಿಗರ ಮೇಲೆ ಹೆಚ್ಚಿನ ನಿಗಾವಹಿಸಿ ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಅಮಾನವೀಯ ಕೃತ್ಯ. ಸೆ.8 ರಂದು ಕಾಣೆಯಾಗಿದ್ದ ಆ ಬಾಲಕಿ ಸೆ.9 ರಂದು ಬೆಳಗ್ಗೆ ಶವವಾಗಿ ಗೋಣಿ ಚೀಲದಲ್ಲಿ ಪತ್ತೆಯಾಗುತ್ತಾಳೆ ಅಂದರೆ ಇದು ಹೇಯಕರವಾದ ಕೃತ್ಯವಾಗಿದ್ದು, ಮಾನವೀಯ ಮೌಲ್ಯಗಳನ್ನು ಮರೆಮಾಚುವಂತಹದ್ದಾಗಿದೆ. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷನಾಗಿದ್ದ ನಾನು 6 ಸಾವಿರ ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ.
ಅದರಲ್ಲಿ ಘಟನೆಯಿಂದ ನೊಂದ ಕುಟುಂಬಕ್ಕೆ ತಕ್ಷಣ ಸಹಾಯ ಮಾಡಬೇಕು ಎಂದು ಇದೆ. ಆದರೆ ಈ ಪ್ರಕರಣದಲ್ಲಿ ಈ ವರಗೆ ಜಿಲ್ಲಾಡಳಿತ ಒಂದು ಪೈಸೆ ಸಹ ಕೊಟ್ಟಿಲ್ಲ. ಮೃತ ಬಾಲಕಿಯ ಅಂತ್ಯ ಸಂಸ್ಕಾರಕ್ಕೆಂದು 20 ಸಾವಿರ ರೂ.ಗಳ ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದ್ದರೂ ಈವರೆಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮುಂದಾಗಿಲ್ಲ. ಆ ಕುರಿತು ಮಾಹಿತಿಯೇ ಇಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳು ಹೇಳುತ್ತಿರೋದು ಅಶ್ಚರ್ಯಕರ ಸಂಗತಿ ಎಂದಿದ್ದಾರೆ.
ನೆರೆಹೊರೆಯ ರಾಜ್ಯದ ನೂರಾರು ಕಾರ್ಮಿಕರು ಇಲ್ಲಿ ಬಂದು ನೆಲೆಸಿ, ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ನಿಗಾ ಇರಿಸಬೇಕು. ಹಾಗೂ ಯಾವುದಾದ್ರೂ ಇಂತಹ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿದ್ದು ಸಾಬೀತು ಆದಲ್ಲಿ, ಆ ಕಾರ್ಖಾನೆಯ ಮಾಲೀಕರನ್ನೂ ಕೂಡ ನೇರ ಹೊಣೆ ಗಾರಿಕೆಯನ್ನಾಗಿಸಬೇಕೆಂದು ಕಾಯಿದೆಯಲ್ಲಿದೆ. ಈ ಕುರಿತು ಜಿಲ್ಲಾಧಿಕಾರಿ ನಕುಲ್ ಅವರ ಗಮನ ಸೆಳೆದಿರುವೆ.
ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ 3 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರದ 8.25 ಲಕ್ಷ ರೂ.ಗಳ ಪರಿಹಾರವನ್ನು ಸಂತ್ರಸ್ಥೆ ಬಾಲಕಿಯ ಕುಟುಂಬಸ್ಥರಿಗೆ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಬಿಜೆಪಿ ಸರ್ಕಾರದ ಆಡಳಿತದ ಹಳಿ ತಪ್ಪಿದೆ. ಒಂದೆಡೆ ಪ್ರವಾಹ, ಮತ್ತೊಂದಡೆ ಬರ ಆವರಿಸಿದೆ. ಪ್ರವಾಹದಿಂದ ಲಕ್ಷಾಂತರ ಕೋಟಿ ರೂ.ಗಳ ನಷ್ಟವಾಗಿದೆ. ಆದರೆ ರಾಜ್ಯ ಸರ್ಕಾರ ಈವರೆಗೆ ಕೇವಲ 374 ಕೋಟಿ ರೂ. ಬಿಡುಗಡೆ ಮಾಡಿದೆ. 7.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 2 ಲಕ್ಷಕ್ಕೂ ಅಧಿಕ ಮನೆಗಳು ಬಿದ್ದಿವೆ.
ಒಟ್ಟಾರೆಯಾಗಿ 38,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ಆದರೆ 3800 ಕೋಟಿ ರೂ. ಮಾತ್ರ ಕೇಂದ್ರಕ್ಕೆ ಪರಿಹಾರ ಕೇಳಿರುವುದು ತಿಳಿಯದಂತಾಗಿದೆ. ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ್ದರೂ ಪ್ರವಾಹ ಪೀಡಿತ ಬಗ್ಗೆ ಕಾಳಜಿವಹಿಸಲಿಲ್ಲ. ಕೇಂದ್ರದ ಮಂತ್ರಿಗಳು ರಾಜ್ಯಕ್ಕೆ ಪಿಕ್‍ನಿಕ್ ಥರ ಬಂದು ಹೋಗಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಬದ್ಧತೆ ಬಿಜೆಪಿಗೆ ಇಲ್ಲದಂತಾಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ, ಮಂತ್ರಿ ಸ್ಥಾನಗಳು ವ್ಯಾಪಾರಕ್ಕಿವೆ ಎಂದು ಆ ಪಕ್ಷದವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಸ್ತಿ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರದ ಐಟಿ, ಇಡಿ ಅಧಿಕಾರಿಗಳಿಗೆ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಗಡ್ಕರಿಪುತ್ರರ ಆದಾಯ ಹೆಚ್ಚಾಗಿರುವ ಬಗ್ಗೆ ಗೊತ್ತಿಲ್ಲವೇ. ರಾಜಕೀಯ ಸೇಡಿನಿಂದ ಡಿ.ಕೆ.ಶಿವಕುಮಾರ್ ಮೇಲೆ ಮುಗಿಬಿದ್ದಿದ್ದಾರೆ ಎಂದು ಆರೋಪಿಸಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಮಾನ್ ಸಂವಿಧಾನಿಕವಾದ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸುತ್ತೇವೆಂದು ಸಂಸತ್ ನಲ್ಲಿ ಹೇಳಿದ್ದರು. ಆದರೆ ಅದನ್ನು ಮಾಡದೆ ಮತ್ತೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸುತ್ತಿದ್ದಾರೆ. ಒಂದು ಸಂವಿಧಾನ, ಒಂದು ದೇಶ, ಒಂದೇ ರೀತಿಯ ಕಾನೂನು ಎನ್ನುವ ಇವರು ಒಂದೇ ಭಾಷೆ ಎನ್ನುವಂತೆ ಕಾಣುತ್ತಿದೆ. ದೇಶದ ವಿವಿಧತೆ ಬಗ್ಗೆ ಇವರಿಗೆ ಅರಿವಿಲ್ಲವೇ ಎಂದರು. ಪ್ರಾದೇಶಿಕ ಮತ್ತು ರಾಷ್ಟ್ರೀಯ ಬ್ಯಾಂಕ್‍ಗಳ ಪರೀಕ್ಷೆ ಪ್ರಾಂತೀಯ ಭಾಷೆಯಲ್ಲಿ ನಡೆಸಬೇಕು. ಅದಕ್ಕಾಗಿ ಕನ್ನಡ ಪರ ಸಂಘಟನೆಗಳ ಹೋರಾಟ ಅಗತ್ಯವಿದೆ ಎಂದರು.
