ವ್ಯರ್ಥವಾಯಿತೇ ಸ್ಮಾರ್ಟ್ ಸಿಟಿಯ ಇ ಟಾಯ್ಲೆಟ್..!

ತುಮಕೂರು
ವಿಶೇಷ ವರದಿ:ರಾಕೇಶ್.ವಿ
      ತುಮಕೂರು ನಗರವು ಸ್ಮಾರ್ಟ್ ಸಿಟಿಯಾಗುತ್ತಿದ್ದು, ಪೈಲೆಟ್ ಯೋಜನೆಯಾಗಿ ಇ ಟಾಯ್ಲೆಟ್ ಅಳವಡಿಕೆ ಮಾಡಿದ್ದು, ಪ್ರಾರಂಭದಲ್ಲಿ ಉತ್ತಮ ಯೋಜನೆ ಎಂದು ಪ್ರಶಂಸೆ ವ್ಯಕ್ತವಾಗಿದ್ದರೂ ಬರುಬರುತ್ತಾ ಅದು ವ್ಯರ್ಥವಾಗತೊಡಗಿತು. ಕೊನೆಗೆ ಬಳಕೆಗೆ ಬಾರದೆ ಕಳಪೆಯಾಗಿ ನಿಂತಿದೆ.
      ಹೌದು ಸ್ಮಾರ್ಟ್ ಸಿಟಿಯ ಯೋಜನೆಗಳಲ್ಲಿ ಒಂದಾದ ಇ-ಟಾಯ್ಲೆಟ್ ( ಎಲೆಕ್ಟ್ರಾನಿಕ್ ಶೌಚಾಲಯ ) ಪ್ರಾಯೋಗಿಕವಾಗಿ ಮೊದಲು ಬಾಲಗಂಗಾಧರ ನಾಥ ಸ್ವಾಮೀಜಿ ವೃತ್ತದಲ್ಲಿ ಸಿದ್ದಗಂಗಾ ಮಹಿಳಾ ಕಾಲೇಜಿನ ಮುಂಭಾಗದಲ್ಲಿ ಎರಡನ್ನು ನಿರ್ಮಾಣ ಮಾಡಲಾಯಿತು. ಇಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಎಂದು ಎರಡು ಘಟಕಗಳನ್ನು ಅಳವಡಿಸಲಾಯಿತು.
       ಒಂದು ಯೂನಿಟ್‍ಗೆ 6 ಲಕ್ಷದಂತೆ ಎರಡೂ ಯೂನಿಟ್‍ಗಳಿಗೆ ಒಟ್ಟು 12.43 ಲಕ್ಷ ವೆಚ್ಚದಲ್ಲಿ ಒಂದೂವರೆ ವರ್ಷಗಳವರೆಗೆ ನಿರ್ವಹಣೆ ಸೇರಿಕೊಂಡಂತೆ ಈರಮ್ ಸೈಂಟಿಫಿಕ್ ಸೊಲ್ಯೂಷನ್ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿತ್ತು. ಕಳೆದ ವರ್ಷ ಮಾರ್ಚ್ 03ರಂದು ಈ ಎರಡು ಯೂನಿಟ್‍ಗಳನ್ನು ಅಳವಡಿಸಲಾಗಿತ್ತು. ಅಂದಿನಿಂದ ಒಂದು ವರ್ಷ ಆರು ತಿಂಗಳು ಕಾಲ ಇದರ ನಿರ್ವಹಣೆ ನಡೆದಿದೆ. ಈ ವೇಳೆಯಲ್ಲೂ ಹೆಚ್ಚು ಬಳಕೆ ಮಾಡದೆ ಕಳಪೆಯಾಗಿರುವುದಾಗಿ ಹಲವು ಆರೋಪಗಳು ಕೇಳಿ ಬಂದಿವೆ.
        ಇ-ಶೌಚಾಲಯಗಳಲ್ಲಿ ಸ್ವಯಂಚಾಲಿತ ನೀರು ಬಳಕೆ, ಮಹಿಳೆಯರಿಗಾಗಿ ಸ್ಯಾನಿಟರಿ ನ್ಯಾಪ್ಕಿನ್ಸ್ ಅಳವಡಿಸಲಾಗಿದೆ. ಜೊತೆಗೆ ಇದಕ್ಕೆ ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ಸೌಲಭ್ಯ ನೀಡಲಾಗಿದ್ದು, ಇದನ್ನು ಬಳಕೆ ಮಾಡಲು 1,2, ಅಥವಾ 5 ರೂಗಳ ಕಾಯಿನ್ ಬಳಕೆ ಮಾಡಬಹುದಾಗಿತ್ತು. ಆದರೆ ಕೆಲವು ತಿಂಗಳುಗಳಿಂದ ವಿದ್ಯುತ್ ಸೌಲಭ್ಯ ಬಂದ್ ಆಗಿತ್ತು. ಇದರಿಂದ ಯಾರು ಇದರ ಬಳಿ ಸುಳಿಯದಂತೆ ಆಯಿತು.
        ಟೌನ್‍ಹಾಲ್‍ನಲ್ಲಿ ಸುಲಭ ಶೌಚಾಲಯವಿದ್ದರೂ ಕೇವಲ 100 ಮೀಟರ್ ಅಂತರದಲ್ಲೇ ಸ್ವಯಂಚಾಲಿತ ಎಲೆಕ್ಟ್ರಾನಿಕ್ ಶೌಚಾಲಯಗಳನ್ನು ಅಳವಡಿಸಿರುವುದು ಅನವಶ್ಯಕ ಎಂದೇ ಹೇಳುತ್ತಾರೆ ಕೆಲ ಪಾದಾಚಾರಿಗಳು. ಟೌನ್‍ಹಾಲ್‍ನಲ್ಲಿಯೇ ಸುಲಭ ಶೌಚಾಲಯವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸ್ವಚ್ಛತೆ ಮಾಡಲು ನೌಕರರು ಇರುತ್ತಾರೆ. ಜೊತೆಗೆ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿರುತ್ತಾರೆ. ಆದರೂ ಅದನ್ನು ಹೊರತು ಪಡಿಸಿ ಕಾಲೇಜು ಗೇಟಿನ ಪಕ್ಕದಲ್ಲಿ ಶೌಚಾಲಯಗಳನ್ನಿಡುವ ಅವಶ್ಯಕತೆಯಿಲ್ಲ. ಸ್ಮಾರ್ಟ್ ಮಾಡುವ ನೆಪದಲ್ಲಿ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಕೆಲಸಕ್ಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಿಂತಿದ್ದಾರೆ ಎಂದು ಪಾದಾಚಾರಿಗಳು ಸೇರಿದಂತೆ ಕೆಲವು ಬುದ್ದಿಜೀವಿಗಳು ಕೂಡ ಆರೋಪಿಸುತ್ತಿದ್ದಾರೆ.
ಪಾಲಿಕೆಯಲ್ಲಿನ ಇ-ಶೌಚಾಲಯ ವ್ಯರ್ಥ
        ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇ ಶೌಚಾಲಯ ಮಾಡುವುದಕ್ಕೂ ಮೊದಲೇ ಮಹಾನಗರ ಪಾಲಿಕೆ ಆವರಣದಲ್ಲಿ ಒಂದು ಇ-ಶೌಚಾಲಯವನ್ನು ಅಳವಡಿಸಲಾಗಿತ್ತು. ಅದನ್ನು ಬಳಸುವ ರೀತಿ ಯಾರಿಗೂ ತಿಳಿದಿರಲಿಲ್ಲ. ಬದಲಿಗೆ ಅದು ವಿದ್ಯುತ್ ಪ್ರಸರಣದಿಂದ ಸ್ವಯಂ ಚಾಲಿತವಾಗಿ ಕೆಲಸ ನಿರ್ವಹಿಸುವುದರಿಂದ ಶೌಚಾಲಯದೊಳಗೆ ಹೋದಾಗ ಅದರ ಬಾಗಿಲು ಮುಚ್ಚಿಕೊಂಡರೆ ಹೇಗೆ..? ಅದರಿಂದ ಏನಾದರೂ ಸಮಸ್ಯೆ ಉಂಟಾಗಬಹುದೇ ಎಂಬ ಹಲವು ಗೊಂದಲಗಳು ಉಂಟಾಗಿದ್ದವು. ಇದರಿಂದ ಅದು ಬಳಕೆ ಬಾರದೆ ವ್ಯರ್ಥವಾಗಿತ್ತು.
          ಪಾಲಿಕೆಯಲ್ಲಿ ಅಳವಡಿಸಲಾದ ಇ ಶೌಚಾಲಯ ವ್ಯರ್ಥವಾಗಿರುವುದನ್ನು ಗಮನಿಸಿದರೂ ಸ್ಮಾರ್ಟ್ ಸಿಟಿಯಿಂದ 12.43 ಲಕ್ಷ ವೆಚ್ಚ ಮಾಡಿ ಸಿದ್ದಗಂಗಾ ಕಾಲೇಜು ಪಕ್ಕದಲ್ಲಿ ಅಳವಡಿಸುವ ಅವಶ್ಯಕವದರೂ ಏನಿತ್ತು.? ಹೆಚ್ಚಿನ ಜನಸಂಖ್ಯೆ ಇರುವ ಕಡೆಗಳಲ್ಲಿ ಇ-ಶೌಚಾಲಯ ಮಾಡಿದರೆ ಅದನ್ನು ಬಳಕೆ ಮಾಡುವವರ ಸಂಖ್ಯೆ ಅಷ್ಟಕ್ಕಷ್ಟೇ ಇತ್ತು. ಹಾಗಿದ್ದಾಗ ಮತ್ತೆ ಹೊಸದಾಗಿ ಅಳವಡಿಸುವುದು ಅವಶ್ಯಕತೆ ಇರಲಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ.
        ಇದ್ದವುಗಳನ್ನು ಸರಿ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ. ಇಲ್ಲವಾದಲ್ಲಿ ಅವುಗಳನ್ನು ತೆರವುಗೊಳಿಸಿ ಸುಲಭ ಶೌಚಾಲಯಗಳನ್ನು ಬಳಸುವಂತೆ ಅರಿವು ಮೂಡಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link