ತೆಂಗು ಪ್ರದೇಶದ ಶಾಸಕರು ಅಧಿವೇಶನದಲ್ಲಿ ನೀರಾ ಬಗ್ಗೆ ಧ್ವನಿ ಎತ್ತಲಿ

0
17

ಹುಳಿಯಾರು:

       ಸರ್ಕಾರ ನೀರಾ ಇಳಿಕೆಗೆ ಅನುಮತಿ ನೀಡಿದ್ದರೂ ಸಹ ಅದರಲ್ಲಿನ ನಿಯಮಗಳು ರೈತ ವಿರೋಧಿಯಾಗಿದ್ದು ಮಲ್ಟಿ ನ್ಯಾಷನಲ್ ಕಂಪನಿಗಳ ಪರವಾಗಿವೆ. ಹಾಗಾಗಿ ತೆಂಗು ಬೆಳೆಯುವ ಪ್ರದೇಶದ ಶಾಸಕರು ಈ ಬಗ್ಗೆ ಬರುವ ಅಧಿವೇಶನದಲ್ಲಿ ಧ್ವನಿಯಾಗಬೇಕಿದೆ. ತೆಂಗು ಬೆಳೆಗಾರರೂ ಹಾಗೂ ರೈತ ಸಂಘಟನೆಗಳು ಶಾಸಕರ ಬಳಿ ನಿಯೋಗ ತೆರಳಿ ಈ ಬಗ್ಗೆ ಒತ್ತಡ ಏರುವ ಅಗತ್ಯವಿದೆ ಎಂದು ಕೃಷಿ ಕವಿ ಬಿಳಿಗೆರೆ ಕೃಷ್ಣಮೂರ್ತಿ ಅವರು ಹೇಳಿದರು.

       ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹೊಸಹಳ್ಳಿ ಚಂದ್ರಣ್ಣ ಬಣ) ವತಿಯಿಂದ ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿಯಲ್ಲಿರುವ ಸೋಮಜ್ಜನಪಾಳ್ಯದ ಧನಂಜಯ್ಯ ಅವರ ತೋಟದಲ್ಲಿ ಶನಿವಾರ ಏರ್ಪಡಿಸಿದ್ದ ನೀರಾ ಕುರಿತು ರೈತರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

        ರೈತರೆನ್ನಿಸಿಕೊಂಡಿರುವವರು ದಿನ ನಿತ್ಯದ ಅಡಿಗೆಗಾಗಿ ಸಂತೆಗೆ ಹೋಗಿ ತರಕಾರಿ, ಸೊಪ್ಪು ತರುವುದು ಅವಮಾನಕರ ಸಂಗತಿ. ತಮ್ಮ ಸಂಸಾರ ನಿರ್ವಹಣೆಗೆ ಬೇಕಿರುವ ಟೊಮೋಟೊ, ಕರಿಬೇವು, ಕೊತ್ತಂಭರಿ ಸೊಪ್ಪು, ನಿಂಬೆಹಣ್ಣು, ಪಪ್ಪಾಯಿ ಬೆಳೆದುಕೊಳ್ಳುವಷ್ಟು ಇಂದು ರೈತರು ಸೋಮಾರಿಗಳಾಗಿದ್ದಾರೆ. ಹಾಗಾಗಿ ರೈತ ಮತ್ತು ಆತನ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ಬಗ್ಗೆ ಎಚ್ಚರಗೊಂಡು ಕೈ ತೋಟ ಮಾಡುವ ಜೊತೆಗೆ ಕುಟುಂಬ ಬಜೆಟ್ ಮಾಡಿಕೊಂಡು ಅದರಂತೆ ಸಂಸಾರ ನಡೆಸುವ ಬುದ್ದಿವಂತಿಗೆ ಪ್ರದರ್ಶಿಸಬೇಕಿದೆ ಎಂದು ಕಿವಿ ಮಾತು ಹೇಳಿದರು.

        ಸಹಜ ಬೇಸಾಯಗಾರ ರಾಮಕೃಷ್ಣಪ್ಪ ಅವರು ಮಾತನಾಡಿ ನೀರಾ ನೈಸರ್ಗಿಕ ಉತ್ಪನ್ನವಾಗಿದ್ದು ಆರೋಗ್ಯವರ್ದಕವಾಗಿದೆ. ಆದರೆ ಸರ್ಕಾರ ಅಬಕಾರಿ ಲಾಬಿಗೆ ಮಣಿದು ನೀರಾ ಇಳಿಕೆಗೆ ರೈತ ಪರ ನೀತಿ ಜಾರಿ ಮಾಡದಿರುವುದು ಖಂಡನಾರ್ಹವಾಗಿದೆ. ಇದಕ್ಕೆ ರೈತ ಸಂಘಟನೆಗಳಲ್ಲಿರುವ ಭಿನ್ನಾಭಿಪ್ರಾಯ, ಭಿನ್ನಮತ, ಒಡಕು ಮುಖ್ಯ ಕಾರಣವಾಗಿದೆ. ರೈತ ನಾಯಕರು ಎಷ್ಟಾದರೂ ಬಣಗಳನ್ನು ಮಾಡಿಕೊಳ್ಳಲಿ. ಆದರೆ ಅನ್ನದಾತ ತೊಂದರೆಗೆ ಸಿಲುಕಿದಾಗ ಬಣಗಳನ್ನು ಬದಿಗಿಟ್ಟು ಒಗ್ಗೂಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನೀರಾ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಪಡೆಯುವ ನಿಟ್ಟಿನಲ್ಲಿ ರೈತ ಸಂಘಟನೆಗಳು ಒಗ್ಗಟ್ಟಾಗಿ ಸರ್ಕಾರಕ್ಕೆ ಎಚ್ಚರಿಸುವ ಅಗತ್ಯವಿದೆ ಎಂದರು.

         ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಅವರು ಮಾತನಾಡಿ ಪ್ರೊ.ನಂಜುಡಸ್ವಾಮಿ ಅವರ ಕಾಲದಿಂದಲೂ ನೀರಾ ಇಳಿಕೆಗೆ ಅನುಮತಿ ಕೊಡುವಂತೆ ರೈತರು ಹೋರಾಡುತ್ತಿದ್ದರೂ ಮೂಗಿಗೆ ತುಪ್ಪ ಸವರಿದಂತೆ ಸರ್ಕಾರಗಳು ನೀರಾ ನಿಲುವು ತೆಗೆದುಕೊಳ್ಳುತ್ತಿವೆ. ಹಾಗಾಗಿಯೇ ರೈತರು ತಮ್ಮ ತೋಟದಲ್ಲಿ ನೀರಾ ಇಳಿಸಿ ನಿರ್ಭಯವಾಗಿ ಮಾರುವ ಸ್ವಾತಂತ್ರ್ಯ ಇಲ್ಲದಾಗಿದೆ. ಸರ್ಕಾರ ಇನ್ನಾದರೂ ಈ ಮಲತಾಯಿ ಧೋರಣೆ ಬಿಟ್ಟು ಹಾಲಿನ ಡೇರಿಗಳ ರೀತಿ ನೀರಾ ಡೇರಿಗಳನ್ನು ಮಾಡಿ ರೈತರಿಂದ ನೀರಾ ಸಂಗ್ರಹಿಸಿ ಮೌಲ್ಯವರ್ದಿತ ಉತ್ಪನ್ನಗಳಾಗಿ ಪರಿವರ್ತಿಸಿ ಮಾರಾಟ ಮಾಡಬೇಕಿದೆ. ಇಲ್ಲವಾದರೆ ವಿಧಾನಸೌಧ ಮುತ್ತಿಗೆಗೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

         ರೈತ ಸಂಘದ ಜಿಲ್ಲಾಧ್ಯಕ್ಷ ಈಶ್ವರಪ್ಪ, ತಾಲೂಕು ಅಧ್ಯಕ್ಷ ಬೀರಪ್ಪ, ನಂದಿಹಳ್ಳಿ ಹಾಲಿನ ಡೇರಿ ಅಧ್ಯಕ್ಷ ಎನ್.ಜಿ.ಶಿವಣ್ಣ, ಮಾತಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ಜಯಕರ್ನಾಟಕದ ಮೋಹನ್ ಕುಮಾರ್ ರೈ, ನಿವೃತ್ತ ಉಪನ್ಯಾಸಕ ಸಿದ್ದಬಸಪ್ಪ, ಕೃಷಿ ಶಿಕ್ಷಕ ಬೈರಪ್ಪ, ಬೆಸ್ಕಾಂ ಎಸ್‍ಓ ಉಮೇಶ್ ನಾಯ್ಕ, ಸಂಗೀತ ಶಿಕ್ಷಕ ಶಂಕರ್, ನೀರಾಈರಣ್ಣ, ಸಮಾಜ ಸೇವಕ ಕೆ.ಎನ್.ಉಮೇಶ್, ಚಿದಾನಂದ್, ರೈತ ಸಂಘದ ಜಯಕ್ಕ, ಕರಿಯಪ್ಪ, ನಾಗಪ್ಪ, ಎನ್.ಪಿ.ಜಯಣ್ಣ, ಚನ್ನಪ್ಪ, ಎಚ್.ಎಸ್.ಜಯಣ್ಣ, ರಾಮಲಿಂಗಯ್ಯ, ಬಾಲರಾಜು ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here