ತುಮಕೂರು
ಸ್ಮಾರ್ಟ್ ಸಿಟಿ ಕಾಮಗಾರಿಗಳೆಂದರೆ ಅಸಹ್ಯ ಹುಟ್ಟಿಸುವ ಅಸಮರ್ಪಕ ಕಾಮಗಾರಿಗಳೆಂದೆ ನಗರದಲ್ಲಿ ಜನಜನಿತವಾಗಿದೆ. ಗೊತ್ತುಗುರಿಯಿಲ್ಲದೆ ನಡೆಯುತ್ತಿರುವ ಈ ಕಾಮಗಾರಿಗಳು ಎಲ್ಲಿಗೆ ಬಂದು ನಿಲ್ಲುತ್ತವೆಯೊ ತಿಳಿಯದು. ಈ ಕಾಮಗಾರಿಗಳ ವಿರುದ್ಧ ಆಕ್ರೋಶ ಹೆಚ್ಚಿದಂತೆ ಈಗಷ್ಟೆ ಎಚ್ಚೆತ್ತುಕೊಳ್ಳುತ್ತಿರುವ ಸ್ಮಾರ್ಟ್ಸಿಟಿ ಅಧಿಕಾರಿಗಳು ಆಕ್ರೋಶ ತಣ್ಣಗಾಗಿಸಲು ಕೆಲವೊಂದು ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.
ಇದರ ಪರಿಣಾಮ ಎಂಬಂತೆ ಸ್ಮಾಟ್ಸಿಟಿ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕಾಗಿ ಮೌಲ್ಯಮಾಪನ ಹಾಗೂ ಯೋಜನಾ ತಂಡವೊಂದನ್ನು ರಚಿಸಲಾಗಿದೆ. ಸ್ಮಾಟ್ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ.ಶಾಲಿನಿ ರಜನೀಶ್ ಅವರು ಬಿಡುಗಡೆ ಮಾಡಿರುವ ಈ ಆದೇಶ ಹಲವು ಗೊಂದಲಗಳನ್ನೂ ಸೃಷ್ಟಿ ಮಾಡಿದೆ.
ಕಾಮಗಾರಿಗಳ ಬಗ್ಗೆ ನಿಗಾವಹಿಸಲು ಈಗಾಗಲೆ ಹಲವು ಸಮಿತಿಗಳು ಅಸ್ತಿತ್ವದಲ್ಲಿವೆ. ಸ್ಮಾರ್ಟ್ಸಿಟಿ ಕಂಪನಿ ಅಡಿಯಲ್ಲಿ ಆಡಳಿತ ಮಂಡಳಿ, ಸಲಹಾ ಸಮಿತಿ ಇದೆ. ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ನಿಗಾ ವಹಿಸಲು ಪಿಎಂಸಿ (ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಅಂಡ್ ಮಾನಿಟರಿಂಗ್ ಕಮಿಟಿ) ಸಂಸ್ಥೆ ಅಸ್ತಿತ್ವದಲ್ಲಿದೆ. ಇದರ ಜೊತೆಗೆ ಅಭಿಯಂತರರ ತಂಡಗಳು ಇವೆ. ಇಷ್ಟೆಲ್ಲ ಇದ್ದೂ ಕಾಮಗಾರಿಗಳ ಸಮರ್ಪಕ ನಿರ್ವಹಣೆ ಇಲ್ಲವೆಂದಾದರೆ ಇದಕ್ಕಿಂತ ಅವಮಾನಕರ ಸಂಗತಿ ಮತ್ತೊಂದಿದೆಯೇ? ಇರುವ ತಂಡ, ಸಮಿತಿಯ ಜೊತೆಗೆ ಮತ್ತೊಂದು ಮೇಲ್ವಿಚಾರಣಾ ಸಮಿತಿ ಬೇಕಿತ್ತೆ? ಮೌಲ್ಯಮಾಪನ ತಂಡ ರಚಿಸುವ ಅಗತ್ಯವಿತ್ತೆ?
ಹಾಗಾದರೆ ಈಗಾಗಲೆ ರಚನೆಗೊಂಡಿರುವ ಸಮಿತಿಗಳು, ತಂಡಗಳು ನಿಷ್ಪ್ರಯೋಜಕವಾದವೆ? ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ, ಅಸಮಾಧಾನದ ಬಗ್ಗೆ ದೂರುಗಳು ಬರುತ್ತಿವೆ ಎಂಬ ಕಾರಣಗಳನ್ನು ಈ ಮೇಲ್ವಿಚಾರಣಾ ಸಮಿತಿ ರಚನೆಯ ಹಿನ್ನೆಲೆಯ ಬಗ್ಗೆ ನೀಡಲಾಗಿದೆ. ಈ ಕಾರಣಗಳನ್ನು ಗಮನಿಸಿದರೆ ಸ್ಮಾರ್ಟ್ಸಿಟಿ ಲಿಮಿಟೆಡ್ನ ಅಧ್ಯಕ್ಷರೆ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಮರ್ಪಕವಾಗಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ.
ಈಗಾಗಲೆ ಸಾರ್ವಜನಿಕ ವಲಯದಲ್ಲಿ ಉಂಟಾಗಿರುವ ಅಸಹನೆಯನ್ನು ತಣ್ಣಗಾಗಿಸಲು ನಾಮಕಾವಸ್ಥೆಗೆ ಈ ಮೌಲ್ಯಮಾಪನ ತಂಡ ರಚಿಸಿ ಕೈತೊಳೆದುಕೊಂಡುಬಿಟ್ಟರೆ?ಮೌಲ್ಯಮಾಪನ ತಂಡದ ಅಧ್ಯಕ್ಷರನ್ನಾಗಿ ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ. ಜೈಪ್ರಕಾಶ್ ಅವರಿಗೆ ಸಾಕಷ್ಟು ಜವಾಬ್ದಾರಿಗಳಿವೆ. ಈಗಿರುವ ಕೆಲಸ ಕಾರ್ಯಗಳ ಒತ್ತಡಗಳೆ ಹೆಚ್ಚು.
ತಮ್ಮ ಕಾರ್ಯಭಾರವನ್ನು ಯಾವತ್ತೂ ಚ್ಯುತಿ ಬಾರದಂತೆ ಯಶಸ್ವಿಯಾಗಿ ನಿರ್ವಹಿಸುತ್ತಾರೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ಕಾರ್ಯಬಾಹುಳ್ಯದ ನಡುವೆ ಸ್ಮಾರ್ಟ್ಸಿಟಿ ಹೊಣೆಗಾರಿಕೆಯನ್ನು ನೀಡಿದರೆ ಈ ಹೆಚ್ಚುವರಿ ಹೊಣೆಗಾರಿಕೆಯನ್ನು ಅವರು ಹೇಗೆ ನಿಭಾಯಿಸಬಲ್ಲರು? ದಿನವಿಡೀ ಕಾರ್ಯ ನಿರ್ವಹಿಸಿದರೂ ಮುಗಿಯದಂತಹ ಸ್ಥಿತಿಯಲ್ಲಿ ಅವರ ಕೆಲಸ ಕಾರ್ಯಗಳು ಇರುವಾಗ ಸ್ಮಾರ್ಟ್ಸಿಟಿಗೆ ಸಮಯ ಕೊಡುವುದಕ್ಕೆ ಸಾಧ್ಯವಾಗುವುದೆ?
ಸ್ಮಾರ್ಟ್ಸಿಟಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಯ ತಂಡಕ್ಕೆ ಕೆಲವು ಷರತ್ತುಗಳನ್ನು/ ನಿಬಂಧನೆಗಳನ್ನು ಹಾಕಲಾಗಿದೆ. ಸ್ಮಾರ್ಟ್ಸಿಟಿ ಪ್ರಾಧಿಕಾರದಿಂದ ತಪಾಸಣೆ, ಪರಿಶೀಲನೆಗೆ ಉಲ್ಲೇಖಿಸಲ್ಪಟ್ಟ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕು ಎಂಬ ಷರತ್ತು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸಾರ್ವಜನಿಕರಿಂದ ನಿರ್ದಿಷ್ಟ ಆರೋಪಗಳು ಬಂದಾಗ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಡಳಿತದ ನಿರ್ದೇಶನಗಳು ಬಂದಾಗ ಮಾತ್ರ ಎಂಬ ಷರತ್ತು ಇಲ್ಲಿ ಅತ್ಯಂತ ಗಮನ ಸೆಳೆದಿದೆ. ಅಂದರೆ, ದೂರುಗಳು ಬಂದಾಗ, ಅದರಲ್ಲಿಯೂ ನಿರ್ದಿಷ್ಟ ದೂರುಗಳು ಇರಬೇಕು ಎಂಬ ಒಕ್ಕಣೆ, ಜನಪ್ರತಿನಿಧಿಗಳಿಂದ ದೂರು ಬಂದಾಗ ಮಾತ್ರ ಕಾರ್ಯನಿರ್ವಹಿಸಬೇಕು ಎಂಬ ಅಂಶ ಇವೆಲ್ಲವೂ ಹಲವು ಜಿಜ್ಞಾಸೆಗಳಿಗೆ ಕಾರಣವಾಗಿದೆ.
ಅಧ್ಯಕ್ಷರು ಮತ್ತು ಸಮಿತಿಯು ಹೊರಗಿನ ವಿಷಯ ಪರಿಣಿತರ, ತಜ್ಞರ, ತಾಂತ್ರಿಕ ಸಿಬ್ಬಂದಿಯ ಸೇವೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಹೊರಗಿನವರನ್ನು ನೇಮಿಸಿಕೊಳ್ಳುತ್ತಾ ಹೋದರೆ ಮತ್ತಷ್ಟು ಹೊರೆಯಾಗುವುದಲ್ಲದೆÉ, ಈಗಾಗಲೇ ಇರುವ ಅಧಿಕಾರಿಗಳ, ಪರಿಣಿತರ ಕೆಲಸ ಕಾರ್ಯಗಳಾದರೂ ಏನು? ಅವರಿಂದ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆ?
ಸಮಿತಿಯು ವಾರ್ಷಿಕ ಕಾರ್ಯಕ್ರಮ ಪಟ್ಟಿಯಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಅಂಗೀಕಾರಕ್ಕಾಗಿ ಸ್ಮಾರ್ಟ್ಸಿಟಿ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಬಹುದಾಗಿದೆ.
ಅಂದರೆ, ಈ ಸಮಿತಿ ಶಿಫಾರಸ್ಸುಗಳನ್ನು ಮಾಡಲಷ್ಟೇ ಅಧಿಕಾರ ಪಡೆದಿದೆ. ಕಾಮಗಾರಿಗಳಲ್ಲಿ ನಡೆದಿರುವ ಗುಣಮಟ್ಟ, ಕಾರ್ಯವೈಖರಿಯ ಬಗ್ಗೆ ನಮೂದು ಮಾಡಿ ಸ್ಮಾರ್ಟ್ಸಿಟಿ ಲಿಮಿಟೆಡ್ಗೆ ಒಂದು ವರದಿ ಹೊತ್ತು ಹಾಕಿದರೆ ಸಾಕು. ಅಲ್ಲಿಗೆ ಅವರ ಕಾರ್ಯಯೋಜನೆ ಮುಗಿದಂತಾಯಿತು. ಮುಂದೇನು ಎಂಬ ಪ್ರಶ್ನೆಗೆ ಎಲ್ಲಿಯೂ ಉತ್ತರವಿಲ್ಲ. ಇಷ್ಟು ಕೆಲಸ ಮಾಡಲು ಇಂತಹ ಒಂದು ಅನುಷ್ಠಾನ ಮತ್ತು ಮೆಲ್ವಿಚಾರಣಾ ಸಮಿತಿಯ ಅಗತ್ಯವಿತ್ತೆ? ಗುಡ್ಡ ಅಗೆದು ಇಲಿ ಹಿಡಿಯುವಂತಹ ಪರಿಸ್ಥಿತಿ ಇದು.
ಕೆಲವು ಇಲಾಖೆಗಳಲ್ಲಿ ಯಾವುದಾದರೊಂದು ವಿವಾದ ಉಂಟಾದಾಗ, ಅನ್ಯಾಯ, ಅಕ್ರಮಗಳಾದಾಗ ಅದರ ಪರಿಶೀಲನೆಗೆ ಕಮೀಷನರ್ ಅಥವಾ ತಂಡವೊಂದನ್ನು ರಚಿಸುತ್ತಾರೆ. ಈ ತಂಡವು ವಿಷಯ ಸಂಗ್ರಹಿಸಿ ಸಮಗ್ರ ವರದಿಯನ್ನು ಸಲ್ಲಿಸುತ್ತದೆ. ತಂಡ ಅಥವಾ ಸಮಿತಿ ಸಲ್ಲಿಸಿದ ಈ ವರದಿ ಮುಂದೆ ಅನುಷ್ಠಾನ ಆಗಬಹುದು ಇಲ್ಲವೆ ಕಚೇರಿಯಲ್ಲಿ ಕೊಳೆಯಬಹುದು. ಇನ್ನೂ ಕೆಲವೊಂದು ಉದಾಹರಣೆ ನೀಡಬಹುದಾದರೆ ಸರ್ಕಾರ ಕೆಲವೊಂದು ಯೋಜನೆಗಳಿಗಾಗಿ ಆಯೋಗ ರಚಿಸುತ್ತದೆ.
ಸಾಕಷ್ಟು ಹಣ ವ್ಯಯಿಸಲಾಗುತ್ತದೆ. ವರ್ಷಾನುಗಟ್ಟಲೆ ಈ ಆಯೋಗ ಕಾರ್ಯನಿರ್ವಹಿಸಿ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಮುಂದೆ ಈ ವರದಿಗಳ ಕಥೆ ಏನಾಗುತ್ತದೆ ಎಂಬುದನ್ನು ನಾವೀಗಾಗಲೇ ನೋಡಿದ್ದೇವೆ. ಸ್ಮಾರ್ಟ್ ಸಿಟಿ ಸಮಿತಿಯ ಕಾರ್ಯವೂ ಇಷ್ಟಕ್ಕೆ ಸೀಮಿತವಾಗಬಹುದೆ?
ಅವೈಜ್ಞಾನಿಕ ಮತ್ತು ಅಸಮರ್ಪಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆದು ಉಲ್ಲಂಘನೆ ಮಾಡಿರುವವರ ವಿರುದ್ಧ ಕನಿಷ್ಠ ಕ್ರಮ ಕೈಗೊಳ್ಳಲು ಸಮಿತಿಗೆ ಸಾಧ್ಯವಿಲ್ಲವಾದರೆ ಈ ಸಮಿತಿಗಳಿಗೆ ಅರ್ಥ ಮತ್ತು ಅಧಿಕಾರವಾದರೂ ಏನು?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
