ಹುಳಿಯಾರು:
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಬಿಸಿಲಿನ ಝಳದಿಂದ ಬಸವಳಿದಿದ್ದ ಮನಗಳಿಗೆ ತಂಪೆರೆಯಿತು, ರೈತರ ಮೊಗದಲ್ಲಿ ರೋಹಿಣಿ ಮಳೆ ಮಂದಹಾಸ ಮೂಡಿಸಿತ್ತು
ಗುರುವಾರ ನಡು ರಾತ್ರಿ ಸುಮಾರು 12 ಗಂಟೆಗೆ ಪ್ರಾರಂಭವಾದ ಮಳೆ 2 ಗಂಟೆಗೂ ಹೆಚ್ಚು ಹೊತ್ತು ಉತ್ತಮವಾಗಿ ಬಿದ್ದಿದೆ. ಮಳೆ ಬೀಳುವ ವೇಳೆ ಸಿಡಿಲು, ಗುಡುಗಿನ ಆರ್ಭಟ ಎದೆ ಝಲ್ಲೆನಿಸುವಂತಿತ್ತು.
ಮುಂಗಾರು ಪ್ರಾಂಭವಾಗಿ ತಿಂಗಳುಗಳೇ ಕಳೆದಿದ್ದರೂ ಇಲ್ಲಿವರೆಗೆ ಇಂತಹ ಉತ್ತಮ ಮಳೆಯಾಗಿರಲಿಲ್ಲ. 2 ಗಂಟೆಗೂ ಹೆಚ್ಚು ಹೊತ್ತು ಸುರಿದ ಮಳೆಯಿಂದ ಸಣ್ಣ-ಪುಟ್ಟ ಕೆರೆ, ಕಟ್ಟೆಗೆ ನೀರು ಬಂದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ಹೊಲ ತೋಟಗಳಲ್ಲಿ ನೀರು ನಿಂತು ರೈತರಲ್ಲಿ ಸಂಭ್ರಮ ಸೃಷ್ಠಿಸಿತ್ತು.
ಈ ಮಳೆ ಹೋಬಳಿಯ ಅನೇಕ ಪ್ರದೇಶಕ್ಕೆ ಸುರಿದ ಮೊದಲ ಹದ ಮಳೆಯಾಗಿದೆ. ಇಲ್ಲಿ ಸಾಮಾನ್ಯವಾಗಿ ಮೇ 2 ನೇ ವಾರದಲ್ಲಿ ಮುಂಗಾರು ಪೂರ್ವ ಮಳೆ ಆರಂಭವಾಗಿ ಕೃಷಿ ಚಟುವಟಿಕೆಗಳೂ ಚುರುಕುಗೊಳ್ಳುತ್ತಿದ್ದವು. ಆದರೆ, ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟಿತ್ತು.
ಮುಂಗಾರು ಪೂರ್ವ ಅವಧಿಯಲ್ಲಿ ಮಳೆಯೇ ಇಲ್ಲದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು. ಬಿತ್ತನೆ ಬೀಜ ಖರೀದಿಸುವವರಿಲ್ಲದೆ ರೈತ ಸಂಪರ್ಕ ಕೇಂದ್ರದಲ್ಲಿ ಹುಳ ಬೀಳುತ್ತಿತ್ತು. ಗುರುವಾರ ರಾತ್ರಿ ಬಿದ್ದ ಮಳೆ ಉತ್ತಮ ಮುಂಗಾರಿನ ಆಶಾಭಾವ ಮೂಡಿಸಿದೆ. ಕೃಷಿಗಾಗಿ ಭೂಮಿ ಹಸನುಗೊಳಿಸಲು ನೆರವಾಗಿದೆ.
ತಾಲೂಕಿನ ಮಳೆ ಮಾಹಿತಿ
ಚಿ.ನಾ.ಹಳ್ಳಿ 37.0 ಮಿಮೀ
ಹುಳಿಯಾರು 47.6 ಮಿಮೀ
ಬೋರನಕಣಿವೆ 45.4 ಮಿಮೀ
ಶೆಟ್ಟಿಕೆರೆ 10.3 ಮಿಮೀ
ಮತ್ತಿಘಟ್ಟ 7.0 ಮಿಮೀ
ದೊಡ್ಡಎಣ್ಣೇಗೆರೆ 40.1 ಮಿಮೀ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ