ದಾವಣಗೆರೆ
ಮುಂದಿನ ಇನ್ನೂ ಎರಡು ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹ ವಿಧಾನದಲ್ಲಿ ಸಂಪೂರ್ಣ ತಂತ್ರಜ್ಞಾನದಿಂದ ಕೂಡಲಿದ್ದು, ಪಾವತಿದಾರರಸ್ನೇಹಿಯಾಗಿ ಪರಿವರ್ತನೆಯಾಗಲಿದೆ ಎಂದು ಹೆಚ್ಚುವರಿ ಆದಾಯ ತೆರಿಗೆ (ವಲಯ-1) ಆಯುಕ್ತ ಡಾ.ಜಿ.ಮನೋಜ್‍ಕುಮಾರ್ ತಿಳಿಸಿದರು.
ನಗರದ ಬಾಪೂಜಿ ಎಂ.ಬಿ.ಎ. ಪ್ರೋಗ್ರಾಂ ಆಡಿಟೋರಿಯಂನಲ್ಲಿ ಸೋಮವಾರ ಜಿಲ್ಲಾ ಆದಾಯ ತೆರಿಗೆ ಇಲಾಖೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆ, ಜಿಲ್ಲಾ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ತೆರಿಗೆ ಪಾವತಿದಾರರು, ವ್ಯಾಪಾರಸ್ಥರು, ಉದ್ದಿಮೆದಾರರು, ವೃತ್ತಿನಿರತರಿಗಾಗಿ ಏರ್ಪಡಿಸಿದ್ದ ಆದಾಯ ತೆರಿಗೆ ಕಾನೂನುಗಳ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾನಾಡಿದರು.
ಸರ್ಕಾರದ ತೆರಿಗೆಯನ್ನು ಸುಗಮವಾಗಿ ಸಂಗ್ರಹಿಸಲು ವಿಜನ್ 20:20ಯನ್ನು ಮುಂದಿನ ದಿನಗಳಲ್ಲಿ ತರಲಿದ್ದು, ತೆರಿಗೆ ಸಂಗ್ರಹಿಸುವ ವಿಧಾನದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣ ತಂತ್ರಜ್ಞಾನದಿಂದ ಕೂಡಿರಲಿದೆ. ಆದಾಯ ತೆರಿಗೆ ಇಲಾಖೆಯು ಮೊದಲಿನಂತೆ ಕಟ್ಟುನಿಟ್ಟಾಗಿ ಇಲ್ಲದೇ ತನ್ನ ಪಾವತಿದಾರರೊಂದಿಗೆ ಸ್ನೇಹಮಯಿಯಾಗಿ ಬದಲಾಗಿದೆ ಎಂದರು.
ಅರ್ಹ ತೆರಿಗೆದಾರರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ, ದೇಶದ ಹಾಗೂ ವೈಯಕ್ತಿಕ ಅಭಿವೃದ್ಧಿಗೆ ಸಹಕರಿಸಬೇಕು. ಉದ್ಯಮಿಗಳು ತಮ್ಮ ಒಟ್ಟು ಆದಾಯವನ್ನು ಘೋಷಿಸಿ, ತೆರಿಗೆ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ವಂಚಿಸದೇ ನಿಯಮಾನುಸಾರ ತೆರಿಗೆಯನ್ನು ಇಲಾಖೆಗೆ ಪಾವತಿಸಬೇಕು. ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದಲ್ಲಿ ಉದ್ದಿಮೆದಾರರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಚಾರ್ಟರ್ಡ್ ಅಕೌಂಟೆಂಟ್ಸ್ ಆಸೋಸಿಯೇಷನ್‍ನ ಗೌರವಾಧ್ಯಕ್ಷ ಎ.ಎಸ್.ವೀರಣ್ಣ ಮಾತನಾಡಿ, ಆದಾಯ ತೆರಿಗೆ ಇಲಾಖೆಯ ಇನ್ಫೋಸಿಸ್ ಸಂಸ್ಥೆಯೊಂದಿಗೆ 4,200 ಲಕ್ಷ ಕೋಟಿ ರೂಗಳ ಒಪ್ಪಂದ ಮಾಡಿಕೊಂಡಿದೆ. ಇದರಿಂದ ರಿಟರ್ನ್ ಫೈಲ್ ಮಾಡೋ ವಿಧಾನದಲ್ಲಿ ಸರಳೀಕರಣ ಕಾಣಬಹುದು. ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.6 ಮಾತ್ರ ತೆರಿಗೆ ಪಾವತಿಸುತ್ತಿದ್ದರು. ಆದರೆ, ಇತ್ತಿಚೀನ ದಿನಗಳಲ್ಲಿ ಸುಮಾರು ರೂ.12 ಲಕ್ಷ ಕೋಟಿಯಷ್ಟು ಆದಾಯ ತೆರಿಗೆ ಸಂಗ್ರಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ (ವಲಯ-2) ಸುನೀಲ್‍ಕುಮಾರ್ ಅಗರ್‍ವಾಲ್ ಮಾತನಾಡಿ, ಕಾಲ ಬದಲಾದಂತೆ ಆದಾಯ ತೆರಿಗೆ ಇಲಾಖೆಯಲ್ಲಿಯೂ ಕ್ಷಿಪ್ರ ಬದಲಾವಣೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ಇಲಾಖೆಯು ವೇಗವಾಗಿ ಬೆಳೆಯುತ್ತಿದೆ. ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳುತ್ತಿದ್ದವರನ್ನು ಸಹ ಗುರುತಿಸಿ ಅವರಿಂದ ತೆರಿಗೆ ವಸೂಲಿ ಮಾಡಲಿದೆ. ಅಲ್ಲದೇ ಆದಾಯ ತೆರಿಗೆಯನ್ನು ಸ್ವಯಂ ಪ್ರೇರಿತರಾಗಿ ಪಾವತಿ ಮಾಡುವವರಿಗೆ ಸಹಾಯವನ್ನು ಒದಗಿಸಬೇಕಿದೆ. ತೆರಿಗೆ ಇಲಾಖೆಯು ದೇಶದ ಎಲ್ಲಾ ಅಭಿವೃದ್ಧಿ ಯೋಜನೆಗಳಿಗೆ ಸಹಾಯಕವಾಗಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಕಾರ್ಯದರ್ಶಿ ಎ.ಬಿ. ಶಂಭುಲಿಂಗಪ್ಪ ಮಾತನಾಡಿ, ಈ ವಿಚಾರಣ ಸಂಕಿರಣದ ಮೂಲ ಉದ್ದೇಶವೆಂದರೆ ತೆರಿಗೆ ಪಾವತಿ ಬಗ್ಗೆ ಅರಿವು ಮೂಡಿಸುವುದಾಗಿದೆ. ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರು ತೆರಿಗೆಯನ್ನು ಸರ್ಕಾರಕ್ಕೆ ನ್ಯಾಯಾಬದ್ಧವಾಗಿ ಸರಿಯಾದ ಸಮಯದಲ್ಲಿ ಪಾವತಿಸುವ ಮೂಲಕ ದೇಶವನ್ನು ಆರ್ಥಿಕವಾಗಿ ಸಧೃಡಗೊಳಿಸುವಲ್ಲಿ ಪಾತ್ರರಾಗಬೇಕು. ತೆರಿಗೆದಾರರು ಸರಿಯಾದ ಸಮಯದಲ್ಲಿ ಆದಾಯ ತೆರಿಗೆಯನ್ನು ಪಾವತಿಸಿದರೆ ಈ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಚಾರ್ಟರ್ಡ್ ಅಕೌಂಟೆಂಟ್ಸ್ ಆಸೋಸಿಯೇಷನ್‍ನ ಅಧ್ಯಕ್ಷ ಕಿರಣ್‍ಪಾಟೀಲ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್, ಸಂಪನ್ಮೂಲ ಅಧಿಕಾರಿಯಾಗಿ ಪ್ರಧಾನ ಆಯುಕ್ತರ ಕಚೇರಿಯ ಆದಾಯ ತೆರಿಗೆ ಅಧಿಕಾರಿ (ಕೇಂದ್ರಸ್ಥಾನ-1) ಎಸ್.ಭಾಸ್ಕರ್ ಅವರು ಸೇರಿದಂತೆ ಪಾವತಿದಾರರು, ವ್ಯಾಪಾರಿಗಳು, ಉದ್ದಿಮೆದಾರರು, ವೃತ್ತಿನಿರತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.