ತಿಪಟೂರು
ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಟಿ.ಡಿ.ಎಸ್ ಹಾಗೂ ಜಿ.ಎಸ್.ಟಿ ವಿಧಿಸಿರುವುದು ಖಂಡನೀಯ ಎಂದು ಪ್ರತಿಭಟಿಸಿದರು.ಇತ್ತೀಚೆಗೆ ಕೇಂದ್ರ ಸರ್ಕಾರವು ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಟಿ.ಡಿ.ಎಸ್ ಹಾಗೂ ಜಿ.ಎಸ್.ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ತೊಡಕನ್ನುಂಟು ಮಾಡಿದ್ದು ಸಹಕಾರ ಸಂಸ್ಥೆಗಳ ಮೇಲೆ ಟಿ.ಡಿ.ಎಸ್ ವಿಧಿಸಿರುವುದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 52 ಸಾವಿರಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗುತ್ತಿದ್ದು ಸಹಕಾರ ಕ್ಷೇತ್ರದಲ್ಲಿ ಕೋಟ್ಯಂತರ ಜನರು ಸದಸ್ಯರಿದ್ದು ಲಕ್ಷಾಂತರ ಉದ್ಯೋಗ ಅವಕಾಶವನ್ನು ಸಹಕಾರ ಕ್ಷೇತ್ರ ನೀಡಿರುತ್ತದೆ.
ಈ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಹಕಾರ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ ಟಿ.ಡಿ.ಎಸ್ ಮತ್ತು ಜಿ.ಎಸ್.ಟಿ.ಗಳನ್ನು ರದ್ದುಪಡಿಸಬೇಕೆಂದು ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿ ಅಸೋಸಿಯೇಷನ್ ನೇತೃತ್ವದಲ್ಲಿ ತಿಪಟೂರು ತಾಲ್ಲೂಕು ಎಲ್ಲ ಸಹಕಾರಿ ಸಂಸ್ಥೆಗಳು ಮೌನ ಮೆರವಣಿಗೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನ ಮಂತ್ರಿಗಳಿಗೆ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ತಾಲ್ಲೂಕು ಉಪ ವಿಭಾಗಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಸಹಕಾರ ಕ್ಷೇತ್ರ ಈ ದೇಶದ ಕೃಷಿಕರ ಮಧ್ಯಮ ವರ್ಗದವರು ಹಾಗೂ ಕಡು ಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದ್ದು ಕಳೆದ 110 ವರ್ಷಕ್ಕಿಂತ ಹೆಚ್ಚು ಕಾಲದಿಂದ ಸಹಕಾರ ಸಂಸ್ಥೆಗಳು ಈ ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡುತ್ತಾ ಬಂದಿವೆ. ಇಂತಹ ಸಹಕಾರ ಸಂಸ್ಥೆಗಳಿಗೆ ಸರ್ಕಾರವು ತೆರಿಗೆಯನ್ನು ವಿಧಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕು ಉಪ ವಿಭಾಗಾಧಿಕಾರಿಗಳ ಕಚೇರಿಗೆ ನೂರಾರು ಸಹಕಾರ ಸಂಘಗಳ ಸಿಬ್ಬಂದಿಯವರಿಂದ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ವೇಳೆ ತಾಲ್ಲೂಕಿನ ಶ್ರೀ ಸೌರಭ ಮಹಿಳಾ ಪತ್ತಿನ ಸಹಕಾರ ಸಂಘ, ಶ್ರೀ ಗುರುಕುಲ, ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘ, ಶ್ರೀ ಕೆಂಪಾಂಬ ಪತ್ತಿನ ಸಹಕಾರ ಸಂಘ, ವಿನಾಯಕ ಪತ್ತಿನ ಸಹಕಾರ ಸಂಘ, ಕನಕ ಪತ್ತಿನ ಸಹಕಾರ ಸಂಘ ಮೊದಲಾದ ಸಹಕಾರ ಸಂಘಗಳು ಭಾಗವಹಿಸಿದ್ದವು.