ಅಪರಾಧ ಪತ್ತೆ : ಮಾಹಿತಿ ತಂತ್ರಜ್ಞಾನದಿಂದ ಪ್ರಗತಿ ನಿರೀಕ್ಷೆ ಕಷ್ಟ ಸಾಧ್ಯ

ಚಿತ್ರದುರ್ಗ

   ಮಾಹಿತಿ ತಂತ್ರಜ್ಞಾನ ಕಾಯ್ದೆ ಬಳಕೆಗೆ ಬಂದು ಹತ್ತೊಂಬತ್ತು ವರ್ಷಗಳು ಕಳೆಯುತ್ತಿವೆ. ಆದರೂ ಈ ಕುರಿತು ಸಮರ್ಪಕ ಜ್ಞಾನ ಬೆಳೆದಿಲ್ಲ. ಯಾವುದೇ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಅಥವಾ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಒಳಗೊಂಡ ಸಾಕ್ಷ್ಯಾಧಾರಗಳನ್ನು ಬಳಸಿಕೊಳ್ಳುವಲ್ಲಿ ನಿರೀಕ್ಷಿತ ಬೆಳವಣಿಗೆಯಾಗಿಲ್ಲ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಣೆ ಮಾಡುವ ಕುರಿತು ಸಂಪೂರ್ಣ ಅರಿವು ಬಂದಿಲ್ಲ ಎಂದು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಕೆ.ಎನ್.ಪಣೀಂದ್ರ ವಿಷಾಧಿಸಿದರು.

    ಕರ್ನಾಟಕ ನ್ಯಾಯಾಂಗ ಅಕಾಡೆಮಿ ಬೆಂಗಳೂರು, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳ ಬಳಕೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

    ಈ ಕಾರ್ಯಗಾರದಲ್ಲಿ ಡಿಜಿಟಲ್ ಎವಿಡೆನ್ಸ್‍ಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಇವುಗಳನ್ನು ಬಳಸಿಕೊಂಡು ತನಿಖಾಧಿಕಾರಿಗಳು ಹೇಗೆ ಕೆಲಸ ಮಾಡಬೇಕು. ಪೊಲೀಸರು ಕೇವಲ ಚಾರ್ಜ್‍ಶೀಟ್ ಹಾಕಿದರೆ ಕೆಲಸ ಮುಗಿಯುವುದಿಲ್ಲ. ಯಾವುದೇ ಪ್ರಕರಣ ಇತ್ಯರ್ಥ ಆಗುವವರೆಗೂ ಪೊಲೀಸರ ಜವಾಬ್ಧಾರಿ ಇದ್ದೇ ಇರುತ್ತದೆ ಎಂಬುದನ್ನು ಮರೆಯಬಾರದು. ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ತನಿಖಾಧಿಕಾರಿಗಳ ಸಂಬಂಧ ಹೇಗಿರಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹೇಗೆ ವಾದ ಮಂಡನೆ ಮಾಡಬೇಕೆಂಬ ಕುರಿತು ತಿಳಿಸಿಕೊಡಲಾಗುವುದು ಎಂದು ಹೇಳಿದರು.

   ಎಲೆಕ್ಟ್ರಾನಿಕ್ಸ್ ಎವಿಡೆನ್ಸ್‍ಗಳನ್ನು ಹೇಗೆ ಬಳಸಿಕೊಳ್ಳಬೇಕು. ಹೇಗೆ ಅವುಗಳನ್ನು ವಶಪಡಿಸಿಕೊಳ್ಳಬೇಕು. ಹೇಗೆ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕೆಂಬ ಕುರಿತು ಮಾಹಿತಿ ಕೊರತೆ ಉಂಟಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆ ನೌಕರರು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಕುರಿತು ತೀರ್ಮಾನಿಸಲಾಗಿದೆ. ಇಂತಹ ಉದ್ದೇಶದಿಂದ ಇಂದು ಅದಕ್ಕೆ ಸಂಬಂಧಿಸಿದಂತೆ ಕಾರ್ಯಗಾರ ನಡೆಸಲಾಗುತ್ತಿದೆ ಎಂದು ತಿಳಿಸಿ ಮನುಷ್ಯನಿಗೆ ಜ್ಞಾನಕ್ಕೆ ಸಮನಾದ ಸಂಪತ್ತು ಯಾವುದೂ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕೆಂದು ನ್ಯಾಯಮೂರ್ತಿ ಕೆ.ಎನ್.ಪಣೀಂದ್ರ ಹೇಳಿದರು.

    ಮೊಟ್ಟ ಮೊದಲನೆಯದಾಗಿ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಕಾರ್ಯಗಾರ ನಡೆಸಲಾಗಿದೆ. ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸುವ ಉದ್ದೇಶ ಹೊಂದಲಾಗಿದೆ. ಈ ಮಾಹಿತಿ ಕಾರ್ಯಗಾರವನ್ನು ಪ್ರತಿ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಆಯೋಜಿಸುವ ಮೂಲಕ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆ ನೌಕರರಿಗೆ ಅಗತ್ಯ ಮಾಹಿತಿ ನೀಡಲಾಗುವುದು ಎಂದರು.

    ನ್ಯಾಯಾಂಗ ಇಲಾಖೆ ನೌಕರರು ಎಲೆಕ್ಟ್ರಾನಿಕ್ ಎವಿಡೆನ್ಸ್‍ಗಳನ್ನು ಯಾವ ರೀತಿ ನಿರ್ವಹಿಸಬೇಕು. ಅವುಗಳನ್ನು ಹೇಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂಬ ಮಾಹಿತಿ ನೀಡಲಾಗುವುದು. ಯಾವುದೇ ಪ್ರಕರಣ ನ್ಯಾಯಾಲಕ್ಕೆ ಬಂದು ಹೋದಲ್ಲಿ ಅಲ್ಲಿಗೆ ಎಲ್ಲವೂ ಮುಗಿಯಿತು ಎನ್ನುವಂತಿಲ್ಲ. ಅದು ಮುಂದುವರಿದು ಹೈಕೋರ್ಟ್, ಸುಪ್ರಿಂಕೋರ್ಟ್‍ಗೆ ಹೋಗಬಹುದು. ಇಂತಹ ಸಂದರ್ಭದಲ್ಲಿ ಕೆಳಹಂತದಲ್ಲಿ ಸಂಗ್ರಹಿಸಿದ ಸಾಕ್ಷ್ಯಧಾರಗಳು ಬೇಕಾಗುತ್ತವೆ. ಹಾಗಾಗಿ ನ್ಯಾಯಾಂಗ ಇಲಾಖೆ ನೌಕರರು ನಿಗಧಿತ ಅವಧಿಯವರೆಗೆ ಅವನ್ನು ಜಾಗರೂಕತೆಯಿಂದ ಕಾಯ್ದಿಟ್ಟುಕೊಳ್ಳಬೇಕೆಂದು ಸಲಹೆ ಮಾಡಿದರು.

    ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಮಾತನಾಡಿ, ಪ್ರಸ್ತುತ ಮಾಹಿತಿ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಅದರಂತೆ ಅದರಿಂದ ದುಷ್ಪರಿಣಾಮಗಳು ಸಹ ಉಂಟಾಗುತ್ತಿವೆ. ಮಕ್ಕಳು ವೀಡಿಯೋ ಗೇಮ್‍ಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ತುಂಬಾ ಮುಖ್ಯ. ಹಾಗಾಗಿ ಎಲೆಕ್ಟ್ರಾನಿಕ್ಸ್ ಎವಿಡೆನ್ಸ್ ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

     ಉಚ್ಚನ್ಯಾಯಾಲಯದ ಮತ್ತೋರ್ವ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಸರ್ಕಾರಿ ಸೇವೆಗೆ ಸೇರುವ ನೌಕರರು ಆರಂಭದಲ್ಲಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಾರೆ. ನಂತರ ಕೆಲಸ ಮಾಮೂಲಿಯಾಗಿ ಹೋಗುತ್ತದೆ. ಮತ್ತೆ ಕೆಲವು ದಿನಗಳ ನಂತರ ನಿಧಾನವಾಗಿ ಕೆಲಸ ಮಾಡಲಾರಂಭಿಸುತ್ತಾರೆ. ಕೊನೆ ಕೊನೆಯಲ್ಲಿ ಕೆಲಸದ ಬಗ್ಗೆ ಜಿಗುಪ್ಸೆ ಹೊಂದುತ್ತಾರೆ. ಹಾಗಾಗಿ ನಾವು ಮಾಡುವ ಕೆಲಸದ ಉದ್ದೇಶವನ್ನು ಮೊದಲು ತಿಳಿದುಕೊಳ್ಳಬೇಕು. ಜವಾಬ್ಧಾರಿಯಿಂದ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

     ಉಚ್ಚನ್ಯಾಯಾಲಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಂದೇಶ್ ಜೆ. ಚೌಟ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್, ಜಿ.ಪಂ. ಸಿಇಒ ಸತ್ಯಭಾಮ ಉಪಸ್ಥಿತರಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ವೈ. ವಟವಟಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕ ದೋನಿ ಕಾರ್ಯಕ್ರಮ ನಿರೂಪಿಸಿದರು.

    ಸಂಪನ್ಮೂಲ ವ್ಯಕ್ತಿಗಳಾದ ಸೈಬರ್ ಸೆಕ್ಯುರಿಟಿ ಟ್ರೈನರ್ ಡಾ. ಅನಂತಪ್ರಭು, ಸರ್ಕಾರಿ ಅಭಿಯೋಜಕರಾದ ಎನ್.ಎಸ್.ಮಲ್ಲಯ್ಯ ಎಲೆಕ್ಟ್ರಾನಿಕ್ ಎವಿಡೆನ್ಸ್ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಿದರು. ಕಾರ್ಯಗಾರದಲ್ಲಿ ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಹಾಗೂ ನ್ಯಾಯಾಂಗ ಇಲಾಖೆ ನೌಕರ ವರ್ಗದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link