ಜಗತ್ತಿನ ಸಮಸ್ಯೆಗಳಿಗೆ ಆವಿಷ್ಕಾರವೇ ಪರಿಹಾರ

ದಾವಣಗೆರೆ:

     ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಆವಿಷ್ಕಾರವೇ ಪರಿಹಾರ ನೀಡಲಿದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ಉತ್ನನ್ನಗಳು, ಜಿ.ಇ.ಟ್ರಾನ್ಸಪೋರ್ಟೇಶನ್‍ನ ಗ್ಲೋಬಲ್ ಲೀಡರ್ ವಾಗೀಶ ಪಾಟೀಲ ಪ್ರತಿಪಾದಿಸಿದರು.

      ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕತಿಕ ಭವನದಲ್ಲಿ ಶನಿವಾರ ನಡೆದ ಪದವಿ ಪ್ರದಾನ ಸಮಾರಂಭ ಹಾಗೂ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ಆವಿಷ್ಕಾರಗಳು ನಡೆಯದೇ ಹೋದರೆ, ವಿದ್ಯಾರ್ಥಿಗಳಿಂದ ಯಾವ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲ ಎಂಬುದನ್ನು ಮೊದಲು ಅರಿಯಬೇಕು. ಹೆಚ್ಚಿನ ಮೌಲ್ಯಗಳನ್ನು ಸೃಷ್ಟಿಸುವ ಆವಿಷ್ಕಾರವು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ. ಆದ್ದರಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆವಿಷ್ಕಾರದ ಗುಣವನ್ನು ರಕ್ತದಲ್ಲಿಯೇ ಮೈಗೂಡಿಸಿಕೊಂಡು, ಹೆಚ್ಚಿನ ಸಂಶೋಧನೆ, ಆವಿಷ್ಕಾರ ಕೈಗೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

       ಸಮಕಾಲೀನ ಸಮಸ್ಯೆಗಳನ್ನು ಅರಿತು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವನೇ ಯಶಸ್ವಿ ಎಂಜಿನಿಯರ್‍ಗಳಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪುಸ್ತಕದ ಮೂಲಕ ಪಡೆದ ಜ್ಞಾನವನ್ನು ಪರಿಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.

     ಎಂಜಿನಿಯರ್‍ಗಳಿಗೆ ಮೂಲಭೂತವಾಗಿ ಬೇಕಾಗಿರುವ ಕೌಶಲ್ಯ ಹಾಗೂ ವಿಶ್ಲೇಷಣಾತ್ಮಕ ಜ್ಞಾನವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಜಗತ್ತಿನಲ್ಲಿ ನಡೆಯುತ್ತಿರುವ ಸಮಕಾಲೀನ ವಿದ್ಯಾಮಾನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುವ ಮೂಲಕ ವಿಶ್ವ, ರಾಷ್ಟ್ರ, ಸಮಾಜ ನಿರ್ಮಾಣದಲ್ಲಿ ತೊಡಗಬೇಕೆಂದು ಕರೆ ನೀಡಿದರು.

     ಸಮಸ್ಯೆಗಳನ್ನು ನೋಡುವ ಹಾಗೂ ಬಗೆಹರಿಸುವ ವಿಶೇಷ ಮನೋಭಾವವನ್ನು ಇಂಜಿನಿಯರ್ ಬೆಳೆಸಿಕೊಂಡಿರುತ್ತಾನೆ. ವಿಶ್ಲೇಷಣೆ ಹಾಗು ಕುತೂಹಲದ ಮನೋಭಾವ ನಿಜವಾದ ಇಂಜಿನಿಯರ್‍ಗೆ ಇರುತ್ತದೆ. ಆ ಮೂಲಕ ಇಂಜಿನಿಯರ್ ಸಾಮಾನ್ಯ ವ್ಯಕ್ತಿಗಿಂತ ಭಿನ್ನವಾಗಿರುತ್ತಾನೆ ಎಂದರು.

     ಬೆಳಗಾವಿಯ ವಿಟಿಯುನ ವಿಶ್ರಾಂತ ರಿಜಿಸ್ಟ್ರಾರ್ ಡಾ.ಹೆಚ್.ವಿ.ಸುಧಾಕರ್ ನಾಯಕ್ ಮಾತನಾಡಿ, ಎಂಜಿನಿಯರ್‍ಗಳಿಗೆ ಅಂಕ ಹಾಗೂ ಪದವಿಗಳು ನೆರವಾಗುವುದಿಲ್ಲ. ಇಂಜಿನಿಯರ್‍ಗಳ ನಿಜವಾದ ಕಲಿಕೆ ಪದವಿ ನಂತರವೇ ಆರಂಭವಾಗಲಿದೆ. ಹೀಗಾಗಿ ಎಂಜಿನಿಯರ್‍ಗಳು ತಮಗೆ ಅಗತ್ಯವಾದ ಗುರಿ ಹಾಗೂ ಮಾರ್ಗದರ್ಸನವನ್ನು ತಾವೇ ಪಡೆಯಬೇಕಾದ ಅನಿವಾರ್ಯತೆ ಇದೆ. ವೈವಿಧ್ಯತೆ, ಉತ್ಕಟತೆ, ಗೌರವ, ಮಾನವೀಯತೆಗಳು ಇಂಜಿನಿಯರ್‍ಗಳು ಅಳವಡಿಸಿಕೊಳ್ಳಬೇಕಾದ ಮಾನವೀಯ ಮೌಲ್ಯಗಳಗಾವಿಗೆ ಎಂದು ಹೇಳಿದರು.

       ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿ, ಪ್ರಯಾಗದಲ್ಲಿ ನಡೆದ ಕುಂಭಮೇಳದಲ್ಲಿ ಐ.ಒ.ಟಿ. ತಂತ್ರಜ್ಞಾನವನ್ನು ಬಳಸಲಾಗಿತ್ತು. ಇದರಿಂದಾಗಿ 3 ಕೋಟಿ ಜನರು ಏಕಕಾಲಕ್ಕೆ ಬಂದರೂ ಸಹ ಸ್ವಚ್ಛತೆಯಿಂದ ಕಾರ್ಯನಿರ್ವಹಣೆ ಸಾಧ್ಯವಾಗಿದೆ ಎಂದರು.
ಬೃಹತ್ ದತ್ತಾಂಶ ನಿರ್ವಹಣೆ ತಂತ್ರಜ್ಞಾನದಿಂದ ಚಂಡಮಾರುತದ ಕುರಿತು ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಒಡಿಶಾ ಚಂಡಮಾರುತ ಎದುರಿಸಲು ನೆರವಾಯಿತು. ಆದರೆ, ವಾರದ ಹಿಂದೆ ಕಳೆದ ಹೋದ ವಿಮಾನವನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಎಂಜಿನಿಯರಿಂಗ್ ವಲಯದ ಸವಾಲುಗಳನ್ನು ತೋರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

    ಎಂಜಿನಿಯರ್‍ಗಳು ಉತ್ತಮ ಆಡಳಿತಗಾರರೂ ಸಹ ಆಗಬೇಕಿದೆ. ಹಣಕಾಸು ಜ್ಞಾನದ ಅಗತ್ಯವಿದೆ. ಸಮಯ ವನ್ನು ಗೌರವಿಸುವುದನ್ನು ಕಲಿಯಬೇಕು. ಫಿಲಿಪೈನ್ಸ್‍ನಲ್ಲಿ ಹತ್ತು ಮರಗಳನ್ನು ಬೆಳೆಸಿದವರಿಗೆ ಮಾತ್ರ ಪದವಿ ಪ್ರದಾನ ಮಾಡಲಾಗುತ್ತದೆ. ಆ ರೀತಿಯ ಪರಿಸರ ಕಾಳಜಿ ನಮ್ಮಲ್ಲೂ ಅಗತ್ಯವಿದೆ ಎಂದರು.

    ಈ ಸಂದರ್ಭದಲ್ಲಿ ಬಿಐಇಟಿಯಲ್ಲಿ 2018-19ನೇ ಸಾಲಿನ ಅಂತಿಮ ವರ್ಷದಲ್ಲಿ 18 ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 700 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap