ದಾವಣಗೆರೆ:
ಎಲ್ಲ ವರ್ಗದ ಜನರ ಹಿತಕಾಯುವಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, ಸಂಪೂರ್ಣ ವಿಫಲವಾಗಿದೆ ಎಂದು ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರವು ರೈತ, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಸಭಾಪತಿ ರಮೇಶ್‍ಕುಮಾರ್ ಅವರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ, ಖಾರವಾಗಿ ಪತ್ರ ಬರೆದಿರುವುದೇ ಸಾಕ್ಷಿಯಾಗಿದೆ ಎಂದರು.
ರೈತರಿಗೆ ಸಾಂತ್ವಾನ ಪತ್ರ:
ಅಧಿಕಾರಕ್ಕೆ ಬರುವ ಮುನ್ನ ಕುಮಾರಸ್ವಾಮಿ 24 ಗಂಟೆಯೊಳರೆ, ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಇಂದಿಗೂ ಸಹ ವಾಣಿಜ್ಯ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾವಾಗಿಲ್ಲ. ಸಾಲ ಮನ್ನಾ ಮಾಡಿ ಋಣಮುಕ್ತ ಪತ್ರ ತಲುಪಿಸುವುದಾಗಿ ಹೇಳಿದ್ದ, ಮುಖ್ಯಮಂತ್ರಿಗಳು ಇಂದು ರೈತರ ಆತ್ಮಹತ್ಯೆ ಮುಂದುವರೆದಿರುವ ಕಾರಣಕ್ಕೆ ಸಾಂತ್ವಾನ ಪತ್ರ ನೀಡುತ್ತಿದ್ದಾರೆಂದು ಮಾರ್ಮಿಕವಾಗಿ ನುಡಿದರು.
ಜನರ ಹಿಡಿಶಾಪ:
ವಿಧಾನಸೌಧದ ಎರಡೂ ಪ್ರಮುಖ ಗೇಟ್‍ಗಳು ಬಂದಾಗಿದ್ದು, ಜನಸಾಮಾನ್ಯರು ತಮ್ಮ ಅಳಲನ್ನು ಸರ್ಕಾರಕ್ಕೆ ತಲುಪಿಸಲಾಗುತ್ತಿಲ್ಲ. ಅಧಿಕಾರ ಹಿಡಿದ ಮೊದಲ ದಿನದಿಂದಲೂ ಮುಖ್ಯಮಂತ್ರಿ ಕುಮಾರಸ್ವಾಮಿ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರೆ, ಇವರ ಮಂತ್ರಿ ಮಂಡಲದ ಸಚಿವರೆಲ್ಲರೂ ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ. ಹೀಗಾಗಿ ರಾಜ್ಯದ ಜನತೆ ಸಮ್ಮಿಶ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆಂದು ಹೇಳಿದರು.
ಸಿಎಂ ರಾಜಿನಾಮೆ ನೀಡಲಿ:
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಹಾಗೂ ಸ್ವತಃ ಸಭಾಪತಿ ರಮೇಶ್ ಕುಮಾರ್ ಅವರೇ ಆಡಳಿತ ವೈಖರಿಯ ವಿರುದ್ಧ ಪತ್ರ ಬರೆದಿರುವುದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕಳ್ಳರ ಸರ್ಕಾರ:
ರಾಜ್ಯದ 150 ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದ್ದು, ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ತೆಂಗು, ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಿವೆ. ಆದರೂ, ಮೈತ್ರಿ ಸರ್ಕಾರದ ಒಬ್ಬರೇ ಒಬ್ಬ ಸಚಿವರು ಬರ ಪರಿಶೀಲನೆಗೆ ಪ್ರವಾಸ ಮಾಡಿಲ್ಲ. ರೈತರಿಗೆ ಸಾಂತ್ವಾನ ಹೇಳಿಲ್ಲ. ಹೀಗಾಗಿ ಇದು ಆಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರ ಸರ್ಕಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಹುದ್ದೆಗೆ ಅಗೌರವ:
ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬೇಕೆಂಬುದಾಗಿ, ಕಾಂಗ್ರೆಸ್ ಶಾಸಕರು ಹಾದಿಬೀದಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಹುದ್ದೆಗೆ ಅಗೌರವ ತೋರಿದ್ದಾರೆ. ನಿಜಕ್ಕೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸ್ವಾಭಿಮಾನ, ಗೌರವಿದ್ದರೆ, ತಕ್ಷಣವೇ ಮುಖ್ಯಮಂತ್ರಿ ಪದವಿಯನ್ನು ತೊರೆಯಬೇಕೆಂದು ಒತ್ತಾಯಿಸಿದರು.
ಎಚ್.ವಿಶ್ವನಾಥ್, ರಮೇಶ್ ಜಾರಕಿಹೋಳಿ ಸೇರಿದಂತೆ ಹಲವರನ್ನು ಮೈತ್ರಿ ಸರ್ಕಾರ ಸಚಿವ ಸ್ಥಾನ ನೀಡದೇ, ಬಲಿಪಶು ಮಾಡಿತು. ಈ ಸರ್ಕಾರದಲ್ಲಿ ಯಾವ ದಲಿತರಿಗೆ ಸಚಿವ ಸ್ಥಾನ ಕೊಡಲಾಗಿದೆ ಎಂದು ಆರೋಪಿಸಿದ ರೇಣುಕಾಚಾರ್ಯ, ಮಿದಿಳು ಇಲ್ಲದ, ನಾಲಿಗೆಯ ಮೇಲೆ ಹಿಡತವೇ ಇಲ್ಲದ ಜಮೀರ್ ಅಹ್ಮದ್ ಅವರನ್ನು ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಮಂತ್ರಿ ಮಾಡಿ, ಹಿರಿಯ ನಾಯಕ ರೋಷನ್ ಬೇಗ್ ಅವರನ್ನು ಕಡೆಗಣಿಸಲಾಗಿದೆ. ಏಳು ಬಾರಿ ಸತತವಾಗಿ ಗೆದ್ದಿರುವ ಆರ್.ರಾಮಲಿಂಗ ರೆಡ್ಡಿ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದೆ. ಅಲ್ಲದೇ, ಬಿ.ಸಿ.ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರನ್ನು ಹೀನಾಯವಾಗಿ ಮೈತ್ರಿ ಸರ್ಕಾರ ನಡೆಸಿಕೊಂಡಿದೆ ಎಂದು ದೂರಿದರು.
ಸರ್ಕಾರ ಶೀಘ್ರ ಪತನ:
ಈ ಮೈತ್ರಿ ಸರ್ಕಾರ ಎಚ್.ಡಿ.ಕುಮಾರಸ್ವಾಮಿ. ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ರೇವಣ್ಣ ಹೀಗೆ ಮೂರ್ನಾಲ್ಕು ಜನರ ಸರ್ಕಾರ ಮಾತ್ರವಾಗಿದ್ದು, ನಾವು (ಬಿಜೆಪಿಯವರು) ಆಪರೇಷನ್ ಕಮಲ ನಡೆಸಿ ಈ ಮೈತ್ರಿ ಸರ್ಕಾರವನ್ನು ಬೀಳಿಸುವುದಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರುಗಳ ಆಂತರಿಕ ಕಚ್ಚಾಟದಿಂದಲೇ ಮೈತ್ರಿ ಸರ್ಕಾರ ಪಥನ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಎಚ್.ಡಿ.ರೇವಣ್ಣ ಲಿಂಬೆಹಣ್ಣು ಹಿಡಿದು, ಹಿಡಿದು ಸ್ವತಹ ಎಚ್.ಡಿ.ದೇವೇಗೌಡರನ್ನೇ ಬಲಿಪಶು ಮಾಡಿಬಿಟ್ರು. ರೇವಣ್ಣ, ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ಈ ಮೂವರು ದೇವೇಗೌಡರನ್ನು ಹಾಸನದಿಂದ ತುಮಕೂರಿಗೆ ಓಡಿಸಿ, ಗೌಡರನ್ನು ಬಲಿಪಶು ಮಾಡಿರುವುದು ಅರಿವಾದ ಮೇಲೆ ಈಗ ಭವಾನಿ ಕಣ್ಣೀರು ಹಾಕುತ್ತಿದ್ದಾರೆಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ, ಮುಖಂಡರಾದ ರಾಜು ವೀರಣ್ಣ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಶ್ರೀಕಾಂತ್ ಮತ್ತಿತರರು ಹಾಜರಿದ್ದರು.