ಬೆಂಗಳೂರು
ಕನ್ನಡ ಚಿತ್ರರಂಗವು ಹಿರಿಯರನ್ನು ಕಳೆದುಕೊಂಡು ಖಾಲಿಯಾಗುತ್ತಾ ಹೋಗುತ್ತಿರುವುದನ್ನು ಸಮರ್ಥವಾಗಿ ತುಂಬಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಸಾಹಿತ್ಯ ಚಿಂತಕ ವಿಮರ್ಶಕ ಡಾ.ಹೆಚ್. ಎಸ್.ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.
ಕನ್ನಡ ನಾಡಿಗೆ ಬೆಳಕಾಗಿ, ನಾವು ಹೇಗೆ ಬದುಕಬೇಕು ಎನ್ನುವುದನ್ನು ಡಾ. ರಾಜ್ ಕುಮಾರ್ ಹೇಳಿ ಕೊಟ್ಟಿದ್ದಾರೆ,ವಿಷ್ಣುವರ್ಧನ್ ಅಂಬರೀಶ್ ಇನ್ನಿತರ ಗಣ್ಯರು ಅದನ್ನು ಪ್ರತಿಪಾದಿಸಿದ್ದು ಅವರಿಲ್ಲದೇ ಉಂಟಾಗಿರುವ ಶೂನ್ಯವನ್ನು ತುಂಬಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜನ ಪ್ರಕಾಶನ ವತಿಯಿಂದ ಆಯೋಜಿಸಿದ್ದ, ನಾಡೋಜ .ಬರಗೂರು ರಾಮಚಂದ್ರಪ್ಪನವರ ‘ಜನಪದ ನಾಯಕ ಡಾ.ರಾಜಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಕುಮಾರ್ ಜನಪರ ನಾಯಕ. ಅವರ ಬಾಂಧವ್ಯ ಹೆಚ್ಚಿಸಲು ಪುಸ್ತಕ ಹೊರತಂದಿರುವುದು ಸಂತಸ ತಂದಿದೆ ಎಂದು ಬಣ್ಣಿಸಿದರು.
ಪುಸ್ತಕದ ವಸ್ತುವಾದ ಡಾ.ರಾಜಕುಮಾರ್ ಅಥವಾ ಬರಗೂರು ಅಥವಾ ಈ ಪುಸ್ತಕದ ಬಗ್ಗೆ ಮಾತನಾಡುವುದೋ ಎಂಬ ಗೊಂದಲವಿತ್ತು ಎಂದ ಅವರು, ಈ ಪುಸ್ತಕ ಜೀವನ ಚರಿತ್ರೆ, ವಿಮರ್ಶೆಯಲ್ಲ.ಬದಲಾಗಿ,ಇದು ಒಂದು ಪ್ರೀತಿಯ ಕಥೆ ಎಂದರು.
ದೂರದ ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬ ಕನ್ನಡ ಚಿತ್ರರಂಗದಲ್ಲಿ ಜೀವಿಸಿದ ಪ್ರೀತಿಯ ಕಥೆ ಇದು. ಈ ಪುಸ್ತಕದಲ್ಲಿ ರಾಜಕುಮಾರ್ ಅಂತರಂಗ, ಮನುಷ್ಯತ್ವ ವಿನಯದ ಹಾದಿಯನ್ನಾ ಬಿಂಬಿಸುವಲ್ಲಿ ಬರಗೂರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ರಾಜಕುಮಾರ್ ಇದ್ದರೂ, ಇದು ರಾಜ ಪ್ರಭುತ್ವವಲ್ಲಾ.ಬದಲಾಗಿ, ಅವರ ವ್ಯಕ್ತಿತ್ವ ಪ್ರಜಾಪ್ರಭುತ್ವ. ವಿನಯಕ್ಕೆ ವಿದ್ವತ್ತಿನ ಸ್ಥಾನ ದೊರಕಿಸಿಕೊಟ್ಟವರು ಡಾ. ರಾಜ್.ಇನ್ನೂ, ಅವರ ಬದುಕು ನಟನೆಯಾಗಿರಲಿಲ್ಲ. ಹೀಗೆ, ಬರಗೂರು ಅವರ ಈ ಪುಸ್ತಕದಲ್ಲಿ ರಾಜಕುಮಾರ್ ಮಾತುಗಳು ಮೂಡಿ ಬಂದಿವೆ. ಒಂದೊಂದು ವಾಕ್ಯವೂ ಒಂದು ಸಂದೇಶದಂತೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕದ ವಿಶೇಷ
ಸಿನಿಮಾ ಮತ್ತು ಸಾಹಿತ್ಯ ದಲ್ಲಿ ಬೇರೆ ಬೇರೆ ರೀತಿಯಾಗಿಯೇ ಸಾಧನೆ ಮಾಡಬಹುದು ಕುವೆಂಪು ಮತ್ತು ರಾಜಕುಮಾರ್ ಅವರನ್ನು ಒಟ್ಟಿಗೆ ಇಟ್ಟಿರೋದು ಈ ಪುಸ್ತಕದ ವಿಶೇಷವಾಗಿದೆ.ಈ ಪುಸ್ತಕ ಕೇವಲ ನೆನಪುಗಳ ಸರ ಮಾಲೆಯಲ್ಲಾ, ಇದು ಸಂಶೋಧನೆ ಎಂದರು.
ನಟಿ ತಾರಾ ಅನೂರಾಧ ಮಾತನಾಡಿ, ನನ್ನನ್ನು ಕಲಾತ್ಮಕ ಚಿತ್ರಗಳಲ್ಲಿ ತೋರಿಸಿ ಕೊಟ್ಟವರು ಬರಗೂರು, ನಾನು ಅವರನ್ನು ಮೇಷ್ಟ್ರೇ ಎಂದು ಕರೆಯುತ್ತೇನೆ ನನ್ನ ಅತ್ತೆಯವರಿಗೆ ರಾಜಕುಮಾರ್ ಅಂದರೆ ಇಷ್ಟ. ಮದುವೆಯಾದ ಹೊಸದರಲ್ಲಿ ಪತಿ, ಅತ್ತೆಯೊಂದಿಗೆ ರಾಜಕುಮಾರ್ ಅವರ ಮನೆಗೆ ಹೋಗಿದ್ದೇವೆ. ಆ ಸಂದರ್ಭದಲ್ಲಿ ನನ್ನ ಅತ್ತೆ, ರಾಜಕುಮಾರ್ ಅವರ ಜೊತೆ ಮಾತನಾಡಬೇಕೆಂದಾಗ ರಾಜ್ ಅವರ ಬಳಿ ಹೋದ ಅತ್ತೆ, ಮಾತನಾಡುತ್ತಾ, ನಿಮ್ಮ ಹಲ್ಲು ಕಟ್ಟಿಸಿಕೊಂಡಿದ್ದಾ ಅಥವಾ ನಿಜವಾದದ್ದಾ? ಎಂದು ಪ್ರಶ್ನೆ ಮಾಡಿದರು.ಆದರೆ, ರಾಜಕುಮಾರ್ ಸಿಟ್ಟಾಗದೇ ನಗುತಾ, ಕಟ್ಟಿಸಿಕೊಂಡಿದ್ದು ಎಂದರು.ಆದರೆ, ಆಗ ನನಗೆ ಭಯ ಆಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ.ಶಮೀತಾ ಮಲ್ನಾಡ್ ಅವರ ತಂಡದಿಂದ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಹಾಡಲಾಯಿತು. ಜನ ಪ್ರಕಾಶನದ ಶೇಖರ ಮೂರ್ತಿ, ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ, ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








